ಕಲಬುರಗಿ ಸೇಡಂ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ಇದೇ ಮೇ 9 ಹಾಗೂ 10 ರಂದು ಎರಡು ದಿನ ಕಾಲ ವೈಜ್ಞಾನಿಕ ಹೈನುಗಾರಿಕೆ ಹಾಗೂ ಇದೇ ಮೇ 12 ಹಾಗೂ 13 ರಂದು ಎರಡು ದಿನಗಳ ಕಾಲ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.
ಒಂದು ಬ್ಯಾಚ್‍ದಲ್ಲಿ 25 ಜನ ರೈತರಿಗೆ ತರಬೇತಿ ನೀಡಲಾಗುತ್ತದೆ. ಮೊದಲು ಬಂದವರಿಗೆ ಅವಕಾಶ ನೀಡಲಾಗುತ್ತದೆ. ತರಬೇತಿಗೆ ಹಾಜರಾಗುವ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಮಾಸ್ಕ್‍ನ್ನು ಅವರೇ ತರಬೇಕು. ರೈತರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಮಧ್ಯಾಹ್ನ ಅಲ್ಪ ಉಪಹಾರ ನೀಡಲಾಗುತ್ತದೆ. ಎರಡು ದಿನಗಳ ಕಾಲ ಕಡ್ಡಾಯವಾಗಿ ತರಬೇತಿಗೆ ಹಾಜರಾದವರಿಗೆ ಮಾತ್ರ ತರಬೇತಿ ಪ್ರಮಾಣಪತ್ರ ನೀಡಲಾಗುತ್ತದೆ.
ಈ ತರಬೇತಿಗೆ ಹಾಜರಾಗುವ ರೈತರು ಅರ್ಜಿಯ ಜೊತೆಗೆ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಆಧಾರ ಕಾರ್ಡ್ ಪ್ರತಿ ಲಗತ್ತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ಸೇಡಂ ರಸ್ತೆ ಕಲಬುರಗಿ ವಿಳಾಸಕ್ಕೆ ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-220576ಗೆ ಸಂಪರ್ಕಿಸಲು ಕೋರಲಾಗಿದೆ.
ಪಶುಪಾಲಕರ ಸಹಾಯಕ್ಕೆ ಆರಂಭವಾಗಿದೆ ಸಹಾಯವಾಣಿ
ಪಶುಪಾಲನೆ ಮಾಡಲಿಚ್ಚಿಸುವ ರೈತರಿಗೆ ಹಾಗೂ ಪಶುಪಾಲನೆ ಮಾಡುತ್ತಿರುವವರಿಗೆ ಯಾವುದೇ ತೊಂದರೆಯಾಗಬಾರದೆಂದು ಸರ್ಕಾರವು ರೈತರಿಗೆ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಹೌದು, ರೈತರು ಮನೆಯಲ್ಲಿಯೇ ಕುಳಿತು ಪಶುಪಾಲನೆ ಕುರಿತು ಮಾಹಿತಿ ಕೇಳಲು ಪಶುಪಾಲಕರ ಸಹಾಯವಾಣಿ ಆರಂಭಿಸಲಾಗಿದೆ. ರೈತರು 8277 100 200 ಎಂಬ ಸಹಾಯವಾಣಿಗೆ ರೈತರು ಮನೆಯಲ್ಲಿಯೇ ಕುಳಿತು ಕರೆ ಮಾಡಿದರೆ ಸಾಕು. ಪಶುಪಾಲನೆ ಕುರಿತು 24*7 ಕಾರ್ಯ ನಿರ್ವಹಿಸುತ್ತದೆ. ಈ ಸಹಾಯವಾಣಿಯು ರೈತರಿಗಾಗಿ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ರೈತರು ಪಶುಗಳಿಗೆ ಬರುವ ರೋಗ, ಪಶುಪಾಲನೆಯಲ್ಲಿ ಎದುರಿಸುತ್ತಿರುವ ಸಮಸ್ಯೆ, ಹಾಗೂ ಚಿಕಿತ್ಸೆ, ಲಸಿಕೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಪಡೆಯಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ Payment Processed ಕಾಣುತ್ತಿದೆಯೇ? ಏನಿದರ ಅರ್ಥ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರು ಉಚಿತ ಸಹಾಯವಾಣಿಗೆ ಕರೆ ಮಾಡಿದಾಗ ಕುರಿ, ಮೇಕೆ, ಹೈನುಗಾರಿಕೆ, ಮೇಕೆ ಸಾಕಾಣಿಕೆ ಕುರಿತು ಸಂಪೂರ್ಣ ಮಾಹಿತಿ ನೀಡುವರು. ಇದರೊಂದಿಗೆ ಪಶುಪಾಲನೆಗೆ ಯಾವ ಜಿಲ್ಲೆಗೆ ಯಾವ ತಳಿಗಳು ಸೂಕ್ತ ಎಂಬುದರ ಕುರಿತು ರೈತರಿಗೆ ಅಗತ್ಯ ಮಾಹಿತಿ ನೀಡುವರು. ಪಶುಸಂಗೋಪನಾ ಚಟುವಟಿಕೆಗೆ ವಿವಿಧ ಬ್ಯಾಂಕುಗಳಿಂದ ಸಿಗುವ ಸಾಲಸೌಲಭ್ಯದ ಬಗ್ಗೆ ರೈತರಿಗೆ ಮಾಹಿತಿ ನೀಡುವರು. ತುರ್ತು ಪಶುವೈದ್ಯ ಸೇವೆಗಳಿಗಾಗಿ ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ಕರೆ ವರ್ಗಾಯಿಸಿ ರೈತರಿಗೆ ಅಗತ್ಯ ಮಾಹಿತಿ ನೀಡುವಲ್ಲಿ ಈ ಉಚಿತ ಸಹಾಯವಾಣಿ ಸಹಕರಿಸುವುದು.
ಕುರಿ ಸಾಕಾಣಿಕೆ ತರಬೇತಿಯಲ್ಲಿ ಏನೇನು ತರಬೇತಿ ನೀಡಲಾಗುವುದು ನಿಮಗೆ ಗೊತ್ತೇ?
ಸರ್ಕಾರದ ವತಿಯಿಂದ ರೈತರಿಗೆ ಹಮ್ಮಿಕೊಳ್ಳುವ ಕುರಿ, ಮೇಕೆ ಸಾಕಾಣಿಕೆಯಲ್ಲಿ ಕುರಿ ಮೇಕೆಗಳ ತಳಿಗಳ ಬಗ್ಗೆ ಮಾಹಿತಿ ನೀಡಲಾಗುವುದು. ಕುರಿ ಮತ್ತು ಮೇಕೆಗಳಿಗೆ ಸೂಕ್ತ ವಸತಿ ನಿರ್ಮಾಣ ಹಾಗೂ ಅವುಗಳ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುವುದು. ಕುರಿಗಳ ತಳಿ ಸಂವರ್ಧನೆ ಹಾಗೂ ಗರ್ಭದ ಕುರಿ ಮೇಕೆಗಳ ಮತ್ತು ಮರಿಗಳ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ತಿಳಿಸಲಾಗುವುದು.
ಕುರಿ ಮತ್ತು ಮೇಕೆಗಳ ಸೂಕ್ತ ಮೇವಿನ ಬೆಳೆಗಳು, ಪ್ರಾದೇಶಿಕ ಮೇವು ಉತ್ಪಾದನಾ ಕ್ಷೇತ್ರಕ್ಕೆ ಭೇಟಿ ಹಾಗೂ ಮೇವು ಪ್ರಾತ್ಯಕ್ಷತಾ ತಾಕುಗಳ ವೀಕ್ಷಣೆ ಮಾಡಿಸಲಾಗುವುದು. ಉಣ್ಣೆ ಕತ್ತರಿಸುವ ವಿಧಾನ, ಚರ್ಮ ಸಂಸ್ಕರಣೆ ವಿಧಾನ ಹಾಗೂ ಕುರಿ ಉತ್ಪನ್ನಗಳ ಮೌಲ್ಯ ವರ್ಧನೆ, ಮೇಕೆ ಸಾಕಾಣಿಕೆಯಲ್ಲಿನ ವಿಶೇಶ ನಿರ್ವಹಣಾ ಪದ್ಧತಿಗಳ ಬಗ್ಗೆ ತಿಳಿಸಲಾಗುವುದು.