2022-23ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಸಪೋಟ, ಬಾಳೆ, ಪಪ್ಪಾಯ, ತರಕಾರಿ ಹಾಗೂ ಇತರೆ ತೋಟಗಾರಿಕೆ ಬೆಳೆಗಳಿಗೆ ಅನುಮೋದಿತ ಹನಿ ನೀರಾವರಿ ಅಳವಡಿಸಿಕೊಳ್ಳಲು ವಿವಿಧ ಕಂಪನಿಗಳಿಂದ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಫಲಾನುಭವಿಗಳಿಗೆ ತರಕಾರಿ ಹಾಗೂ ಹೂವಿನ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಹಾಗೂ ಇತರೆ ಬೆಳೆಗಳಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರಿಗೆ ಸಹಾಯಧನ ಲಭ್ಯವಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಶೇ. 75 ರಷ್ಟು, ತದನಂತರ 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಕಂದಾಯ ಇಲಾಖೆಯಿಂದ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ ಸಲ್ಲಿಸಬೇಕು. ಇತರೆ ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಶೇ. 90 ರಷ್ಟು ತದನಂತರ 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಎಸ್.ಪಿ. ಸೌಮ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಇದರೊಂದಿಗೆ ಜಮೀನಿನ ಪಹಣಿ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಬ್ಯಾಂಕ್ ಪಾಸು ಬುಕ್ ನಲ್ಲಿ ಹೆಸರಿರಬೇಕು. ನೀರಾವರಿ ಸೌಲಭ್ಯವಿಲ್ಲವೆಂದು ಅರ್ಜಿಯಲ್ಲಿ ನಮೂದಿಸಬೇಕು. ಇನ್ನಿತರ ದಾಖಲೆಗಳನ್ನು ತೋಟಗಾರಿಕೆ ಇಲಾಖೆಯಲ್ಲಿ ವಿಚಾರಿಸಿ ಸಲ್ಲಿಸಬೇಕು. ಫಲಾನುಭವಿಯು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು.
ಫಲಾನುಭವಿಯ ಅರ್ಹತೆಗಳು
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆಯುವ ರೈತರ ಹೆಸರಿಗೆ ಜಮೀನು ಇರಬೇಕು. ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು. ಮಹಿಳೆಯರ ಹೆಸರಿನಲ್ಲಿ ಖಾತೆ ಹೊಂದಿದ್ದಲ್ಲಿ ಮಹಿಳಾ ಖಾತೆದಾರರೇ ಅರ್ಜಿ ಸಲ್ಲಿಸಬೇಕು. ಫಲಾಭವಿಯು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಾಗಿರಬೇಕು ಅಥವಾ ತೋಟಗಾರಿಕೆ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು. ರೈತರು ನೀರಾವರಿ ಮೂಲವನ್ನು ಹೊಂದಿರಬೇಕು. ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವಂತಹ ನೀರನ್ನು ಹೊಂದಿರಬೇಕು. ರೈತರು ಈ ಹಿಂದೆ ಸಹಾಯಧನ ಪಡೆದಿದ್ದಲ್ಲಿ ಅದನ್ನು ಸೇರಿದಂತೆ ಗರಿಷ್ಠ 5 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಏನಿದು ಪ್ರಧಾನಂತ್ರಿ ಕೃಷಿ ಸಿಂಚಾಯಿ ಯೋಜನೆ?
ರೈತರ ಜಮೀನುಗಳಿಗೆ ನೀರಿನ ಕೊರತೆಯಾಗದಂತೆ ಸರ್ಕಾರದ ವತಿಯಿಂದ ಸಹಾಯಧನದಲ್ಲಿ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳಿಗೆ ನೀರಿನ ಸೌಲಭ್ಯ ಒದಗಿಸುವುದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ : ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೋ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸ್ಪ್ರಿಂಕ್ಲರ್ ಹಾಗೂ ಹನಿ ನೀರಾವರಿ ಮೂಲಕ ಕಡಿಮೆ ನೀರಲ್ಲೂ ಉತ್ತಮ ಫಸಲು ಪಡೆಯಬಹುದು. ಸ್ಪ್ರಿಂಕ್ಲರ್ ಉಪಕರಣಗಳನ್ನು ಖರೀದಿಸಲು ಸರ್ಕಾರವು ಸಹಾಯಧನ ನೀಡಲಿದೆ. ಹೌದು ಸರ್ಕಾರದ ವತಿಯಂದ ಶೇ. 45 ರಿಂದ 90 ರವರೆಗೆ ಸಹಾಯಧನ ರೈತರಿಗೆ ನೀಡಲಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.