ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರಾಜ್ಯಾದ್ಯಂತ 28 ಸಾವಿರ ದ್ವಿಚಕ್ರ ವಾಹನ ನೀಡುವ ಗುರಿ ಹೊಂದಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ತಿಳಿಸಿದ್ದಾರೆ.
ಅವರು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲಾ ನಿಗಮಗಳ ವಿವಿಧ ಯೋಜನೆಗಳ ಅನುಷ್ಠಾನ ಸಂಬಂಧಿಸಿದಂತೆ ಮಂಗಳವಾರ ವೀಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಸ್ಥ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದ್ದು, ಅತೀ ಶೀಘ್ರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಅಂದರೆ ದ್ವಿಚಕ್ರ ವಾಹನ ಖರೀದಿಗಾಗಿ 210 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ವಿತರಣೆ ಗುರಿ ಹೊಂದಲಾಗಿದೆ. ಮೀನು ಮಾರಾಟ, ಬಟ್ಟೆ ವ್ಯಾಪಾರ ಸೇರಿ ಸರಕು ದ್ವಿಚಕ್ರ ವಾಹನಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಅರ್ಹ ಫಲಾನುಭವಿಗಳು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. 50 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು. ಉಳಿದ 20 ಸಾವಿರ ರೂಪಾಯಿಯನ್ನು ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಲಾಗುವುದು. ಫಲಾನುಭವಿಗಳು ತಮಗೆ ಅನುಕೂಲವಾಗುವ ಯಾವುದೇ ಕಂಪನಿಯ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 8432 ಅರ್ಜಿಗಳು ಬಂದಿವೆ. ಬಂದ ಅರ್ಜಿಗಳ ದಾಖಲೆಗಳನ್ನು ಪರಿಶೀಲಿಸಿ ನಿಜವಾದ ಫಲಾನುಭವಿಗಳಿಗೆ ಬೈಕ್ ವಿತರಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮುಂಗಾರು ಹಂಗಾಮಿನ ಈ ಬೆಳೆಗಳಿಗೆ ವಿಮೆ ಹಣ ಬಿಡುಗಡೆ: ಯಾವ ಬೆಳೆಗೆ ಎಷ್ಟು ಜಮೆಯಾಗಲಿದೆ? ಇಲ್ಲೇ ಚೆಕ್ ಮಾಡಿ
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್, ಇಲಾಖೆ ಸಲಹೆಗಾರ ಇ ವೆಂಕಟಯ್ಯ, ಇಲಾಖೆ ಆಯುಕ್ತ ಡಾ. ಕೆ ರಾಕೇಶ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ. ದಯಾನಂದ, ಸಚಿವರ ಆಪ್ತ ಕಾರ್ಯದರ್ಶಿ ಡಾ. ಉದಯಕುಮಾರ ಶೆಟ್ಟಿ ಸೇರಿದಂತೆ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.
ಇತ್ತೀಚೆಗೆ ವಿವಿಧ ನಿಗಮಗಳಿಂದ ಬೈಕ್ ಖರೀದಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಹೌದು, ಉದ್ಯಮ ಶೀಲತಾ ಯೋಜನೆ ಅಡಿಯಲ್ಲಿ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಇದೇ ರೀತಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿಯೂ ಮೀನುಗಾರಿಕೆ ಇಲಾಖೆಯ ವತಿಯಿಂದ ವಿವಿಧ ಜಿಲ್ಲೆಗಳಿಂದದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೈಕ್ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ನಿರುದ್ಯೋಗಿ ಫಲಾನುಭವಿಗಳಿಗೆ ಬೈಕ್ ಖರೀದಿಗೆ ಸಹಾಯಧನ ನೀಡಲಾಗುವುದು.
ದ್ವಿಚಕ್ರ ವಾಹನ ಖರೀದಿಗೆ ಇರುವ ಅರ್ಹತೆಗಳು
ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ ನಿರುದ್ಯೋಗಿಗಳಿಗೆ ಈ ಹಿಂದೆ ಸೌಲಭ್ಯ ಪಡೆಯದವರಿಗೆ ಆಯ್ಕೆ ಮಾಡಲಾಗುವುದು. ಹಾಗೂ ಅರ್ಹ ಫಲಾನುಭವಿಗಳು ಡ್ರೈವಿಂಗ್ ಲೈಸೆನ್ಸ್ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಲ್ಲಿಸಿರಬೇಕು. ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಿ ನಿರುದ್ಯೋಗಿಗಳಿಗೆ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು.