ಸಾಂಪ್ರದಾಯಿಕ ಕೃಷಿಗೆ ಜೋತುಬೀಳದೆ ವೈವಿದ್ಯಮಯ ಬೆಳೆಗಳಲ್ಲಿ ಎಷ್ಟೋ ರೈತರು ಇತ್ತೀಚೆಗೆ ಆದಾಯದ ದಾರಿ ಹುಡುಕಿಕೊಳ್ಳುತ್ತಿದ್ದಾರೆ. ಕಡಿಮೆ ಜಮೀನಿನಲ್ಲಿ ಹೆಚ್ಚು ಇಳುವರಿಯನ್ನು (best banana variety) ಪಡೆದುಕೊಳ್ಳುತ್ತಾರೆ.
ಹೌದು ಅರು ಸಾಂಪ್ರದಾಯಿಕ ಕೃಷಿಗೆ ಒತ್ತುಕೊಡದೆ ಈಗಿನ ತಾಂತ್ರಿಕ ಯುಗದಲ್ಲಿ ಯಾವ ತಳಿ ಹೆಚ್ಚು ಇಳುವರಿ ಕೊಡುತ್ತದೆ. ಅದರ ಗುಣಮಟ್ಟ ಹೀಗೆ ಹತ್ತು ಹಲವಾರು ವಿಷಯಗಳನ್ನು ತಿಳಿದುಕೊಂಡು ಕೃಷಿಯಲ್ಲಿ ತೊಡಗಿ ಯಶಸ್ವಿಯೂ ಆಗಿದ್ದಾರೆ.ಹೊಲಗಳಲಷ್ಟೇ ಅಲ್ಲ, ಹೊಲದ ಬದಿಯಲ್ಲೂ ಹತ್ತಾರು ತಳಿಯ ಬಾಳೆ ಗಿಡ ಬೆಳೆಸುತ್ತಾರೆ.
ಬಾಳೆ ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆಹಣ್ಣು ಕೆಲ ಖನಿಜಾಂಶಗಳು ಹಾಗೂ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಶೇಕಡಾ 27 ರಷ್ಟು ಶರ್ಕರಪಿಷ್ಠವನ್ನು ಹೊಂದಿದ್ದು, ಶಕ್ತಿಯ ಆಗರವಾಗಿದೆ. ಬಾಳೆ ಬೆಳೆಯನ್ನು ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪುಗೋಡು ಮಣ್ಣಿನಿಂದ ಹಿಡಿದು ಕಪ್ಪು ಮಣ್ಣಿನಲ್ಲಿಯೂ ಬೆಳೆಯಬಹುದು. ತೇವಾಂಶವನ್ನು ಹೆಚ್ಚುಕಾಲ ಕಾಯ್ದಿಟ್ಟುಕೊಳ್ಳುವಂತಹ ಹೆಚ್ಚು ಸಾವಯವ ಅಂಶವಿರುವ ಮಣ್ಣು ಈ ಬೆಳೆಗೆ ಅತೀ ಯೋಗ್ಯ ಬಾಳೆಯನ್ನು ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದು.
ನಾಟಿ ಕಾಲ ಚಳಿಗಾಲವನ್ನು (ನವೆಂಬರ್- ಡಿಸೆಂಬರ್ ) ಹೊರತು ಪಡಿಸಿ ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದು. ಜೂನ್, ಜುಲೈ ತಿಂಗಳ ಅತೀ ಸೂಕ್ತ
ತಳಿಗಳು:
ಭಾರತದಲ್ಲಿ 50ಕ್ಕೂ ಹೆಚ್ಚು ತಳಿಗಳನ್ನು ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದ್ದು, ಕೆಲ ತಳಿಗಳ ಮಾಹಿತಿ ಇಲ್ಲಿದೆ.
ಪೂವನ್ (ಸುಗಂಧಿ):
ಇದು ಸಾಮಾನ್ಯವಾಗಿ ಎಲ್ಲಾ ಕಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ತಳಿ. ಗಿಡ ಎತ್ತರವಾಗಿದ್ದು, ತೆಳು ಸಿಪ್ಪೆಯಿಂದ ಕೂಡಿದ ಚಿಕ್ಕ ಗಾತ್ರದ ಹಣ್ಣುಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಗೊನೆಯಲ್ಲಿ ಸರಾಸರಿ 225 ಹಣ್ಣುಗಳಿರುತ್ತವೆ. ಹಣ್ಣುಗಳು ಸ್ವಲ್ಪ ಹುಳಿಯಾಗಿದ್ದರೂ ತಿನ್ನಲು ರುಚಿಕರವಾಗಿರುತ್ತವೆ. ಹಣ್ಣಿನ ತಿರುಳಿನಲ್ಲಿ ಅಭಿವೃದ್ಧಿ ಹೊಂದಿದ ಚಿಕ್ಕ ಬೀಜಗಳು ಕೂಡ ಇರುತ್ತವೆ. ಈ ತಳಿಯ ಪನಾಮಾ ಸೊರಗು ರೋಗ ಮತ್ತು ಎಲೆಚುಕ್ಕೆರೋಗಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು, ನಮ್ಮ ರಾಜ್ಯದ ಜನಪ್ರಿಯ ತಳಿಗಳಲ್ಲೊಂದಾಗಿದೆ.
ಪಚ್ಚ ಬಳೆ:
ಇದು ನಮ್ಮ ರಾಜ್ಯದ ಮತ್ತೊಂದು ಜನಪ್ರಿಯ ತಳಿಯಾಗಿದೆ. ಗಿಡಗಳು ಗಿಡ್ಡವಾಗಿ ಸುಮಾರು 6 ಅಡಿ ಎತ್ತರವಾಗಿರುತ್ತವೆ. ಈ ತಳಿ ಹೆಚ್ಚಾಗಿ ಗಾಳಿ ಮತ್ತು ಉಷ್ಣ ವಾತಾವರಣವನ್ನು ಸಹಿಸಬಲ್ಲದು. ಹಣ್ಣುಗಳು ದೊಡ್ಡವಾಗಿದ್ದು, ತುದಿಯಲ್ಲಿ ಬಾಗಿರುತ್ತವೆ. ಇದರ, ತಿರುಳಉ ಮೃದುವಾಗಿದ್ದು, ಸಿಹಿಯಾಗಿರುತ್ತವೆ. ಚೆನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳು ಇರುತ್ತವೆ. ಈ ತಳಿಯು ಪನಾಮಾ ಸೊರಗು ರೋಗ ನಿರೋಧಕವಾಗಿದೆ.
ರೋಬಸ್ಟ್:
ಇದು ಮಧ್ಯಮ ಎತ್ತರ ತಳಿಯಾಗಿದ್ದು, ಕ್ಯಾವೆಂಡಿಷ್ ಗುಂಪಿಗೆ ಸೇರಿದೆ. ದೊಡ್ಡ ಗಾತ್ರದ ಹೆಚ್ಚು ಹಣ್ಣುಗಳುಳ್ಳ ಗೊನೆಗಳನ್ನು ಕೊಡುತ್ತದೆ. ಹಣ್ಣುಗಳು ನೆಟ್ಟಗೆ ಇದ್ದು, ಗೊನೆಯು ಸಿಲಂಡರ್ ಆಕಾರದಲ್ಲಿರುತ್ತವೆ. ಆದ್ದರಿಂದ ರಪ್ತು ಮಾಡಲು ಈ ತಳಿ ಸೂಕ್ತವಾಗಿದೆ. ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.
ಗ್ರ್ಯಾಂಡ್ ನೈನ್ (ಜಿ-9):
ಇದು ಮಧ್ಯಮ ಎತ್ತರದ ತಳಿಯಾಗಿದ್ದು, ಕ್ಯಾವೆಂಡಿಷ್ ಗುಂಪಿಗೆ ಸೇರಿದೆ. ಹಣ್ಣುಗಳ ಗಾತ್ರ ರೋಬಸ್ಟ್ಗಿಂದ ಹೆಚ್ಚು ದೊಡ್ಡದಾಗಿರುತ್ತವೆ. ಹಣ್ಣುಗಳು ನೆಟ್ಟಗೆ ಇದ್ದು, ಗೊನೆಯು ಸಿಲಿಂಡರ್ ಆಕಾರವಾಗಿರುತ್ತವೆ. ಪನಾಮಾ ಸೊರಗು ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.
ರಸಬಾಳೆ:
ಇದು ಅತ್ಯಂತ ಸ್ವಾದಿಷ್ಟ ತಳಿಗಳಲ್ಲೊಂದಾಗಿದ್ದು, ಗಿಡ 8-9 ಅಡಿ ಎತ್ತರ ಬೆಳೆಯುವುದು. ಮಧ್ಯಮ ಗಾತ್ರದ ಗಟ್ಟಿ ತಿರುಳಿನ ಆಕರ್ಷಕ ಹಳಿ ವರ್ಣದ ತೆಳು ಸಿಪ್ಪೆ ಹೊಂದಿದ ರುಚಿಕರವಾದ ಹಣ್ಣನ್ನು ಕೊಡುತ್ತದ. ಚೆನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳಿರುತ್ತವೆ. ಈ ತಳಿಯನ್ನು ಮೈಸೂರು ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತದೆ.
ರಾಜಾಪುರಿ:
ಇದು ಸ್ಥಳೀಯ ಬಾಳೆ ತಳಿಯಾಗಿದ್ದು, ಬೆಳಗಾವಿ ಜಿಲ್ಲೆಯ ಮುನವಳ್ಳಿ, ಸವದತ್ತಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಗಿಡ್ಡ ತಳಿಯಾಗಿದ್ದು, ಗೊನೆಯು ಸುಮಾರು 10-15 ಕಿಗ್ರಾಂ ತೂಕವಿದ್ದು, ಹಣ್ಣುಗಳು ರಚಿಯಾಗಿರುತ್ತವೆ. 90-110 ಹಣ್ಣುಗಳನ್ನು ಹೊಂದಿರುತ್ತದೆ.
ಏಲಕ್ಕಿ/ ಪುಟ್ಟಬಾಳೆ/ಮಿಟ್ಲಿಬಾಳೆ:
ಮಧುರವಾದ ರುಚಿ, ಸಿಹಿ ಮತ್ತು ಉತ್ತಮ ಶೇಖರಣಾ ಗುಣಮಟ್ಟವನ್ನು ಹೊಂದಿರು ಈ ತಳಿ ಗಿಡ ಎತ್ತರವಾಗಿದ್ದು, 13-14 ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಗೊನೆಯು 10-15 ಕಿ.ಗ್ರಾಂ ತೂಕವಿರುತ್ತದೆ. 150-160 ಹಣ್ಣುಗಳನ್ನು ಹೊಂದಿರುತ್ತದೆ.ಹಣ್ಣುಗಳು ಚಿಕ್ಕದಾಗಿರುತ್ತವೆ. ಹಳದಿ ಬಣ್ಣದ ತೆಳುವಾದ ಸಿಪ್ಪೆಯನ್ನು ಹೊಂದಿರುತ್ತದೆ. ತಿರುಳು ಕೆನೆ ಬಣ್ಣದಿಂದ ಕೂಡಿರುತ್ತದೆ.
*ಆಕರ: ತೊಡಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ