ಗೋಡಂಬಿ ಬೆಳೆ ವಿಸ್ತರಣೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

Written by By: janajagran

Updated on:

Cashew farming 2020-21ನೇ ಸಾಲಿಗೆ ಗೇರು/ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದಿಂದ ಜಿಲ್ಲೆಯ ಗದಗ ತಾಲೂಕಿನ ರೈತರಿಗೆ ಗೇರು/ಗೋಡಂಬಿ ಬೆಳೆಯ ಹೊಸ ಪ್ರದೇಶ ವಿಸ್ತರಣೆಗೆ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಧನ ಪಡೆಯಲು ಇಚ್ಚಿಸುವ ಆಸಕ್ತರು (ಕೆಂಪು ಮಣ್ಣು ಹೊಂದಿರುವಂತಹ ಜಮೀನಿನ ರೈತರು) ನಿಗದಿತ ನಮೂನೆಯ ಅರ್ಜಿಯೊಂದಿಗೆ ಪಹಣಿ ಪತ್ರಿಕೆ, ಆಧಾರ್ ಕಾರ್ಡ್, ಪಾಸ್ಪೋರ್ಟ್  ಅಳತೆಯ ಫೋಟೋ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಜತೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿಗಳು, ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ 08372-295113 ಗೆ ಸಂಪರ್ಕಿಸಲು ಕೋರಲಾಗಿದೆ.

ಬಿಳಿ ಬಂಗಾರವೆಂದೇ ಕರೆಯಲ್ಪಡುವ ಗೋಡಂಬಿಯನ್ನು ಮಹಾರಾಷ್ಟ್ರಪ, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ, ಒರಿಸ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಭಾರತದಲ್ಲಿ ಗೋಡಂಬಿ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. ಕಳೆದ 20 ವರ್ಷದಿಂದ ತೋಟಗಾರಿಕೆ ಬೆಳೆಗಳಲ್ಲಿ ಗೋಡಂಬಿಯು ತನ್ನ ಪ್ರಾಮುಖ್ಯತೆಯನ್ನು ಪಡೆದಿದೆ.

ಗೋಡಂಬಿಯನ್ನು ಎಲ್ಲಾ ವಿಧಧ ಮಣ್ಣಿನಲ್ಲಿ ಬೆಳೆಯಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವ ಕೆಂಪು ಗೋಡು, ಜಂಬಿಟ್ಟಿಗೆ ಮತ್ತು ಮಧ್ಯಮ ಕಪ್ಪು ಮಣ್ಣುಗಳು ಈ ಬೆಳೆಗೆ ಸೂಕ್ತವಾಗಿದೆ. ಆದರೆ ಜೇಡಿಮಣ್ಣು ಮತ್ತು ಚೌಳು ಹಾಗೂ ಚೌಗು ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುವುದಿಲ್ಲ. ಈ ಬೆಳೆಯು ಮಣ್ಣಿನಲ್ಲಿ ಕಡಿಮೆ ತೇವಾಂಶವಿದ್ದರೂ ಹೊಂದಿಕೊಂಡು ಬೆಳೆಯಬಲ್ಲದು.ಈ ಮರದ ಪ್ರತಿಯೊಂದು ಭಾಗವೂ ಉಪಯುಕ್ತತೆಯಿಂದ ಕೂಡಿದ್ದು, ಇದು ಒಣ ಬೇಸಾಯಕ್ಕೂ ಸೂಕ್ತವಾದ ಬೆಳೆಯಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಗೋಡಂಬಿ ಬೆಳೆ ಅಭಿವೃದ್ಧಿಗೆ ಸಹಾಯಧನ ನೀಡಲಾಗುವುದು. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು.ಗೋಡಂಬಿ ಬೆಳೆಯಲು ಪ್ರತಿ ಹೆಕ್ಟೇರಿಗೆ 75 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಈ ಹಣವನ್ನು ಹಂತಹಂತವಾಗಿ ವಾರ್ಷಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.

ನಾಟಿ ಮಾಡುವ ಕಾಲ ಜೂನ್- ಆಗಸ್ಟ್ ತಿಂಗಳು

Cashew farming ಕರ್ನಾಟಕಕ್ಕೆ ಶಿಫಾರಸ್ಸು ಮಾಡಿರುವ ಗೋಡಂಬಿ ತಳಿಗಳು 

ಉಳ್ಳಾಲ-1

ಇದು ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು, ಗಿಡಕ್ಕೆ 20 ಕಿ.ಗ್ರಾಂವರೆಗೆ ಬೀಜ ಇಳುವರಿ ಬರುತ್ತದೆ. ಹಣ್ಣುಗಳು  ಹಳದಿ ಮಿಶ್ರಿತ ಕೆಂಪು ಬಣ್ಣದಿಂದಿರುತ್ತದೆ. ಬೀಜಗಳು ಮಧ್ಯಮ ಗಾತ್ರದ್ದಾಗಿರುತ್ತದೆ. ನವೆಂಬರ್ ಮಧ್ಯಭಾಗದಿಂದ ಹೂ ಬಿಡಲು ಪ್ರಾರಂಭಿಸಿ ಏಪ್ರೀಲ್ –ಮೇ ತಿಂಗಳವರೆಗೆ ಕೊಯ್ಲಿಗೆ ಬರುತ್ತದೆ. ಟೀ ಸೊಳ್ಳೆಯ ಬಾಧೆಯನ್ನು ತಪ್ಪಿಸುವ ಗುಣ ಹೊಂದಿದೆ.

ಉಳ್ಳಾಲ-2

ಇದು ಕಡಿಮೆ ಅವಧಿಯ ತಳಿಯಾಗಿದೆ. ಈ ತಳಿಯು ಸರಾಸರಿ 18.5 ಕಿ.ಗ್ರಾಂ ಇಳುವರಿ ಕೊಡುತ್ತದೆ. ಹಣ್ಣುಗಳು, ಕೆಂಪು, ಬೀಜಗಳು ಗಾತ್ರದಲ್ಲಿ ಸ್ವಲ್ಪ ಚಿಕ್ಕದ್ದಾಗಿರುತ್ತವೆ. ಫೆಬ್ರವರಿ –ಮಾರ್ಚ್ ತಿಂಗಳಲ್ಲಿ ಕೊಯ್ಲಿಗೆ ಸಿದ್ದವಾಗಿರುತ್ತದೆ.

ಉಳ್ಳಾಲ-3

ಬೇಗನೆ ಕೋಯ್ಲಿಗೆ ಬರುವ ತಳಿಯಾಗಿದ್ದು, ಸರಾಸರಿ 14.5 ಕಿ.ಗ್ರಾಂ ಇಳುವರಿ ಕೊಡುತ್ತದೆ. ಬೀಜಗಳು ಉತ್ತಮ ಗಾತ್ರ ಹೊಂದಿದ್ದು, ಜನವರಿ-ಮಾರ್ಚ್ ತಿಂಗಳಲ್ಲಿ ಕೊಯ್ಲು ಮುಗಿಯುತ್ತದೆ.

ಚಿಂತಾಮಣಿ-1

ತಡವಾಗಿ ಹೂ ಬಿಡುವ ತಳಿಯಾಗಿದ್ದು, ಹಳದಿ ಬಣ್ಣದ ಹಣ್ಣುಗಳನ್ನು ಹೊಂದಿದ್ದು, ಉತ್ತಮ ಗಾತ್ರದ ಬೀಜಗಳನ್ನು ಹೊಂದಿದೆ. 7.50 ಕಿ.ಗ್ರಾಂ ಇಳುವರಿ ಕೊಡುತ್ತದೆ. (ಬಯಲು ಸೀಮೆಗೆ ಸೂಕ್ತ)

ಚಿಂತಾಮಣಿ-2

ಒಂದು ಮರದಿಂದ ಸರಾಸರಿ 8-10 ಕಿ.ಗ್ರಾಂ ಬೀಜದ ಇಳುವರಿ ಪಡೆಯಬಹುದು. ಉತ್ತಮ ಗಾತ್ರದ ಬೀಜ ಮತ್ತು ತಿರುಳನ್ನು ಹೊಂದಿರುತ್ತದೆ.(ಬಯಲು ಸೀಮೆಗೆ ಸೂಕ್ತ)

ಧನ

ಇದು ಸಂಕರಣ ತಳಿಯಾಗಿದ್ದು,  ಈ ತಳಿಯನ್ನು ಮೈದಾನ ಪ್ರದೇಶಕ್ಕೆ ಸುಕ್ತವೆಂದು ಗುರುತಿಸಿ ಶಿಫಾರಸ್ಸು ಮಾಡಲಾಗಿದೆ. ಒಂದು ಮರ ಸರಾಸರಿ 9 ಕಿ.ಗ್ರಾಂ ಬೀಜ ಕೊಡುವ ಸಾಮರ್ಥ್ಯ ಹೊಂದಿದೆ. ಬೀಜದ ಗಾತ್ರ 7.0 ಗ್ರಾಂ ಇದೆ.

ಭಾಸ್ಕರ

ಈ ತಳಿಯನ್ನು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದವರು ಕರಾವಳಿ ಪ್ರದೇಶಕ್ಕೆ ಸೂಕ್ತವೆಂದು ಬಿಡುಗಡೆ ಮಾಡಿದ್ದಾರೆ. ಒಂದು ಮರ ಸರಾಸರಿ 10.ಕಿ.ಗ್ರಾಂ ಇಳುವರಿ ಕೊಡುತ್ತದೆ. ಟೀ ಸೊಳ್ಳೆಗಳ ಬಾಧೆಯನ್ನು ತಪ್ಪಿಸಿಕೊಳ್ಳುವಂತಹ ಗುಣ ಹೊಂದಿದೆ.

ವೆಂಗುರ್ಲಾ-4 ಇದೊಂದು ಸಂಕರಣ ತಳಿಯಾಗಿದ್ದು, ಒಂದು ಮರದಿಂದ ಸುಮಾರು 20 ಕಿ.ಗ್ರಾಂ ಬೀಜದ ಇಳುವರಿ ಪಡೆಯಬಹುದು. ಬೆಳಗಾಂ ಜಿಲ್ಲೆಯ ಗೊಡಂಬಿ ಬೆಳೆಯುವ ಪ್ರದೇಶದಲ್ಲಿ ಈ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಬೀಜವು ಮಧ್ಯಮ ಗಾತ್ರ (7 ಗ್ರಾಂ) ಇರುತ್ತದೆ.

ಇದನ್ನೂ ಓದಿ: ನಿಮ್ಮೂರಿನಲ್ಲಿ ಮಳೆಯಾಗುವ ಮುನ್ಸೂಚನೆ ನೀಡುತ್ತದೆ ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶ, ಇಲ್ಲಿದೆ ಸಂಪೂರ್ಣ ಮಾಹಿತಿ 

ಮಡಕತ್ತರ-2 ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು, ಬೀಜಗಳು ಮಧ್ಯಮ ಗಾತ್ರದ್ದಾಗಿವೆ. ಚೆನ್ನಾಗಿ ಬೆಳೆದ ಗಿಡಗಳು ಹತ್ತನೇ ವರ್ಷಕ್ಕೆ ಸರಾಸರಿ 21.40 ಕಿ.ಗ್ರಾಂ ಇಳುವರಿ ಕೊಡುತ್ತದೆ. ಪ್ರತಿ ಕಿ. ಗ್ರಾಂನಲ್ಲಿ 145-150 ಬೀಜಗಳಿರುತ್ತವೆ. ಹಣ್ಣುಗಳು ಕೆಂಪು ಮಿಶ್ರಿತ ಹಳದಿ ಬಣ್ಣದ್ದಾಗಿರುತ್ತವೆ. ಇಳುವರಿಯು ಮಾರ್ಚ್ ನಿಂದ ಜೂನ್ ವರೆಗೆ ಬರುತ್ತದೆ.

ಪ್ರಿಯಾಂಕಾ

ಈ ತಳಿಯು ಕೆಂಪು ಮಿಶ್ರಿತ ಹಳದಿ ಬಣ್ಣದ ಹಣ್ಣನ್ನು ಹೊಂದಿರುತ್ತದೆ. ಮಧ್ಯಮ ಗಾತ್ರದ ಗಿಡವನ್ನು ಹೊಂದಿರುವ ಈ ತಳಿಯು ಸರಾಸರಿ 18.40 ಕಿ.ಗ್ರಾಂ ಇಳುವರಿ ನೀಡುತ್ತದೆ. ಪ್ರತಿ ಕಿ.ಗ್ರಾಂ ನಲ್ಲಿ 100 ಬೀಜಗಳು ಇರುತ್ತವೆ.

Cashew farming ಕೊಯ್ಲು ಮತ್ತು ಇಳುವರಿ

ನಾಟಿ ಮಾಡಿದ ಮೂರನೇ ವರ್ಷದಿಂದ ಇಳುವರಿ ಪ್ರಾರಂಭಗೊಂಡು ಸುಮಾರು 8-10 ವರ್ಷದ ಪ್ರತಿ ಮರದಿಂದ ವರ್ಷವೊಂದಕ್ಕೆ ಸರಾಸರಿ 8-10 ಕಿ. ಗ್ರಾಂ ಬೀಜವನ್ನು ಪಡೆಯಬಹುದು. ಪ್ರತಿ ಹೆಕ್ಟೇರಿಗೆ 1.5 ರಿಂದ 1.7 ಟನ್ ಗೋಡಂಬಿ ಬೀಜ ಪಡೆಯಬಹುದು. ಬಿದ್ದ ಹಣ್ಣುಗಳಿಂದ ಬೀಜಗಳನ್ನು ಬಿಡಿಸಿ ಎರಡರಿಂದ ಮೂರು ದಿವಸ ಬಿಸಿಲಿನಲ್ಲಿ ಒಣಗಿಸಿ ಸಂಗ್ರಹಣೆ ಮಾಡುವುದು ಸೂಕ್ತ.

Cashew farming ಗೇರು ಖರೀದಿ ಕೇಂದ್ರಗಳು/ ಬೆಲೆ

ಕಚ್ಚಾ ಗೇರು ಬೀಜವನ್ನು ಕೊಯ್ಲು ಮಾಡಿದ ನಂತರ ಎಲ್ಲಿ ಮಾರಾಟ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.  ರೈತರು ತಮಗೆ ಹತ್ತಿರದ ಖರೀದಿ ಕೇಂದ್ರಗಳು ಅಥವಾ ಸಂಸ್ಕರಣ ಘಟಕಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಇದಲ್ಲದೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಖಚ್ಚಾ ಗೇರು ಬೀಜದ ಖರೀದಿ ಬೆಲೆಯ ಮಾಹಿತಿಯನ್ನು ಅರಿತಿಕೊಂಡರೆ ಉತ್ತಮ ಲಾಭ ಗಳಿಸಬಹುದು.

ಗೋಡಂಬಿ ಬೆಳೆಯುವ ಮುನ್ನ  ಅವರ ಜಮೀನಿನ ಮಣ್ಣಿನ ಗುಣಲಕ್ಷಣಗಳು, ವಾತಾವರಣ / ಹವಾಗುಣ ಇತ್ಯಾದಿಗಳ ಬಗ್ಗೆ ವಿಚಾರಿಸಿ ಗೇರು ಕೃಷಿ ಸೂಕ್ತವೋ ಅಲ್ಲವೋ ಎಂಬುದನ್ನು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಬೆಳೆಯಬೇಕು.

Leave a Comment