ಟಿವಿ, ಮೊಬೈಲ್ ರಿಚಾರ್ಜ್ ಮಾಡಿದಂತೆ ಇನ್ನೂ ಮುಂದೆ ವಿದ್ಯುತ್ ಮೀಟರ್ ಗೂ ರಿಚಾರ್ಜ್ ಮಾಡುವ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಕೃಷಿಕರನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾಹಕರಿಗೆ 10 ಕೋಟಿ ಮೀಟರ್ ಗಳನ್ನು 2023 ರೊಳಗೆ ಅಳವಡಿಸಲು ನಿರ್ಧರಿಸಿದೆ. ವಿದ್ಯುತ್ ಬಿಲ್ ಕಲೆಕ್ಷನ್ ನಲ್ಲಿ ನಡೆಯುತ್ತಿರುವ ಅವ್ಯವಹಾರ, ವಿದ್ಯುತ್ ಸೋರಿಕೆ, ಹಾಗೂ ಕಳ್ಳತನ ಪ್ರಕರಣಗಳಿಗೆ ತಡೆ ಹಾಕುವುದರ ಜೊತೆಗೆ ಬಿಲ್ಲಿಂಗ್ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ.
ಏನಿದು ಪ್ರಿಪೇಯ್ಡ್ ಸ್ಮಾರ್ಟ್ ವಿದ್ಯುತ್ ಮೀಟರ್?
ಪ್ರಿಪೇಯ್ಡ್ ಮೀಟರ್ ಗಳು ಪ್ರಿಪೇಯ್ಡ್ ಮೊಬೈಲ್ ನಂತೆ ಕಾರ್ಯ ನಿರ್ವಹಿಸುತ್ತವೆ. ಮೊಬೈಲ್ ಟಿವಿಯಂತೆ ಈ ಮೀಟರ್ ಗಳಿಗೆ ರಿಚಾರ್ಜ್ ಮಾಡಬೇಕು. ರಿಚಾರ್ಜ್ ಮಾಡಿದರೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತದೆ. ಇಲ್ಲದಿದ್ದರೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತದೆ. ನಿಮಗೆ ಎಷ್ಟು ವಿದ್ಯುತ್ ಬೇಕೋ ಅಷ್ಟಕ್ಕೆ ಮೊದಲು ಹಣ ಕಟ್ಟಿ, ನಂತರ ವಿದ್ಯುತ್ ಬಳಸಬೇಕಾಗುತ್ತದೆ.
ಮಾರ್ಚ್ 25 ರೊಳಗೆ ದೇಶಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಲಾಗುವದು. ಡಿಸೆಂಬರ್ 2023ರೊಳಗೆ ಎಲ್ಲಾ ಬ್ಲಾಕ್ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲಾಗುವುದು ಎಂದು ವಿದ್ಯುತ್ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ರಿಪೇಯ್ಡ್ ಮೀಟರ್ ಗಳನ್ನು ಹೊಂದಲು ಇಚ್ಚಿಸುವ ಗ್ರಾಹಕರು ವಿದ್ಯುತ್ ಸಂಪರ್ಕ ಪಡೆಯಬಹುದು. ಈ ಸ್ಮಾರ್ಟ್ ಸೇವೆ ಪಡೆಯಲು ಗ್ರಾಹಕರು ಸ್ವತಃ ಪ್ರಿಪೇಯ್ಡ್ ಮೀಟರ್ ಅಳವಡಿಸಿಕೊಳ್ಳಬಹುದು ಅಥವಾ ಇಲಾಖೆಯಿಂದ ಅಳವಡಿಸಿಕೊಳ್ಳಬಹುದು. ವಿದ್ಯುತ್ ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ ಅಳವಡಿಸಿಕೊಂಡ ನಂತರ ಗ್ರಾಹಕರು ಮೊಬೈಲ್ ನಿಂದಲೇ ರಿಚಾರ್ಜ್ ಮಾಡಬೇಕು. ಮುಂಚಿತವಾಗಿ ಹಣವನ್ನು ಪಾವತಿಸಿ ವಿದ್ಯುತ್ ಖರೀದಿಸಬಹುದು. ಗ್ರಾಹಕರ ಖಾತೆಯಲ್ಲಿ ಲಭ್ಯವಿರುವ ಮೊತ್ತವನ್ನು ಆಧರಿಸಿ ಪ್ರಿಪೇಯ್ಡ್ ಮೀಟರ್ ಗಳು ಕಾರ್ಯನಿರ್ವಹಿಸುತ್ತವೆ. ಗ್ರಾಹಕರ ಖಾತೆಯಲ್ಲಿ ಹಣವಿಲ್ಲದಿದ್ದರೆ ವಿದ್ಯುತ್ ಪೂರೈಕೆ ಕಡಿತಗೊಳ್ಳುತ್ತದೆ.
ಪ್ರಿಪೇಯ್ಡ್ ಮೀಟರ್ ಯೋಜನೆ ಜಾರಿಗೆ ಬಂದರೆ ಎಲ್ಲವೂ ಸ್ವಯಂ ಚಾಲಿತ ವ್ಯವಸ್ಥೆಗೆ ಒಳಪಡುತ್ತದೆ. ಮುಂಗಡವಾಗಿ ಹಣ ಸಂದಾಯವಾಗುವುದರಿಂದ ಎಸ್ಕಾಂಗಳ ತಲೆನೋವು ಕಡಿಮೆಯಾಗುತ್ತದೆ. ವಿದ್ಯುತ್ ಬಳಕೆಯಷ್ಟೇ ಹಣ ಪಾವತಿಸಬೇಕಾಗುತ್ತದೆ.
ಪ್ರಿಪೇಯ್ಡ್ ಮೀಟರ್ ಯೋಜನೆ ಜಾರಿಗೆ ಬಂದರೆ ಹಾಲಿ ಇರುವ ಪೋಸ್ಟ್ ಪೇಯ್ಡ್ ಮೀಟರ್ ವ್ಯವಸ್ಥೆ ರದ್ದುಗೊಳ್ಳಲಿದೆ. ಆರಂಭದಲ್ಲಿ ಸರ್ಕಾರಿ ಕಚೇರಿಗಳಿಗೆ ಇದನ್ನು ಜಾರಿಗೆ ತರಲಾಗುತ್ತಿದೆ. ನಂತರ ಗೃಹ ಬಳಕೆಯ ಗ್ರಾಹಕರಿಗೂ ಜಾರಿಗೆ ತರಲಾಗುವುದು.
ಪ್ರಿ ಪೇಯ್ಡ್ ಮೀಟರ್ ರಿಚಾರ್ಜ್ ಮಾಡುವುದು ಹೇಗೆ?
ಮೊಬೈಲ್ ಟಿವಿಯಂತೆ ಪ್ರಿಪೇಯ್ಡ್ ವಿದ್ಯುತ್ ಮೀಟರ್ ಗೆ ರಿಚಾರ್ಜ್ ಮಾಡಬೇಕಾಗುತ್ತದೆ. ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿ ವಿದ್ಯುತ್ ಖರೀದಿಸಬಹುದು. ಆನ್ಲೈನ್ ವ್ಯವಸ್ಥೆ ಗ್ರಾಹಕರಿಗೆ ತೊಂದರೆಯಾದರೆ ಹತ್ತಿರದ ವಿದ್ಯುತ್ ವಿತರಣಾ ಕಚೇರಿಗಳಿಗೆ ತೆರಳಿ ಹಣ ಪಾವತಿಸಬೇಕಾಗುತ್ತದೆ.
ರೈತರ ಕೃಷಿ ಪಂಪ್ ಸೆಟ್ ಗಳಿಗೂ ಪ್ರಿಪೇಯ್ಡ್ ಸ್ಮಾರ್ಟ್ ಪ್ರಿಪೇಯ್ಡ್ ಅಳವಡಿಕೆ ಮಾಡಲಾಗುವುದೇ?
ರೈತರ ಕೃಷಿ ಪಂಪ್ ಸೆಟ್ ಗಳಿಗೂ ವಿದ್ಯುತ್ ಮೀಟರ್ ಅಳವಡಿಕೆ ಮಾಡಿ ಶುಲ್ಕ ವಸೂಲಿ ಮಾಡಿದ ನಂತರ ಸರ್ಕಾರದಿಂದ ರೈತರಿ ಮರುಪಾವತಿ ಮಾಡುವ ವಿವಾದಿತ ನಿಯಮವನ್ನು ಒಳಗೊಂಡ ಮಸೂದೆಗೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆಯಾದರೆ ಖಾಸಗಿ ಕಂಪನಿಗಳು ರೈತರ ಶೋಷಣೆ ಮಾಡಲಿವೆ. ಇದರಿಂದ ಕೃಷಿ ಚಟುವಟಿಕೆಗಳನ್ನೇ ಮಾಡಲಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಭಾಗ್ಯಜ್ಯೋತಿ, ಕುಟೀರ್ ಜ್ಯೋತಿ ಸೇರಿದಂತೆ ಇನ್ನಿತರ ರೀತಿಯಲ್ಲಿ ನೀಡಲಾಗುವ ಉಚಿತ ವಿದ್ಯುತ್ ಬಂದ್ ಆಗಲಿದೆ ಎಂಬ ಆತಂಕವಿದೆ. ಆರಂಭದಲ್ಲಿ ಸರ್ಕಾರ ಪ್ರೋತ್ಸಾಹಧನ ನೀಡಿ ನಂತರ ಸ್ಥಗಿತಗೊಳಿಸುವ ಸಾಧ್ಯತೆಯಿರುತ್ತದೆ ಎನ್ನಲಾಗುತ್ತಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿಸಿಕೊಂಡರೆ ನಂತರ ಅನಿವಾರ್ಯವಾಗಿ ರಿಚಾರ್ಜ್ ಮಾಡಿ ವಿದ್ಯುತ್ ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ.