ತರಕಾರಿ, ತೋಟಗಾರಿಕೆ, ಹಾಗೂ ಹೂವಿನ ಬೆಳೆ ವಿಸ್ತರಣೆಗೆ ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ, ತರಕಾರಿ ಹಾಗೂ ಹೂವಿನ ಬೆಳೆ ವಿಸ್ತರಣೆ ಮಾಡಲು ರೈತರಿಗೆ ಶೇ. 25 ರಿಂದ 50 ರಷ್ಟು ಸಬ್ಸಿಡಿ ಸಿಗಲಿದೆ.

ಹೌದು, ತೋಟಗಾರಿಕೆ ಇಲಾಖೆಯ ವತಿಯಿಂದ 2022-23ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಬಾಳೆ, ಮಾವು, ಸೀಬೆ, ಹುಣಸೆ ಡ್ರ್ಯಾಗನ್ ಫ್ರೂಟ್, ನೇರಳೆ ಹಾಗೂ ದಾಳಿಂಬೆ ಬೆಳೆಗಳಿಗೆ ನೆರವು ನೀಡಲಾಗವುದು.

ಹೂವಿನ ಬೆಳೆಗಳಾದ ಸುಗಂದರಾಜ, ತರಕಾರಿ ಬೆಳೆಗಳ ಹೊಸ ಪ್ರದೇಶ ವಿಸ್ತರಣೆಗೂ ಸಹಾಯಧನ ನೀಡಲಾಗುವುದು. ಅದೇ ರೀತಿ ಗೋಡಂಬಿ, ಕಾಳುಮೆಣಸು,  ಬೆಳೆ ಹೊಸ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು. ನೀರು ಸಂಗ್ರಹಣಾ ಘಟಕಗಳ ನಿರ್ಮಾಣ ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ನೆರಳು ಪರದೆ, ಖಾಸಗಿ ನರ್ಸರಿ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆಗೆ, ಕೀಟ ರೋಗ ಮತ್ತು ಪೋಶಕಾಂಶಗಳ ನಿರ್ವಹಣೆಗೆ ಸಹಾಯಧನ ನೀಡಲಾಗುವುದು.

ತೋಟಗಾರಿಕೆ ನಿರ್ವಹಣೆಗಾಗಿ ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ ರೈತರಿಗೆ ಶೇ. 25 ರಿಂದ 50 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಹಾಗೂ ಉದ್ದಿಮೆದಾರರು ತಮ್ಮ ಅರ್ಜಿಯೊಂದಜಿಗೆ ಪಹಣಿ, ಆಧಾರ್ ಪ್ರತಿ ಮತ್ತಿತರ ದಾಖಲಾತಿಗಳನ್ನು ಲಗತ್ತಿಸಿ ಜುಲೈ 11 ರೊಳಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕೆಂದು ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ?

ತೋಟಗಾರಿಕೆ, ತರಕಾರಿ ಹಾಗೂ ಹೂವಿನ ಬೆಳೆ ವಿಸ್ತರಣೆಗಾಗಿ ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಹಾಗೂ ತೋಟಗಾರಿಕೆ ಮಾಡುತ್ತಿರುವ ರೈತರಿಗೆ ಸಹಾಯಧನ ನೀಡಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯನ್ನು ಆರಂಭಿಸಲಾಗಿದೆ.ಈ ಯೋಜನೆಯಡಿಯಲ್ಲಿ ರೈತರಿಗೆ ಶೇ. 25 ರಿಂದ 50 ರವರೆಗೆ ಸಹಾಯಧನ ನೀಡಲಾಗುವುದು. ರೈತರು ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು.

ಸೌಲಭ್ಯ ಪಡೆಯಲು ಯಾವ ಯಾವ ದಾಖಲೆ ಬೇಕು?

ಅರ್ಜಿ ಸಲ್ಲಿಸುವ ರೈತರಿಗೆ ಜಮೀನು ಇರಬೇಕು. ನೀರಾವರಿ ವ್ಯವಸ್ಥೆ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಆಧಾರ್ ಕಾರ್ಡ್ ಇರಬೇಕು ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿರಬೇಕು.

ಅರ್ಜಿ ಎಲ್ಲಿ ಸಲ್ಲಿಸಬೇಕು?

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರೈತರು ತೋಟಗಾರಿಕೆ ಇಲಾಖೆಯ ವತಿಯಿಂದ 2022-23ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ನೆರವು ಪಡೆಯಲು ಶಿರಾ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದವರೆಗೆ ಕಾಯದೆ ಜುಲೈ 11 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಲಭ್ಯತೆಯ ಆಧಾರದ ಮೇಲೆ ರೈತರಿಗೆ ಸಹಾಯಧನ ನೀಡಲಾಗುವುದು. ಹಾಗಾಗಿ ರೈತರು ಬೇಗನೆ ಅರ್ಜಿ ಸಲ್ಲಿಸಬೇಕು.  ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹಿಂದೆ ರೈತರು ಸಹಾಯಧನ ಪಡೆದಿರಬಾರದು. ಅಂತಹ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ : ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಅಳತೆ ಮಾಡಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಹಣ್ಣಿನ ಬೆಳೆಗಳಾದ ಅಂಗಾಂಶ ಬಾಳೆ, ಗಡ್ಡೆಬಾಳೆ, ಹೈಬ್ರಿಡ್ ತರಕಾರಿ, ಕಾಳುಮೆಣಸು, ಹೊಸ ಪ್ರದೇಶ ವಿಸ್ತರಣೆಗೆ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೂ ತುಮಕೂರು ಜಿಲ್ಲೆಯ ಇತರ ತಾಲೂಕಿನ ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಲು ಕೋರಲಾಗಿದೆ.

Leave a comment