ಹೈನುಗಾರಿಕೆ ಮಾಡಲಿಚ್ಚಿಸುವ ರೈತರಿಗೆ ಸಂತಸದ ಸುದ್ದಿ. ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತಂತೆ ಉಚಿತವಾಗಿ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕಲಬುರಗಿ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಏಪ್ರೀಲ್ 18 ರಿಂದ 27 ರವರೆಗೆ ಹತ್ತು ದಿನಗಳ ಕಾಲ ಉಚಿತವಾಗಿ ತರಬೇತಿ ಆಯೋಜಿಸಲಾಗಿದೆ. ಹೈನುಗಾರಿಕೆ ಹಾಗೂ ಎರೆಹುಳ ಗೊಬ್ಬರ ತಯಾರಿಕೆ ಕುರಿತು 10 ದಿನಗಳ ಕಾಲ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತರಬೇತಿ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಅಭ್ಯರ್ಥಿಗಳು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. 18 ರಿಂದ 45 ವಯೋಮಾನದೊಳಗಿರಬೇಕು. ಬಿಪಿಎಲ್ ಕಾರ್ಡ್ ಹೊಂದಿರಬೇಕು. ಎಮ್.ಜಿ.ಎನ್.ಆರ್.ಇಜೆಎಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಏಪ್ರೀಲ್ 16 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪ್ರತಿ ದಿನ ಬೆಳಗ್ಗೆ 9.30 ರಿಂದ ಸಾಯಂಕಾಲ 5.30 ರವರೆಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ ಇದೇ ಏಪ್ರೀಲ್ 16 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ತರಬೇತಿ ಸಂಸ್ಥೆಯನ್ನು ಅಥವಾ ಮೊಬೈಲ್ ಸಂಖ್ಯೆ 9243602888, 9886781239 ಹಾಗೂ 9900135705 ಗೆ ಸಂಪರ್ಕಿಸಲು ಕೋರಲಾಗಿದೆ.
ಪಶುಪಾಲಕರಿಗೆ ಉಚಿತ ಸಹಾಯವಾಣಿ
ಪಶುಪಾಲನೆ ಮಾಡುವ ರೈತರಿಗಾಗಿ ರಾಜ್ಯ ಸರ್ಕಾರವು ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. 24*7 ಗಂಟೆಗಳ ಕಾಲ ಈ ಉಚಿತ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಉಚಿತ ಸಹಾಯವಾಣಿ ನಂಬರ್ 8277 100 200 ಗೆ ಕರೆ ಮಾಡಿ ದಿನದ 24 ಗಂಟೆಗಳ ಕಾಲ ರೈತರು ಮಾಹಿತಿ ಪಡೆಯಬಹುದು. ರೈತರು ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ಸಂಪೂರ್ಣ ಮಾಹಿತಿ ಪಡೆಯಬಹುದು.
ಸಹಾಯವಾಣಿ ಮೂಲಕ ಲಭ್ಯವಿರುವ ಮಾಹಿತಿಗಳು
ಪಶು ಇಲಾಖೆಯ ಸಹಾಯವಾಣಿಯ ಮೂಲಕ ರೈತರಿಗೆ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಮಾಹಿತಿ ನೀಡುವರು. ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಹಾಗೂ ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡುವರು. ದೇಶಿ ಹಾಗೂ ವಿದೇಶ ಜಾನುವಾರು ತಳಿಗಳ ಬಗ್ಗೆ ತಿಳಿಸುವರು. ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಮಾಹಿತಿಯನ್ನುರೈತರಿಗೆ ನೀಡಲಾಗುವುದು.
ಇದನ್ನೂ ಓದಿ: ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ- ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮೆ ಹೆಸರು ಮೊಬೈಲ್ ನಲ್ಲೇ ಚೆಕ್ ಮಾಡಿ
ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ತಿಳಿಸುವರು. ಇದರೊಂದಿಗೆ ತುರ್ತು ಪಶುವೈದ್ಯ ಸೇವೆಗಾಗಿ ಒಳಬರುವ ಕರೆಗಳನ್ನು ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ವರ್ಗಾಯಿಸಿ ಅಗತ್ಯ ಸೇವೆ ದೊರೆಯುವಂತೆ ಸಹಕರಿಸುವರು. ಇದೆಲ್ಲಾ ಮಾಹಿತಿ ಪಡೆಯಲು ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಉಚಿತವಾಗಿಯೇ ರೈತರಿಗೆ ಪಶುಪಾಲನೆ ಕುರಿತು ಮಾಹಿತಿ ನೀಡುವರು. ಹೈನುಗಾರಿಕೆಯೊಂದಿಗೆ ಕುರಿ, ಕೋಳಿ, ಮೇಕೆ, ಮೊಲ ಸಾಕಾಣಿಕೆಯ ಕುರಿತು ಸಹ ಮಾಹಿತಿ ನೀಡುವರು.
ಜಾನುವಾರು ಮತ್ತು ಜಾನುವಾರು ಉತ್ಪನ್ನಗಳ ದರ ತಿಳಿಯಲು ಈ
https://www.ahvs.kar.nic.in/kn_Sale.html
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಜಾನುವಾರು ಹಾಗೂ ಇತರೆ ಉತ್ಪನ್ನಗಳ ಮಾರಾಟ ದರ ಮಾಹಿತಿ ತೆರೆಯಲ್ಪಡುತ್ತದೆ. ಅಲ್ಲಿ ಎಚ್.ಎಫ್, ಜೆರ್ಸಿ, ಅಮೃತ ಮಹಲ್, ಹಳ್ಳಿಕಾರ್, ಎಮ್ಮೆ ತಳಿಗಳ ವೀರ್ಯ ನಳಿಕೆ ದರ ಮಾಹಿತಿ ಸಿಗುತ್ತದೆ. ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರಗಳ ಮಾಹಿತಿಯೂ ಇರುತ್ತದೆ.