ಹನಿ ನೀರಾವರಿ ಘಟಕ ನಿರ್ಮಾಣಕ್ಕೆ ಶೇ. 90 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Drip irrigation subsidy apply : ಹನಿ ನೀರಾವರಿ ಘಟಕ ಸ್ಥಾಪನೆ ಮಾಡಲು ಶೇ. 45 ರಿಂದ 90 ರವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಬಾಗಲಕೋಟೆ, ಗದಗ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಅರ್ಜಿ ಆಹ್ವಾನಿಸಲಾಗಿದೆ.

ಬಾಗಲಕೋಟೆ ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಕೇಂದ್ರ ಪುರಸ್ಕೃತ ಪ್ರದಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರತಿ ಹನಿಗೆ ಅಧಿಕ ಬೆಳೆ  ಯೋಜನೆಯಡಿ ಹನಿ ನೀರಾವರಿ ಘಟಕಕ್ಕೆ ಸಹಾಯಧನ ಲಭ್ಯವಿದ್ದು, ಕಾಫಿ, ಟೀ, ರಬ್ಬರ್ ಹಾಗೂ ಅಡಿಕೆ ಬೆಳೆಗಳನ್ನು ಹೊರತುಪಡಿಸಿ  ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಹನಿ ನೀರಾವರಿ  ಅಳವಡಿಸಿ ಸಹಾಯಧನ ನೀಡಲಾಗುತ್ತಿದೆ.

ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗಳಿಗೆ ಗರಿಷ್ಠ 5 ಹೆಕ್ಟೆರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ. ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುವುದು.

ಎಲ್ಲಾ ವರ್ಗದ ರೈತರಿಗೆ ಮೊದಲು 2 ಹೆಕ್ಟರ್ ಪ್ರದೇಶದವರೆಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಇದರೊಂದಿಗೆ 2 ಹೆಕ್ಟೇರ್ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನದ ಸೌಲಭ್ಯವಿದೆ.

ಈಗಾಗಲೇ ಸಹಾಯಧನ ಪಡೆದು 7 ವರ್ಷಗಳಾಗಿದ್ದಲ್ಲಿ ಪ್ರಸಕ್ತ ಸಾಲಿನಲ್ಲಿ ಕೂಡ ಮತ್ತೊಮ್ಮೆ ಹೊಸದಾಗಿ ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿಕೊಂಡಲ್ಲಿ ಸಹಾಯಧನ ನೀಡಲಾಗುತ್ತದೆ.

ಹನಿ ನೀರಾವರಿ ಅಳವಡಿಕೆಗೆ ಆಯಾ ತಾಲೂಕು  ತೋಟಗಾರಿಕೆ ಇಲಾಖೆಯಲ್ಲಿ ಹೆಸರು ನೋಂದಾಯಿಸಿ ಕಾರ್ಯಾದೇಶ ಪಡೆಯತಕ್ಕದ್ದು. ಅರ್ಜಿಗಳನ್ನು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕಚೇರಿಗಳಲ್ಲಿ ಪಡೆದು ಸಲ್ಲಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Drip irrigation subsidy apply  ಗದಗ ಜಿಲ್ಲೆಯಿಂದಲೂ ಹನಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

2026-27ನೇ ಸಾಲಿನ ರಾಷ್ಟ್ರೀಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ( ಕಂದು ಬಾಳೆ, ಅಂಗಾಂಶ ಬಾಳೆ, ಪಪ್ಪಾಯ, ಅಂಜೂರ, ದಾಳಿಂಬೆ, ಮಾವು, ಸೀಬೆ, ಹುಣಸೆ, ನಿಂಬೆ, ಹೈಬ್ರಿಡ್, ತರಕಾರಿ, ಸೇವಂತಿಗೆ ಚೆಂಡು ಹೂವು, ಮಲ್ಲಿಗೆ, ಸಾಂಬಾರು ಮತ್ತು ಔಷಧ ಗಿಡಗಳು) ಕೃಷಿ ಹೊಂಡ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ, ಕಳೆ ಛಾಪೆ, ಟ್ರ್ಯಾಕ್ಟರ್, ಫಾರ್ಮ್ ಗೇಟ್ ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ, ತಳ್ಳುವ ಗಾಡಿ ಮತ್ತು ಇತ್ಯಾದಿ ಮುಂದುವರಿದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಮತ್ತು ರಾಜ್ಯ ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ ವ್ಯವಸಾಯ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಹಾಗೂ ವಿವಿಧ ಘಟಕಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ : ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದರೆ 35 ಸಾವಿರ ರೂಪಾಯಿಯವರಿಗೆ ಪ್ರೋತ್ಸಾಹಧನ ಸಿಗಲಿದೆ

ಅರ್ಜಿಯೊಂದಿಗೆ ಪಹಣಿ ಮತ್ತು ಆಧಾರ್ ಕಾರ್ಡ್ ಲಗತ್ತಿಸಿ ಸಲ್ಲಿಸಬೇಕು. ಆಸಕ್ತಿಯುಳ್ಳ ರೈತರು ಜೂನ್ 15 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಮುಂಡರಗಿ ಕಚೇರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮಾರ್ಗಸೂಚಿ ಪ್ರಕಾರ ಆಯ್ಕೆಯಾದ ರೈತರಿಗೆ ಆದ್ಯತೆ ಮೇರೆಗೆ ಜೇಷ್ಠತೆ ಅನುಸಾರವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ರೈತರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಜಿಲ್ಲೆಯಿಂದ ಅರ್ಜಿ ಆಹ್ವಾನಿಸಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

Leave a Comment