ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ (ಕಲ್ಯಾಣ ಕರ್ನಾಟಕ ಪ್ರದೇಶ) ಸೆಪ್ಟೆಂಬರ್ 17 ವಿಶೇಷ ದಿನ. ಏಕೆಂದರೆ ಭಾರತೀಯರಿಗೆ 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆತರೂ ಈ ಪ್ರದೇಶಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಒಂದು ವರ್ಷ ಒಂದು ತಿಂಗಳ ನಂತರ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸ್ವಾತಂತ್ಯ ಸಿಕ್ಕಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 13 ತಿಂಗಳ ವಿಳಂಬವೇಕೆ ಅಂದು ಕೊಂಡಿದ್ದೀರಾ. ಇಲ್ಲಿದೆ ಸಂಕ್ಷೀಪ್ತ ಮಾಹಿತಿ ಇಲ್ಲಿದೆ.
ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಜಿಲ್ಲೆಗಳು ಹಿಂದೆ ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. ದೇಶಕ್ಕೆ 1947 ರಂದು ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್ ನಿಜಾಮ ತನ್ನ ಸಂಸ್ಥಾನವನ್ನು ಸ್ವತಂತ್ರ ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಒಪ್ಪಿರಲಿಲ್ಲ. ಹೀಗಾಗಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಕ್ಕೆ ಕಾರಣವಾಯಿತು. ಈ ಭಾಗದ ಹೋರಾಟಕ್ಕಾಗಿ ಮತ್ತೊಂದು ಸ್ವಾತಂತ್ರ್ಯ ಕದನವೇ ನಡೆದು ಹೋಯ್ತು.
ಆರಂಭದಲ್ಲಿ ಮೈಸೂರು ಸೇರಿದಂತೆ ದೇಶದ 565 ಪ್ರಾಂತ್ಯಗಳು ರಾಜರು ಭಾರತದ ಒಕ್ಕೂಟ ಸೇರಲು ಪ್ರತಿರೋಧಿಸಿದರು. ಪ್ರಜೆಗಳ ಒತ್ತಡದಿಂದ ಅನಿವಾರ್ಯವಾಗಿ ಒಪ್ಪಿದವು. ಆದರೆ ಮುಸ್ಲೀಂ ಸಮುದಾಯದ ಪ್ರಜೆಗಳು ಹೆಚ್ಚಾಗಿದ್ದ ಹಿಂದೂ ದೊರೆ ಆಳುತ್ತಿದ್ದ ಕಾಶ್ಮೀರ ಹಾಗೂ ಹಿಂದೂ ಪ್ರಜೆಗಳು ಹೆಚ್ಚಾಗಿದ್ದ ಮುಸ್ಲೀಂ ದೊರೆಗಳು ಆಡಳಿತ ನಡೆಸುತ್ತಿದ್ದ ಜುನಾಗಢ ಹಾಗೂ ಹೈದ್ರಾಬಾದ್ ಪ್ರಾಂತ್ಯ ಭಾರತದ ಒಕ್ಕೂಟ ಸೇರಲು ಹಿಂದೇಟು ಹಾಕಿದ್ದವು. ಹೈದ್ರಾಬಾದ್ ಪ್ರಾಂತ್ಯದಲ್ಲಿ ಅಶಾಂತಿಯ ವಾತಾವರಣವಿತ್ತು. ಹೈದ್ರಾಬಾದ್ ನಿಜಾಮರು ಕಾಸಿಂ ರಿಜ್ವಿ ನೇತೃತ್ವದ ರಜಾಕಾರರ ನೆರವು ಪಡೆದಿದ್ದರು. ರಜಾಕಾರರ ದುಷ್ಕೃತ್ಯಗಳಿಗೆ ಮಿತಿಯಿಲ್ಲದಂತಾಗಿತ್ತು. ಹಿಂಸೆ, ಅತ್ಯಾಚಾರ, ಲೂಟಿಗಳು ಮಿತಿಮೀರಿಹೋಗಿತು. ನಿಜಾಮರ ದೌರ್ಜನ್ಯದ ವಿರುದ್ಧ ಹೈದ್ರಾಬಾದ್ ಕರ್ನಾಟಕದ ಜನ ದಂಗೆ ಏಳಲಾರಂಭಿಸಿದರು. ಹೋರಾಟಕ್ಕೆ ಧುಮುಕಿದ್ದ ಜನರನ್ನು ಹತ್ತಿಕ್ಕಲು, ನಿಜಾಮನ ಮತಾಂಧ ಸೇನಾನಿ ಕಾಸಿಂ ರಜ್ಜಿ ತನ್ನ ರಜಾಕಾರ್ ಸಂಘಟನೆಯ ಮೂಲಕ ಅನಾಚಾರದ ಹಾದಿ ಹಿಡಿದಿದ್ದ. ರಜಾಕಾರರಿಂದ ಕೊಲೆ, ಲೂಟಿ, ಅತ್ಯಾಚಾರಗಳು ತೀವ್ರವಾಗಿದ್ದವು. ರಜಾಕಾರರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟಗಳು ನಡೆದವು ಲೆಕ್ಕವಿಲ್ಲದಷ್ಟು ಜನರು ಈ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೂ ಈ ಭಾಗದಲ್ಲಿ ತ್ರಿವರ್ಣ ಧ್ವಜ ಹಿಡಿದು ಓಡಾಡುವುದು ಕಷ್ಟವಾಗಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದ ಲಕ್ಷ್ಮೀ ದೇವಸ್ಥಾನದ ಮುಂದೆ ಸುಮಾರು 200 ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ರಜಾಕಾರರು ನಿರ್ದಯವಾಗಿ ಹತ್ಯೆ ಮಾಡಿದ್ದರು.
ಹೀಗಾಗಿ ಹಿಂದೂ ಪ್ರಜೆಗಳ ಹಿತದೃಷ್ಟಿಯಿಂದ ಹೋರಾಟಗಾರರ ಮನವಿ ಆಧರಿಸಿ ಕೆ.ಎಂ. ಮುನ್ಸಿಯವರು ಸಲ್ಲಿಸಿದ ವರದಿ ಮೇರೆಗೆ ಅಂದು ಗೃಹಸಚಿವರಾಗಿದ್ದ ಸರ್ಧಾರ್ ವಲ್ಲಭಬಾಯಿ ಪಟೇಲರು ಆಪರೇಷನ್ ಪೋಲೋ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆ ನೇತೃತ್ವವನ್ನು ಜೆ.ಎನ್. ಚೌಧರಿ ವಹಿಸಿಕೊಂಡಿದ್ದರು. ಸೆಪ್ಟೆಂಬರ್ 13 ರಿಂದ ಕಾರ್ಯಾಚರಣೆ ಆರಂಭವಾಗಿ ಸೆಪ್ಟೆಂಬರ್ 17 ರವರೆಗೆ ಸೇನೆ ಯಾವುದೇ ಪ್ರತಿರೋಧವಿಲ್ಲದೆ ಹೈದ್ರಾಬಾದ್ ನಗರ ಪ್ರವೇಶಿಸಿ ನಿಜಾಮರ ಆಳ್ವಿಕೆ ಕೊನೆಗೊಳಿಸಿತು. ಇದನ್ನೇ ಸೆಪ್ಟೆಂಬರ್ 17 ನ್ನು ವಿಮೋಚನಾ ದಿನ ಎಂದು ಕರೆಯಲಾಗುತ್ತದೆ. ವಿಲೀನ ದಿನವೆಂದಲೂ ಕರೆಯುತ್ತಾರೆ.