ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ ಅಬ್ಬಬ್ಬಾ ಅಂದರೆ 400 ರಿಂದ 500 ರೂಪಾಯಿ ಕೇಳಿರಬಹುದು. ಇತ್ತೀಚೆಗೆ ಅಫ್ಘಾನಿಸ್ಥಾನ ಮೂಲದ ನೂರ್‌ಜಹಾನ್ ತಳಿಯ 2.5 ಕೆ.ಜಿ ತೂಗುವ ಒಂದು ಮಾವಿನ ಹಣ್ಣಿನ ಬೆಲೆ 1200 ರೂಪಾಯಿ ಎಂಬುದು ಸುದ್ದಿಯಾಗಿತ್ತು. ಈ ಹಣ್ಣಿಗಿಂತಲೂ ದುಬಾರಿ ಮತ್ತೊಂದು ಮಾವು ಇರಲಿಕ್ಕಿಲ್ಲ ಎಂದು ನೀವು ಅಂದುಕೊಂಡಿದ್ದರೆ, ನಿಮ್ಮ ಅನಿಸಿಕೆ ತಪ್ಪು.
ಆದರೆ ಇಲ್ಲೊಂದು ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ 2.70 ಲಕ್ಷ ರೂಪಾಯಿ ಎಂದ ಕೂಡಲೇ ಆಶ್ಚರ್ಯಪಡಬೇಕಿಲ್ಲ. ಆದರೆ ಇದು ಸತ್ಯ. ಜಗತ್ತಿನ ಅತ್ಯಂತ ವಿರಳ, ದುಬಾರಿ ತಳಿ ಎನಿಸಿಕೊಂಡಿರುವ ಜಪಾನ್ ನ ಮಿಯಾಝಾಕಿ (miyazaki mangoes) ಎಂಬ ಮಾವಿನ ತಳಿಯ ಬೆಲೆ ಬರೋಬ್ಬರಿ 2.70 ಲಕ್ಷಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ಮಧ್ಯಪ್ರದೇಶದ ಜಬಲಪುರದ ದಂಪತಿ ಬೆಳೆದ ಈ ಮಾವಿನ ತೋಟದಲ್ಲಿ ರಕ್ಷಣೆಗಾಗಿ ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಆರು ಶ್ವಾನಗಳ ಪಡೆಯನ್ನು ನೇಮಸಿಕೊಂಡಿದ್ದಾರೆ. ಇತ್ತೀಚೆಗೆ ಈ ತಳಿಯ ಮಾವಿನ ಹಣ್ಣಿನ ಬಗ್ಗೆ ದೊಡ್ಡ ಸುದ್ದಿಯಾಗುತ್ತಿದೆ.
ಮಾವಿನ ತಳಿ ದಂಪತಿಗೆ ಸಿಕ್ಕಿದ್ದು ಹೇಗೆ
ಮಧ್ಯಪ್ರದೇಶದ ಜಬಲಪುರ ಗ್ರಾಮದ ರಾಣಿ ಹಾಗೂ ಸಂಕಲ್ಪ್ ಕುಮಾರ್ ದಂಪತಿ ಚೈನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಎರಡು ಮಾವಿನ ಸಸಿಗಳನ್ನು ನೀಡಿದ್ದರಂತೆ. ಇದನ್ನು ತೋಟಕ್ಕೆ ತಂದಿದ್ದ ದಂಪತಿ ಸಾಮಾನ್ಯ ಮಾವಿನ ಮರಗಳ ಜೊತೆಗೆ ಬೆಳೆದಿದ್ದರು. ಆಧರೆ ಬೆಳದ ನಂತರ ಅದರಲ್ಲಿ ಬಂದ ಫಸಲು ದಂಪತಿಯಲ್ಲಿ ಆಶ್ಚರ್ಯ ಹುಟ್ಟಿಸಿತ್ತು. ಗಿಡ ಹಣ್ಣು ಬಿಡಲು ಪ್ರಾರಂಭಿಸಿದಾಗ ಅದರ ಬಣ್ಣ ನೋಡಿ ದಂಪತಿ ಅಚ್ಚರಿಗೊಂಡರು. ಸಾಮಾನ್ಯವಾಗಿ ಹಸಿರು, ಹಳದಿ ಬಣ್ಣದಲ್ಲಿ ಮೂಡುವ ಮಾವಿನ ಕಾಯಿಗಳಉ ಈ ಮರಗಳಲ್ಲಿ ಮಾತ್ರ ಕಡುಕೆಂಪಗೆ ಮೂಡಿದ್ದವು.
ಮಾವಿನ ಮರಗಳಲ್ಲಿ ಮೂಡಿದ ಕಡುಕೆಂಪಗೆ ಈರುವ ಮಾವಿನ ಹಣ್ಣುಗಳನ್ನು ನೋಡಿದ ದಂಪತಿಗೆ ಅಚ್ಚರಿ ಹುಟ್ಟಿಸಿತ್ತು. ಇದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾಗ ಈ ಮಾವಿನ ತಳಿಯ ಹೆಸರು ಮಿಯಾಝಾಕಿ ಎಂಬುದು ಗೊತ್ತಾಗಿದೆ. ವಿಶ್ವದಲ್ಲೇ ಅತೀ ದುಬಾರಿ ಎನಿಸಿರುವ ಮಿಯಾಝಾಕಿ ತಳಿಯ ಮಾವಿನ ಹಣ್ಣುಗಳು ಕಳೆದ ವರ್ಷ ಮಾರುಕಟ್ಟೆಯಲ್ಲಿ ಕೆಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಕುರಿತು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ.ಅಪರೂಪದ ಈ ಹಣ್ಣನ್ನು ಸೂರ್ಯನ ಮೊಟ್ಟೆ (Egg of the sun) ಎಂದೂ ಕರೆಯಲಾಗುತ್ತದೆ. ಜಪಾನಿನ ಮಿಯಾಝಾಕಿ ಪ್ರಾಂತ್ಯದಲ್ಲಿ ಹೆಚ್ಚಾಗಿ ಈ ತಳಿಯನ್ನು ಬೆಳೆಸುವುದರಿಂದ ಈ ತಳಿಗೆ ಮಿಯಾಝಾಕಿ ಎಂಬ ಹೆಸರು ಬಂದಿರಬಹುದು.
ಕಳೆದ ವರ್ಷ ಕಳ್ಳರು ದಂಪತಿ ತೋಟಕ್ಕೆ ನುಗ್ಗಿ ದುಬಾರಿ ಹಣ್ಣನ್ನು ಕಳವು ಮಾಡಿದ್ದರಂತೆ. ಹಾಗಾಗಿ ಈ ವರ್ಷ ಮಾವಿನ ಹಣ್ಣನ್ನು ಕಳ್ಳರಿಂದ ಕಾಪಾಡಿಕೊಳ್ಳಲು 6 ನಾಯಿಗಳನ್ನು, 4 ಕಾವಲುಗಾರರನ್ನು ನಿಯೋಜಿಸಲಾಗಿದೆ. ಮತ್ತು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಫಸಲು ಬಿಡುವಂತೆ ತೋಟವನ್ನು ರಕ್ಷಿಸಿದ್ದಾರೆ. ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾ ಸುದ್ದಿ ಮಾಧ್ಯಮ ವರದಿ ಮಾಡಿದೆ.