2022-23 ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವೈಯಕ್ತಿಕ ಕೊಳವೆ ಬಾವಿ ಕೊರೆಸಿ ಪಂಪ್ ಸೆಟ್ ಅಳವಡಿಸಲು 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ನೀರಾವರಿ ಸೌಲಭ್ಯವಿಲ್ಲದ ರೈತರಿಗೆ ಈ ಯೋಜನೆ ಅನುಕೂಲವಾಗಲಿದೆ. ರೈತರ ಒಣ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದಕ್ಕಾಗಿ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯಡಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರ ಜಿಲ್ಲೆಗಳಲ್ಲಿ ಘಟಕವೆಚ್ಚ 4.50 ಲಕ್ಷ ರೂಪಾಯಿಗಳಿದೆ. ಇದರಲ್ಲಿ ರೈತರಿಗೆ 4 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. ಉಳಿದ 50 ಸಾವಿರ ರೂಪಾಯಿಯನ್ನು ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಘಟಕ ವೆಚ್ಚದ ಪ್ರತಿ ಕೊಳವೆ ಬಾವಿಗೆ 50 ಸಾವಿರ ರೂಪಾಯಿಯನ್ನು ನೇರವಾಗಿ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು.
ಉಳಿದ 24 ಜಿಲ್ಲೆಗಳಲ್ಲಿ ಘಟಕ ವೆಚ್ಚ 3.50 ಲಕ್ಷ ರೂಪಾಯಿಗಳಿದ್ದು, ಇದರಲ್ಲಿ ರೈತರಿಗೆ 3 ಲಕ್ಷ ರೂಪಾಯಿ ಹಾಗೂ 50 ಸಾವಿರ ರೂಪಾಯಿ ಸಾಲವಾಗಿರುತ್ತದೆ. ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಘಟಕ ವೆಚ್ಚದ ಪೈಕಿ ಪ್ರತಿ ಕೊಳವೆ ಬಾವಿಗೆ 50 ಸಾವಿರ ರೂಪಾಯಿಯನ್ನು ನೇರವಾಗಿ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನಾಂಕವಾಗಿದೆ.
ಆಯಾ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಸುವಿಧಾ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಈ
https://suvidha.karnataka.gov.in
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸುವಿಧಾ ತಂತ್ರಾಂಶದ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ಮಾಹಿತಿಗಳನ್ನು ರೈತರು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಸಿಎಸ್.ಸಿ ಕೇಂದ್ರಗಳಲ್ಲಿಯೂ ಸುವಿಧಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿಯೊಂದಿಗೆ ಈ ದಾಖಲೆ ಸಲ್ಲಿಸಿ
ಅರ್ಜಿದಾರರು ಇತ್ತೀಚಿನ ಫೋಟೋ ಹೊಂದಿರಬೇು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಪಹಣಿ (ಆರ್.ಟಿ.ಸಿ) ಇರಬೇಕು. ಸಣ್ಣ ರೈತರ ಪತ್ರ ಇರಬೇಕು. ಆಧಾರ್ ಕಾರ್ಡ್ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಅರ್ಹತೆ
ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು. ಅರ್ಜಿದಾರರು ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ ಅರೆ ಸರ್ಕಾರಿ ನೌಕರಿಯಲ್ಲಿರಬಾರದು.
ಇದನ್ನೂಓದಿ : ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯಡಿ ನಿಮ್ಮ ಮಗುವಿನ ಹೆಸರಿಗೆ ಎಷ್ಟು ಹಣ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಅರ್ಜಿದಾರರು ಅಥವಾ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ1.50 ಲಕ್ಷ ರೂಪಾಯಿ ನಗರ ಪ್ರದೇಶದವರಿಗೆ 2 ಲಕ್ಷ ಮಿತಿಯೊಳಗಿರಬೇಕು.
ಗಂಗಾ ಕಲ್ಯಾಣ ಯೋಜನೆ ಕುರಿತಂತೆ ಈ ಸಹಾಯವಾಣಿ ನಂಬರಿಗೆ ಕರೆ ಮಾಡಿ
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್ವೆಲ್ ಕೊರೆಯಲು ಅರ್ಜಿ ಸಲ್ಲಿಸಲು ಅರ್ಜಿ ಕುರಿತಂತೆ ಇನ್ನಿತರ ಮಾಹಿತಿಗಾಗಿ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ ಎಸ್.ಟಿ ಸಹಾಯವಾಣಿ 9482 300 400 ಗೆ ಕರೆ ಮಾಡಬಹುದು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಆಯಾ ನಿಗಮದಡಿಯಲ್ಲಿ ಬರುವ ರೈತರು ತಮಗೆ ಸಂಬಂಧಿಸಿದ ನಿಗಮದ ಕಚೇರಿಗೆ ಸಂಪರ್ಕಿಸಬಹುದು.