ಯಾವ ಜಿಲ್ಲೆ, ತಾಲೂಕಿನಲ್ಲಿ ಮಳೆಯಾಗುತ್ತದೆ ಎಂಬ ಮಾಹಿತಿಗಿಂತ ನಿಮ್ಮ ಹಳ್ಳಿಯಲ್ಲಿ ಮಳೆಯಾಗುತ್ತದೆಯೋ ಇಲ್ಲವೋ ಎಂಬುದನ್ನು (weather forecast report) ಸಹ ಈಗ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.
ನಿಮ್ಮೂರಿನಲ್ಲಿ ಮಳೆಯಾಗುವ ಮುನ್ಸೂಚನೆಯ ಮಾಹಿತಿ ಪಡೆಯಲು ಈಗ ನೀವು ಎಲ್ಲಿಯೂ ಹೋಗಬೇಕಿಲ್ಲ. ಯಾವ ಆ್ಯಪ್ ಗಳನ್ನೂ ಸಹ ಇನ್ಸ್ ಸ್ಟಾಲ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿಯೇ ನೀವು ಕೂತಲ್ಲೇ ಮಾಹಿತಿ ಪಡೆಯಬಹುದು.
ನಿಮ್ಮ ಊರಿನಲ್ಲಿ ಎಷ್ಟು ಪ್ರಮಾಣದ ಮಳೆಯಾಗುತ್ತದೆ, ಗಾಳಿಯ ವೇಗವೆಷ್ಟು? ವಾತಾವರಣ ಹೇಗಿರಲಿದೆ, ಎಂಬಿತ್ಯಾದಿ ಮಾಹಿತಿಯೂ ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿದ ಎಲ್ಲಾ ರೈತರಿಗೆ ಮಾಹಿತಿ ಸಿಗುತ್ತದೆ.
ಈ ಮಾಹಿತಿ ಪಡೆಯಲು ಹಾಗೂ ಸರ್ಕಾರದ ಕೃಷಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ (ಫಾರ್ಮರ್ ರಿಜಿಸ್ಟ್ರೇಷನ್ ಆಯಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮೇಷನ್ ಸಿಸ್ಟಂ (FRUITS) ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಲೇಬೇಕು. ಆಗ ಮಾತ್ರ ಈ ಮಾಹಿತಿ ಸಿಗುತ್ತದೆ.
ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿದ ರೈತರು ಮಳೆಯ ಮುನ್ಸೂಚನೆಯನ್ನು ನೋಡಲು https://fruits.karnataka.gov.in/OnlineUserLogin.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.. ಮೊಬೈಲ್ ನಂಬರ್ ಮತ್ತು ನಿಮ್ಮ ಪಾಸ್ವರ್ಡ್ ನಮೂದಿಸಿದರೆ ಸಾಕು. ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದ ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ವೆದರ್ ಫೋರ್ಕಾಸ್ಟ್ (weather forecast) ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನಲ್ಲಿ ಇಂದು ಮತ್ತ ನಾಳೆ ಮಳೆಯಾಗುತ್ತದೋ ಇಲ್ಲವೋ, ಎಷ್ಟು ಪ್ರಮಾಣದ ಮಳೆಯಾಗುತ್ತದೆ ಎಂಬ ಮಾಹಿತಿ ಕಾಣುತ್ತದೆ.
(ಒಂದು ವೇಳೆ ಪಾಸ್ವರ್ಡ್ ಮರೆತಿದ್ದರೆ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ. ಅದನ್ನು ಟೈಪ್ ಮಾಡಿ ಹೊಸ ಪಾಸ್ವರ್ಡ್ ಸೆಟ್ ಮಾಡಿಕೊಂಡು ಲಾಗಿನ್ ಆಗಬಹುದು.)
ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳದಿದ್ದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ. https://fruits.karnataka.gov.in/OnlineUserRegistration.aspx ಆಧಾರ್ ನಂಬರ್ ಹಾಗೂ ಆಧಾರ್ ನಂಬರ್ ನಲ್ಲಿರುವಂತೆ ಹೆಸರು ಭರ್ತಿ ಮಾಡಿ, ನಂತರ ಓಟಿಪಿ ಬರುತ್ತದೆ, ಮುಂದುವರಿದು ಇತರೆ ವಿವರ ದಾಖಲಿಸಬಹುದು.
ತಮಗೆ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸಮಸ್ಯೆಯಾಗುತ್ತಿದ್ದರೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝಿರಾಕ್ಸ್, ಪ್ರತಿ ಪಾಸ್ಪೋರ್ಟ್ ಅಳತೆಯ ಫೋಟೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಝಿರಾಕ್ಸ್ ಪ್ರತಿ ಸೇರಿದಂತೆ ಸೂಕ್ತ ದಾಖಲಾತಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.