ಇಂದು ವಿಶ್ವ ಗುಬ್ಬಚ್ಚಿ ದಿನ, ಗುಬ್ಬಚ್ಚಿ ದಿನ ಏಕೆ ಆಚರಿಸುತ್ತಾರೆ? ಮಾಹಿತಿ ಇಲ್ಲಿದೆ

Written by By: janajagran

Updated on:

ದಿನಾಚರಣೆಗಳೆಂದ ತಕ್ಷಣ ಕಣ್ಮುಂದೆ ಸಾವಿರಾರು ದಿನಾಚರಣೆಗಳು ಹಾದುಹೋಗುತ್ತವೆ. ಮಕ್ಕಳದಿನಾಚರಣೆ, ಮಹಿಳಾ ದಿನಾಚರಣೆ, ತಂದೆ, ತಾಯಿ ಹೀಗೆ ನಾನಾ ರೀತೀಯ ದಿನಾಚರಣೆಗಳು. ಅಷ್ಟೇ ಮಹಾನ್ ವ್ಯಕ್ತಿಯ ಹುಟ್ಟುಹಬ್ಬದಂಗವಾಗಿ ಸಹ ಹಲವಾರು ದಿನಾಚರಣೆಗಳನ್ನು ಆಚರಿಸಲಾಗುತ್ತದೆ.

ಅದೇ ರೀತಿ ಪ್ರಾಣಿಗಳಲ್ಲಿಯೂ ಸಹ ಹುಲಿ, ಸಿಂಹ, ಆನೆ, ಚಿರತೆ, ಡಾಲ್ಫಿನ್ ಹೀಗೆ ಬಗೆ ಬಗೆಯ ಪ್ರಾಣಿಗಳ ಸಂರಕ್ಷಣೆಗಾಗಿ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ.  ಸಣ್ಣ ಗುಬ್ಬಚ್ಚಿಗಳ ದಿನಾಚರಣೆ ಇದೆ ಎಂದರೆ ನಂಬಲಕ್ಕಿಲ್ಲ. ಹೌದು, ಮಾರ್ಚ್ 20 ರಂದು (World sparrow day) ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುವುದು.

ಹಿಂದೆ ಒಂದು ಕಾಲವಿತ್ತು. ಹಚ್ಚ ಹಸಿರಿನ ಪರಿಸರ, ನಿರ್ಮಲವಾದ ಗಾಳಿ, ಬೆಳಗಿನ ಜಾವ ಎದ್ದ ಕೂಡಲೇ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳ ಸದ್ದು. ಆದರೆ, ಇಂದಿನ ಜಾಗತಿಕ ಯುಗದಲ್ಲಿ ಯಾಂತ್ರೀಕರಣದ ಬರದಲ್ಲಿ ಕೇಳಿಸುತ್ತಿಲ್ಲ ಗುಬ್ಬಚ್ಚಿಗಳ ಚಿಲಿಪಿಲಿ ಸದ್ದು. ಬೆಳೆಯುತ್ತಲೇ ಇರುವ ತಂತ್ರಜ್ಞಾನದ ನಾಗಾಲೋಟಕ್ಕೆ ಗುಬ್ಬಚ್ಚಿ ಸಹಿತ ಅನೇಕ ಜೀವ ಸಂಕುಲಗಳು ನಮ್ಮ ಜೀವನದಿಂದ ಕಣ್ಮರೆಯಾಗುತ್ತಿವೆ.

ಗುಬ್ಬಿ ಗುಬ್ಬಿ ಗುಬ್ಬಚ್ಚಿ ಚಿಂವ್ ಚಿಂವ್ ಅಂತ ಒದರುತ್ತಿ ಪುಟ್ಟಗೂಡು ಕಟ್ಟಿಕೊಂಡು ಚಿಕ್ಕದಾಗಿ ಇರುತ್ತಿ… ಎಂಬ ಡಾ.ಪ್ರಭು ಗಂಜಿಹಾಳ್ ಅವರ ಈ ಪುಟ್ಟ ಕವನ ಗುಬ್ಬಚ್ಚಿ ಜೀವನ ಶೈಲಿಯನ್ನು ಸರಳವಾಗಿ ಕಟ್ಟಿಕೊಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಕಣ್ಮರೆಯಾಗುತ್ತಿವೆ.  ಮಕ್ಕಳಿಗೆ ಗುಬ್ಬಚ್ಚಿ ಎಂದರೆ ಪುಸ್ತಕಗಳಲ್ಲಿ ತೋರಿಸುವಂಥ ಪರಿಸ್ಥಿತಿ ಎದುರಾಗಿದೆ.

ನಗರಗಳಲ್ಲಿ ವಿನಾಶದ ಅಂಚಿನಲ್ಲಿರುವ ಗುಬ್ಬಚ್ಚಿಗಳು ಮತ್ತು ಇತರೆ ಸಾಮಾನ್ಯ ಹಕ್ಕಿಗಳ ಬಗ್ಗೆ ಅರಿವು ಮೂಡಿಸಿ ಅವುಗಳ ಸಂಖ್ಯೆ ಅಭಿವೃದ್ಧಿ ಪಡಿಸಲು 2010ರಿಂದ ಭಾರತದ ನೇಚರ್ ಫಾರ್-ಎವರ್ ಸೊಸೈಟಿ ಮತ್ತು ಫ್ರಾನ್ಸ್‌ನ ಎಕೋ-ಸಿಸ್ ಆಕ್ಷನ್ ಫೌಂಡೇಶನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ ದಿನಾಚರಣೆ ನಡೆಯುತ್ತಿದೆ.

ಒಂದು ಕಾಲದಲ್ಲಿ ದೇಶದ ಬೆನ್ನಲುಬು ರೈತ ಬೆಳೆದ ಬೆಳೆಗಳಿಗೆ ರಕ್ಷಣೆ ಒದಗಿಸುತ್ತಿದ್ದವು. ಚಿಟ್ಟೆ, ಹುಳುಗಳು, ಅನೇಕ ಸಣ್ಣ ಹುಳುಗಳು ಗುಬಚ್ಚಿಗಳ ಪ್ರಮುಖ ಆಹಾರವಾಗಿತ್ತು. ಈಗ ಅವುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಉತ್ತಮ ಮಳೆಯಾಗದ ಕಾರಣ,  ರೈತರ ಬೆಳೆಗಳಿಗೆ ಹೆಚ್ಚು ರಾಸಯನಿಕ ಔಷಧಿಗಳು ಸಿಂಪಡಿಸುವುದರಿಂದ ಅವುಗಳು ಕಾಣದಂತಾಗಿದೆ. ರಾಸಾಯನಿಕ ಪದಾರ್ಥಗಳಿಂದ, ಮೊಬೈಲ್‌ ಟವರ್‌ಗಳು ಗುಬ್ಬಚ್ಚಿಗಳು ಅಳಿವಿನಂಚಿನಲ್ಲಿರುವಂತಾಗಿದೆ.

ರೈತರ ಹೊಲಗಳಲ್ಲಿ ಬೆಳೆ ಕಟಾವು ಮುಗಿಯುತ್ತಿದ್ದಂತೆ ಒಂದೊಂದೇ ಹುಲ್ಲಿನ ತುಂಡು ಹೆಕ್ಕುತ್ತ ಸಾಗುವ ತವಕ ಸೋಜಿಗವನ್ನು ಉಂಟುಮಾಡುತ್ತಿತ್ತು. ಮುಂಗಾರಿಗೂ ಮುನ್ನ ಗೂಡು ಕಟ್ಟಿಕೊಂಡು ಮರಿಗಳೊಡನೆ ಹಾಡುವ ಗಾನದ ಪುಳಕಕ್ಕೆ ಮಕ್ಕಳು ಕಿವಿಯಾನಿಸಿ ಆಲಿಸುತ್ತಿದ್ದರು. ಬಿಸಿಲಿನ ಬೇಗೆ ಏರುತ್ತಿದ್ದಂತೆ ಪುಟ್ಟ ಪುಟ್ಟ ನೀರಿನ ಒರತೆಗಳ ಬಳಿ ಮಿಂದೆದ್ದು ಸಂಭ್ರಮಿಸುವ ಗುಬ್ಬಿಗಳ ಕಿಚಕಿಚ ಶಬ್ದ ಮಕ್ಕಳ ಸ್ಫೂರ್ತಿಗೆ ಕಾರಣವಾಗುತ್ತಿತ್ತು.. ಆದರೆ, ಇಂತಹ ಸಂತಸ-ಸಡಗರ ತಂದೊಡ್ಡುತ್ತಿದ್ದ ಗುಬ್ಬಚ್ಚಿ ಸಂಸಾರದ ಗುನುಗು, ಗುಂಗು ಈಗ ಕಾಣದಾಗಿದೆ.

ಗ್ರಾಮೀಣ ಭಾಗಗಳ ಮನೆಯಂಗಳಗಳಲ್ಲಿ ಈಗಲೂ ನೇಸರನ ಆಗಮನದೊಂದಿಗೆ ಚೆಲ್ಲಾಟ ಆಡುವ ಹಕ್ಕಿಗಳನ್ನು ಕಾಣಬಹುದು. ಅವುಗಳಲ್ಲಿ ಗುಬ್ಬಚ್ಚಿಗಳದ್ದೇ ಕಾರುಬಾರು. ಮುಂಜಾನೆ ಬಂದು ಕಾಳು ಹೆಕ್ಕಿ ಪರಿಸರವನ್ನು ಸ್ವಚ್ಛಗೊಳಿಸುತ್ತವೆ. ಈಗ ಗುಂಪುಗಳಿಗೆ ಬದಲಾಗಿ ಬೆರಳೆಣಿಕೆಯಲ್ಲಿ ಆಗಮಿಸುತ್ತಿವೆ. ಈಗಲೂ, ಭಯ ಇಲ್ಲದೆ ಜನ ಜಂಗುಳಿಯ ನಡುವೆ ಹಾದು ಬರುವ ಗುಬ್ಬಚ್ಚಿಗಳ ದರ್ಶನ ನಿಸರ್ಗದ ಚಲುವನ್ನು ವಿಸ್ತರಿಸುತ್ತದೆ ಎನ್ನುತ್ತಾರೆ ಪಕ್ಷಿ ಪ್ರಿಯರು.

ಗುಬ್ಬಿಚ್ಚಿ ಉಳಿಸಲು ಏನು ಮಾಡಬಹುದು (What to do for save sparrow) ?

‘ಬೇಸಿಗೆ ಅವಧಿಯಲ್ಲಿ ಮನೆಗಳ ಮುಂದೆ ಶುದ್ಧ ನೀರು ಮತ್ತು ಕಾಳನ್ನು ಇಟ್ಟು ಗುಬ್ಬಚ್ಚಿಗಳ ಜೀವ ಸಂಕುಲವನ್ನು ಉಳಿಸಬೇಕು. ತಾರಸಿ ಕಟ್ಟಡಗಳ ಬಳಿಯೂ ಗೂಡುಗಳ ಮಾದರಿಯನ್ನು ಇಟ್ಟು ಸಂರಕ್ಷಣೆಗೆ ಮುಂದಾಗಬೇಕು. ಕೃಷಿಯಲ್ಲಿ ಕೀಟ ನಾಶಕಗಳ ಬಳಕೆ ನಿಯಂತ್ರಿಸಬೇಕು ಎನ್ನುತ್ತಾರೆ ಪಕ್ಷಿ ಪ್ರಿಯರು..

ವಿಶ್ವ ಗುಬ್ಬಚ್ಚಿ ದಿನ ಯಾವಾಗ ಆಚರಿಸುತ್ತಾರೆ (When does celebrate sparrrow day) ?

ವಿಶ್ವ ಗುಬ್ಬಚ್ಚಿ ದಿನವನ್ನು ಪ್ರತಿವರ್ಷ ಮಾರ್ಚ್ 20 ರಂದು ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ.

ವಿಶ್ವ ಗುಬ್ಬಚ್ಚಿ ದಿನವನ್ನು ಏಕೆ ಪ್ರಾರಂಭಿಸಿದರು (Why we celebrate the World Sparrow Day)?

ನಗರಗಳಲ್ಲಿ ವಿನಾಶದ ಅಂಚಿನಲ್ಲಿರುವ ಗುಬ್ಬಚ್ಚಿಗಳು ಮತ್ತು ಇತರೆ ಸಾಮಾನ್ಯ ಹಕ್ಕಿಗಳ ಬಗ್ಗೆ ಅರಿವು ಮೂಡಿಸಿ ಅವುಗಳ ಸಂಖ್ಯೆ ಅಭಿವೃದ್ಧಿ ಪಡಿಸಲು 2010ರಿಂದ ಭಾರತದ ನೇಚರ್ ಫಾರ್-ಎವರ್ ಸೊಸೈಟಿ ಮತ್ತು ಫ್ರಾನ್ಸ್‌ನ ಎಕೋ-ಸಿಸ್ ಆಕ್ಷನ್ ಫೌಂಡೇಶನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ ದಿನಾಚರಣೆ ನಡೆಯುತ್ತಿದೆ

Leave a Comment