National Science day ಪ್ರತಿವರ್ಷ ಪೆಬ್ರವರಿ 28 ರಂದು ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತದೆ. ಫೆ. 28 ರಂದೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ (national science day) ಏಕೆ ಆಚರಿಸಲಾಗುತ್ತದೆ ಎಂಬುದು ನಿಮಗೆ ಗೊತ್ತೇ….. ಇಲ್ಲಿದೆ ಮಾಹಿತಿ.
ರಾಮನ್ ಬೆಳಕಿನ ಚದುರಿಕೆಯ ಪರಿಣಾಮ
1928 ರ ಫೆಬ್ರವರಿ 28 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ. ಸಿ.ವಿ. ರಾಮನ್ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದರು. ಮುಂದೆ ಆ ಸಂಶೋಧನೆ ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಎಂದು ಜಗತ್ಪ್ರಸಿದ್ಧಿಯಾಯಿತು. ಹೀಗಾಗಿ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಎಂದು ನಿಗದಿ ಪಡಿಸುವಂತೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು (NCSTC) ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಎನ್ಸಿಎಸ್ಟಿಸಿ’ಯ ಈ ಮನವಿಯನ್ನು ಸರ್ಕಾರ ಒಪ್ಪಿದನಂತರ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಲಾಯಿತು. ನಂತರ ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು 1987 ರ ಫೆ.28 ರಂದು ಆಚರಣೆ ಮಾಡಲಾಯಿತು. 1987 ರಿಂದ ದೇಶಾದ್ಯಂತ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯುತ್ತಿದೆ.
ವಿಶ್ವಕ್ಕೆ ‘ರಾಮನ್ ಎಫೆಕ್ಟ್’ ಸಿದ್ಧಾಂತ ನೀಡಿದ ದಿನ
ರಾಮನ್ ಪರಿಣಾಮ ಹಲವು ಆವಿಷ್ಕಾರಗಳಿಗೆ ಎಡೆಮಾಡಿತು. ಹಲವು ವರ್ಷಗಳ ಸತತ ಅಧ್ಯಯನ ಮತ್ತು ಪ್ರಯೋಗಳ ನಂತರ ರಾಮನ್ ಪರಿಣಾಮ ಫಲನೀಡಿತ್ತು. ಈ ಸಂಶೋಧನೆಗಾಗಿಯೇ 1930 ರಲ್ಲಿ ಸಿ.ವಿ. ರಾಮನ್ ರವರಿಗೆ ನೋಬೆಲ್ ಪಾರಿತೋಷಕ ಲಭಿಸಿತು. ವಿಜ್ಞಾನ ವಿಭಾಗದಿಂದ ನೊಬೆಲ್ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಖ್ಯಾತಿ ರಾಮನ್ ರವರಿಗಿದೆ.
ಸಿ ವಿ ರಾಮನ್ ಜೀವನ ಚರಿತ್ರೆಯ ಕಿರು ಪರಿಚಯ
ಸಿ ವಿ ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್. ಅವರು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ 1888ರ ನವೆಂಬರ್ 7ರಂದು ರಂದು ಜನಸಿದರು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ಅಂದಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ ರಾಮನ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಗಳಿಸುವ ಮೂಲಕ ಕಲ್ಕತ್ತೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು. ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರಲ್ಲಿ ವಿಜ್ಞಾನದ ಕಡೆಗಿನ ತುಡಿತ ಹಾಗೆಯೇ ಉಳಿದಿತ್ತು. ಅದರ ಪರಿಣಾಮವಾಗಿ ಅವರು ತಮ್ಮ ಹುದ್ದೆಯನ್ನು ತ್ಯಜಿಸಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದರು, ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಬೆಂಗಳೂರಿಗೆ ಬಂದವರು ತಮ್ಮ ಕೊನೆಯ ಉಸಿರಿನ ತನಕ ವಿವಿಧ ಸಂಶೋಧನೆಗಳಲ್ಲಿ ಮಗ್ನರಾಗಿದ್ದರು.
ಇದನ್ನೂ ಓದಿ : Student Scholarship status ಮೊಬೈಲ್ ನಲ್ಲಿ ಚೆಕ್ ಮಾಡಿ
ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು.