ರೈತರ ಆದಾಯ ದ್ವಿಗುಣಗೊಳಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆಗಳಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿಯ ಕೊರತೆಯಿಂದಾಗಿ ಎಷ್ಟೋ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ರೈತರಿಗೆ ಕೃಷಿ ಇಲಾಖೆ, ಪಶುಇಲಾಖೆ, ಮೀನಗಾರಿಕೆ, ರೇಷ್ಮೆ ಇಲಾಖೆಯಂತೆ ತೋಟಗಾರಿಕೆ ಇಲಾಖೆಯಿಂದಲೂ ಸಾಕಷ್ಟು ಸೌಲಭ್ಯ ಸಿಗುತ್ತದೆ. ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಇಲಾಖೆಯ ವತಿಯಿಂದ ಸಬ್ಸಿಡಿ ಸಿಗುತ್ತದೆ. ಹೌದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ನೀರಾವರಿ ಹೊಂದಿರುವ ಹಾಗೂ ನೀರಾವರಿ ಮಾಡಲಿಚ್ಚಿಸುವ ರೈತರಿಗೆ ವಿವಿಧ ಘಟಕಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
ತೋಟಗಾರಿಕೆ ಬೆಳೆಗೆ ರೈತರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ?
ತೋಟಗಾರಿಕೆ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳ ಘಟಕ ನಿರ್ಮಾಣಕ್ಕೆ ಸಹಾಯಧನ ಸಿಗುವುದು. ಸಾಮಾನ್ಯ ವರ್ಗದ ರೈತರಿಗೆ ಶೇ. 40 ರಷ್ಟು ಸಬ್ಸಿಡಿ ಸಿಗುತ್ತದೆ. ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡದ ರೈತರಿಗೆ ಶೇ. 50 ರಿಂದ ರ90 ರಷ್ಟು ಸಹಾಯಧನ ಸಿಗುತ್ತದೆ.
ಯಾವ ಯಾವ ತೋಟಗಾರಿಕೆ ಬೆಳೆಗೆ ಸಬ್ಸಿಡಿ ಸಿಗುತ್ತದೆ?
ತೋಟಗಾರಿಕೆ ಮಾಡುತ್ತಿರುವ ಹಾಗೂ ತೋಟಗಾರಿಕೆ ಮಾಡಲಿಚ್ಚಿಸುವ ರೈತರಿಗೆ ದಾಳಿಂಬೆ, ಮಾವು, ಬಾಳೆ, ಸಪೋಟಾ, ಗೇರು, ಸೀತಾಫಲ, ಸೇರಿದಂತೆ ಇನ್ನಿತರ ಹಣ್ಣುಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ಸಿಗುತ್ತದೆ. ಇದರೊಂದಿಗೆ ಈರುಳ್ಳಿ ಶೇಖರಣಾ ಘಟಕ, ಅರಿಶಿಣ ಸಂಸ್ಕರಣಾ ಘಟಕ,ಹಣ್ಣು ಮಾಗಿಸುವ ಘಟಕ, ಜೇನು ಕೃಷಿ, ತೋಟಗಾರಿಕೆ ಬೆಳೆಗಳಿಗೆ ಪಾಲಿಹೌಸ್ ನಿರ್ಮಾಣಕ್ಕೆ ರೈತರಿಗೆ ಸಹಾಯಧನ ಸಿಗುತ್ತದೆ.
ಗುಲಾಬಿ ಹೂವು, ಸುಗಂಧರಾಜ, ಚೆಂಡುಹೂವು, ಸೇವಂತಿಗೆ, ಮಲ್ಲಿಗೆ ಹೂವು, ಕನಕಾಂಬರಿ ಸೇರಿದಂತೆ ಇನ್ನಿತರ ಹೂವುಗಳ ಪ್ರದೇಶ ವಿಸ್ತರಣೆಗೂ ರೈತರಿಗೆ ಸಹಾಯಧನ ಸಿಗುತ್ತದೆ.
ಇದನ್ನೂ ಓದಿ : ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ 20 ಹೆಚ್.ಪಿ ಅಶ್ವಶಕ್ತಿ ಟ್ರ್ಯಾಕ್ಟರ್ ಖರೀದಿಗೂ ಸಹಾಯಧನ ಸಿಗುತ್ತದೆ. ಇದರೊಂದಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಸಿಗುತ್ತದೆ.
ಸಬ್ಸಿಡಿ ಪಡೆಯಲು ಯಾವ ದಾಖಲೆ ಬೇಕು
ರೈತರು ತೋಟಗಾರಿಕೆ ಇಲಾಖೆಯ ವತಿಯಿಂದ ಸಬ್ಸಿಡಿ ಪಡೆಯಲಿಚ್ಚಿಸುವ ರೈತರಿಗೆ ಸ್ವಂತ ಜಮೀನು ಇರಬೇಕು. ನೀರಾವರಿ ಸೌಲಭ್ಯ ಇರಬೇಕು. ರೈತರು ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಫೋಟೋ ಇರಬೇಕು. ಬ್ಯಾಂಕಿನ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಜಮೀನಿನ ಪಹಣಿ ಹೊಂದಿರಬೇಕು. ಮತದಾರ ಗುರುತಿನ ಚೀಟಿ ಹೊಂದಿರಬೇಕು. ಗಣಕೀಕರಣ ಬೆಳೆ ದೃಢೀಕರಣ ಪತ್ರ ಹೊಂದಿರಬೇಕು. ಫಲಾನುಭವಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಾಗಿರಬೇಕು ಅಥವಾ ತೋಟಗಾರಿಕೆ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು. ಫಲಾನುಭವಿ ಜಂಟಿ ಖಾತೆ ಹೊಂದಿದಲ್ಲಿ ಕುಟುಂಬದವರ ಒಪ್ಪಿಗೆಪತ್ರ, ಜಂಟಿ ಖಾತೆ ಹೊಂದಿರುವ ಇತರೆರೈತರು ಎನ್ಓಸಿ ನೀಡಿರಬೇಕು. ನೋಟರಿ ಕಡ್ಡಾಯವಾಗಿರುತ್ತದೆ.
ರೈತರು ಅರ್ಜಿ ಎಲ್ಲಿ ಸಲ್ಲಿಸಬೇಕು?
ತೋಟಗಾರಿಕೆ ಇಲಾಖೆಯ ವತಿಯಿಂದ ರೈತರು ತೋಟಗಾರಿಕೆ ಬೆಳೆಗಳಿಗೆ ಸೌಲಭ್ಯ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಯಾವ ಬೆಳೆಗೆ ಸಹಾಯಧನ ಪಡೆಯಲಿಚ್ಚಿಸುವಿರೋ ಅದರ ಬಗ್ಗೆ ವಿಚಾರಿಸಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕೆ ಇಲಾಖೆ ಅಥವಾ ಜಿಲ್ಲಾ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಬಹುದು.
ತೋಟಗಾರಿಕೆ ಇಲಾಖೆಯ ವತಿಯಿಂದ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ರೈತರಿಗೆ ಲಭ್ಯತೆಯ ಆಧಾರ ಮೇಲೆ ಸೌಲಭ್ಯ ಒದಗಿಸಲಾಗುವುದು.ಅಂದರೆ ಅರ್ಜಿಗಳು ಹೆಚ್ಚಿಗೆ ಬಂದಾಗ ಹಿರಿತನದ ಆಧಾರದ ಮೇಲೆ ಹಿಂದೆ ತೋಟಗಾರಿಕೆ ಇಲಾಖೆಯ ವತಿಯಿಂದ ಸೌಲಭ್ಯ ಪಡೆದಿರಬಾರದು. ಅಂತಹ ರೈತರಿಗೆ ಆದ್ಯತೆ ನೀಡಲು ಅವಕಾಶವಿರುತ್ತದೆ.