ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಾಣಿಕೆಗೆ ತರಬೇತಿ ನೀಡಲು ಅರ್ಜಿ ಆಹ್ವಾನ

Written by By: janajagran

Published on:

ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ಹಾಗೂ ಕುರಿ ಮೇಕೆ ಸಾಕಾಣಿಕೆ ಮಾಡಿ ಉಪಜೀವನ ಕಟ್ಟಿಕೊಳ್ಳಲಿಚ್ಚಿಸುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ರೈತರು ಎರಡು ದಿನಗಳ ಉಚಿತವಾಗಿ ಕುರಿ, ಮೇಕೆ ಸಾಕಾಣಿಕೆ ಹಾಗೂ ಎರಡು ದಿನ ವೈಜ್ಞಾನಿಕ ಹೈನುಗಾರಿಕೆಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕಲಬುರಗಿ ಜಿಲ್ಲೆಯ ಸೇಡಂ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಮೇ 4 ಹಾಗೂ 5 ರಂದು ವೈಜ್ಞಾನಿಕ ಹೈನುಗಾರಿಕೆ ಹಾಗೂ ಮೇ 6 ಮತ್ತು 7 ರಂದು ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.

ಒಂದು ಬ್ಯಾಚ್ ನಲ್ಲಿ 25 ಜನ ರೈತರಿಗೆ ತರಬೇತಿ ನೀಡಲಾಗುತ್ತದೆ. ಮೊದಲು ಬಂದವರಿಗೆ ಅವಕಾಶ ನೀಡಲಾಗುವುದು. ತರಬೇತಿಗೆ ಹಾಜರಾಗುವ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರೈತರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಮಧ್ಯಾಹ್ನ ಅಲ್ಪ ಉಪಹಾರ ನೀಡಲಾಗುವುದು. ಎರಡು ದಿನಗಳ ಕಾಲ ಕಡ್ಡಾಯವಾಗಿ ತರಬೇತಿಗೆ ಹಾಜರಾದವರಿಗೆ ಮಾತ್ರ ತರಬೇತಿ ಪ್ರಮಾಣಪತ್ರ ನೀಡಲಾಗುವುದು.

ಈ ತರಬೇತಿಗೆ ಹಾಜರಾಗುವ ರೈತರು ಅರ್ಜಿಯ ಜೊತೆಗೆ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ ಲಗತ್ತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರ ಲಗತ್ತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ಸೇಡಂ ರಸ್ತೆ, ಕಲಬುರಗಿ ವಿಳಾಸಕ್ಕೆ ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-220576ಗೆ ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ಓದಿ : ಜಮೀನಿನ ತತ್ಕಾಲ್ ಪೋಡಿ, 11 ಇ ನಕ್ಷೆ ಹಾಗೂ ಭೂ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಸ್ವಂತ ಉದ್ಯೋಗದ ಆಕಾಂಕ್ಷಿಗಳಿಗೆ, ಕೃಷಿಯ ಜೊತೆ ಉಪಕಸುಬು ಮಾಡಿ ಆದಾಯ ಹೆಚ್ಚಿಸಿಕೊಳ್ಳಬೇಕು ಎನ್ನುವವರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಉತ್ತಮ ಆಯ್ಕೆಯಾಗಿರುತ್ತದೆ. ಕರ್ನಾಟಕದ ಹಲವೆಡೆ ಈಗಾಗಲೇ ಪ್ರಗತಿಪರ ರೈತರು ಕುರಿ ಸಾಕಾಣಿಕೆ ಮಾಡಿ ಲಾಭದಾಯಕ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಬಹಳಷ್ಟು ಜನ ಹಳೇ ಪದ್ದತಿಯಲ್ಲಿಯೇ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಅಂತಹ ರೈತರು ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಿ ವೃತ್ತಿಯಲ್ಲಿ ಬದುಕು ಕಟ್ಟಿಕೊಳ್ಳಬಹುದು.

ರೈತರಿಗೆ ನೀಡುವ ತರಬೇತಿಯಲ್ಲಿ ಕುರಿ, ಮೇಕೆ ತಳಿಗಳ ಭಿನ್ನತೆ, ಮೇವು ವಿತರಣೆ, ಕುರಿ ಶೆಡ್ ನಿರ್ಮಾಣ ಸೇರಿದಂತೆ ಇನ್ನಿತರ ಮಾಹಿತಿಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ನೀಡಲಾಗುವುದು.

ಕುರಿ ಮೇಕೆಯಲ್ಲಿ ಮೂರು ಪ್ರಕಾರಗಳು

ಕುರಿ ಸಾಕಾಣಿಕೆ ಮಾಡುವುದಕ್ಕಿಂತ ಮುಂಚಿತವಾಗಿ ಯಾವುದಕ್ಕಾಗಿ ಕುರಿ ಸಾಕಾಣಿಕೆ ಮಾಡಲಿಚ್ಚಿಸುವಿರಿ ಎಂಬುದನ್ನು ತಿಳಿದುಕೊಳ್ಳಬೇಕು. ಮಾಂಸಕ್ಕಾಗಿ, ಉಣ್ಣೆ ಉತ್ಪಾದಕ ಹಾಗೂ ಮಾಂಸ ಮತ್ತು ಉಣ್ಣೆಗಾಗಿ ಸಾಕಾಣಿಕೆ ಮಾಡಲಿಚ್ಚಿಸುತ್ತೀರೋ ಎಂಬುದರ ಬಗ್ಗೆ ನಿರ್ಧರಿಸಬೇಕು. ಏಕೆಂದರೆ ಇಲ್ಲಿ ಕುರಿ, ಮೇಕೆ ತಳಿಗಳ ಆಯ್ಕೆಯೂ ಪ್ರಮುಖವಾಗಿದೆ.

ಕುರಿ ಮೇಕೆ ಸಾಕಾಣಿಕೆಗೆ ಸಹಾಯಧನ ನೀಡಲಾಗುವುದು. ರೈತರು ಕುರಿ ಸಾಕಾಣಿಕೆ ಮಾಡುವುದಕ್ಕಿಂತ ಮುಂಚಿತವಾಗಿ ಹತ್ತಿರದ ಬ್ಯಾಂಕ್ ಗಳಲ್ಲಿ ವಿಚಾರಿಸಬಹುದು. ಅಥವಾ ಪಶುಇಲಾಖೆಯ ಕಚೇರಿಯಲ್ಲಿ ವಿಚಾರಿಸಿ ಸಬ್ಸಿಡಿ ಬಗ್ಗೆ ಮಾಹಿತಿ ಪಡೆಯಬಹುದು. ಕುರಿ ಮತ್ತು ಮೇಕೆ ಸಾಕಾಣಿಕೆಗೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಡಿಯಲ್ಲಿ 68 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಗ್ರಾಮ ಪಂಚಾಯತಿನಲ್ಲಿಯೂ ವಿಚಾರಿಸಬಹುದು.

ಪಶುಪಾಲನೆಗೆ ಆರಂಭವಾಗಿದೆ ಸಹಾಯವಾಣಿ

ರೈತರು ಮನೆಯಲ್ಲಿಯೇ ಕುಳಿತು ಪಶುಪಾಲನೆ ಕುರಿತು ಮಾಹಿತಿ ಕೇಳಲು ಪಶುಪಾಲಕರ ಸಹಾಯವಾಣಿ ಆರಂಭಿಸಲಾಗಿದೆ. ಹೌದು, ರೈತರು 8277 100 200 ಎಂಬ ಸಹಾಯವಾಣಿಗೆ ರೈತರು ಮನೆಯಲ್ಲಿಯೇ ಕುಳಿತು ಕರೆ ಮಾಡಿದರೆ ಸಾಕು. ಪಶುಪಾಲನೆ ಕುರಿತು 24*7 ಕಾರ್ಯ ನಿರ್ವಹಿಸುತ್ತದೆ. ಈ ಸಹಾಯವಾಣಿಯು ರೈತರಿಗಾಗಿ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ.

ರೈತರು ಈ ಸಮಯದ ಅವಧಿಯಲ್ಲಿ ಕರೆ ಮಾಡಿದರೆ ಕುರಿ, ಮೇಕೆ, ಹೈನುಗಾರಿಕೆ, ಮೇಕೆ ಸಾಕಾಣಿಕೆ ಕುರಿತು ಮಾಹಿತಿ ನೀಡುವರು. ಪಶುಪಾಲನೆಗೆ ಯಾವ ಜಿಲ್ಲೆಗೆ ಯಾವ ತಳಿಗಳು ಸೂಕ್ತ ಎಂಬುದರ ಕುರಿತು ಮಾಹಿತಿ ನೀಡುವರು. ಇದರೊಂದಿಗೆ  ಪಶುಸಂಗೋಪನಾ ಚಟುವಟಿಕೆಗೆ ವಿವಿಧ ಬ್ಯಾಂಕುಗಳಿಂದ ಸಿಗುವ ಸಾಲಸೌಲಭ್ಯದ ಬಗ್ಗೆ ರೈತರಿಗೆ ಮಾಹಿತಿ ನೀಡುವರು. ತುರ್ತು ಪಶುವೈದ್ಯ ಸೇವೆಗಳಿಗಾಗಿ ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ಕರೆ ವರ್ಗಾಯಿಸಿ ರೈತರಿಗೆ ಅಗತ್ಯ ಮಾಹಿತಿ ನೀಡುವಲ್ಲಿ ಸಹಕರಿಸುವರು.

Leave a Comment