ಹಾಸ್ಟೆಲ್ ಮತ್ತು ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಶಾಲೆಗಳಲ್ಲಿ ಬಿಸಿಯೂಟ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಸಿರಿಧಾನ್ಯ ನೀಡಲು ನೀರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಅವರು ಹುಬ್ಬಳ್ಳಿ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬದ ಎ.ಪಿ.ಎಂ.ಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರ ದಾಸ್ತಾನು ಮಳಿಗೆ, ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಕೇಂದ್ರ ಹಾಗೂ ಕೃಷಿ ಯಂತ್ರಧಾರೆ ಉದ್ಘಾಟಿಸಿ ಮಾತನಾಡಿದರು
ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಲು ಹಾಗೂ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರದಿಂದ ನಡೆಸುತ್ತಿರುವ ನಡೆಸುತ್ತಿರುವ ಹಾಸ್ಟೆಲ್ ಹಾಗೂ ಬಿಸಿಯೂಟದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಯುಕ್ತ ಸಿರಿಧಾನ್ಯಗಳ ಆಹಾರ ನೀಡಲು ತೀರ್ಮಾನಿಸಲಾಗಿದೆ. ಸಿರಿಧಾನ್ಯ ಪ್ರೋತ್ಸಾಹಿಸುವ ಕುರಿತು ಆಯ್ಯವ್ಯಯ ಮುಂಗಡ ಸಭೆಯಲ್ಲಿ ಚರ್ಚಿಸಲಾಗಿದೆ. ಬಿಸಿಯೂಟ ಹಾಗೂ ಹಾಸ್ಟೆಲ್ ಗಳಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಸಿರಿಧಾನ್ಯಗಳ ಬೆಲೆ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ. ಮೊದಲ ಹಂತದಲ್ಲಿ ಕೃಷಿ.ವಿಶ್ವವಿದ್ಯಾಲಯಗಳ ಹಾಸ್ಟೆಲ್ ಗಳಲ್ಲಿ ವಾರದಲ್ಲಿ ಒಂದು ದಿನ ಮಧ್ಯಾಹ್ನ ಊಟದಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಆಹಾರ ನೀಡುವ ಕುರಿತು ತೀರ್ಮಾನ ಮಾಡಲಾಗಿದೆ ಎಂದರು.
ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ ಕುರಿತು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ. ನೋಂದಣಿ ಜೊತೆಗೆ ಖರೀದಿಯನ್ನು ಸಹ ಆರಂಭಿಸಲಾಗಿದೆ. ತಡ ಮಾಡದೆ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು. ಕ್ವಿಂಟಾಲ್ಗೆ .5100 ರೂಪಾಯಿ ನಿಗದಿ ಮಾಡಲಾಗಿದೆ. ಮೂರು ತಿಂಗಳು ಖರೀದಿ ಕೇಂದ್ರದಲ್ಲಿ ಕಡಲೆಕಾಳು ಖರೀದಿಸಲಾಗುವುದು ಎಂದು ಹೇಳಿದರು.
ಯಂತ್ರಧಾರೆ ಯೋಜನೆಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜೊತೆಗೆ ಹಲವು ಸಂಸ್ಥೆಗಳು ಸಹ ನಿರ್ವಹಿಸುತ್ತವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಖರೀದಿಸುವ ಯಂತ್ರಗಳಿಗೆ ಕೃಷಿ ಇಲಾಖೆಯಿಂದ ಶೇ.70 ರಷ್ಟು ಸಹಾಯಧನ ನೀಡಲಾಗುತ್ತದೆ. ರೈತರಿಗೆ ಬೆಳ ಕಟಾವು ಮಾಡುವಲ್ಲಿ ತಗುಲುವ ವೆಚ್ಚ ಯಂತ್ರಗಳಿಂದ ಕಡಿಮೆಯಾಗುತ್ತದೆ. ಗೋಧಿ ಕಟಾವಿಗೆ ರೂ. 6000 ವೆಚ್ಚವಾದರೆ, ಯಂತ್ರಾಧಾರಿತ ಕಟಾವಿಗೆ ರೂ.1200 ತಗಲುತ್ತಿದೆ. ರೂ.4800 ರೈತರಿಗೆ ಉಳಿತಾಯವಾಗುತ್ತದೆ ಎಂದರು.
ಕೃಷಿ ಮಿತ್ರ ಯೋಜನೆಯಡಿ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಘೋಷಣೆ ಮಾಡು ನಿರೀಕ್ಷೆಯಿದೆ ಎಂದರು.