ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನಿಂದ ರೈತರಿಗೆ ಈ ವರ್ಷ 500 ಕೋಟಿ ಹೊಸ ಸಾಲ ನೀಡುವ ಗುರಿ ಹೊಂದಲಾಗಿದೆ.  ಎಂದು ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಬೆಳೆ ಸಾಲ ವಿತರಣೆಗೆ  ಇದೇ ಯುಗಾದಿ ಹಬ್ಬದಂದು ಚಾಲನೆ ನೀಡಲಾಗುವುದು. ರೈತರಿಗೆ ಸಾಲ ನೀಡುವ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಲಾಗುವುದು. ಇದಕ್ಕೂ ಮುನ್ನ ರೈತರಿಗೆ ಬಹಳವೆಂದರೆ 10 ಇಲ್ಲವೇ 15 ಸಾವಿರ ರೂಪಾಯಿ ಸಾಲ ನೀಡಲಾಗುತ್ತಿತ್ತು. ಈಗ 50 ಸಾವಿರ ರೂಪಾಯಿಯಿಂದಲೇ ಆರಂಭಿಸಲಾಗುವುದು. ಮೂರು ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ ನೀಡಲಾಗುವುದು. ಹಳೆ ರೈತರೊಂದಿಗೆ ಹೊರ ರೈತರಿಗೆ ಸಾಲ ನೀಡಲಾಗುವುದು ಎಂದರು.

ಆರ್ಥಿಕ ದುಸ್ಥಿತಿಯಿಂದ ಡಿಸಿಸಿ ಬ್ಯಂಕ್ ಬೀಗ ಹಾಕುವ ಹಂತಕ್ಕೆ ತಲುಪಿತ್ತು. ತಾವು ಅಧ್ಯಕ್ಷರಾದ ಮೂರು ತಿಂಗಳ ಅವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ನಿಂದ ಪಡೆಯಲಾಗಿದ್ದ 202 ಕೋಟಿ ರೂಪಾಯಿಗಳನ್ನು ಬಡ್ಜಿ ಸಮೇತ ಮರುಪಾವತಿಸಲಾಗಿದೆ. ಅಲ್ಲದೆ ಹೊಸದಾಗಿ ಕಡಿಮೆ ಬಡ್ಡಿದರದಲ್ಲಿ 200 ಕೋಟಿ ರೂಪಾಯಿ ಹೆಚ್ಚುವರಿ ಸಾಲಕ್ಕೆ ಮಂಜೂರಾತಿ ನೀಡಿದ ಪರಿಣಾಮ ಹಾಗೂ 130 ಕೋಟಿ ರೂಪಾಯಿ ಬೆಳೆಸಾಲ ವಸೂಲಾತಿಯಾಗಿದ್ದರಿಂದ ಬ್ಯಾಂಕ್ ಬೆಳೆಯುವಂತಾಗಿದೆ ಎಂದರು

ಇದೇ ತಿಂಗಳು ಏಪ್ರೀಲ್ 15 ರಿಂದ ( ಯುಗಾದಿ ಹಬ್ಬದಿಂದ )  ಹೊಸ ಸಾಲ ಯೋಜನೆ ಜಾರಿಗೆ ಬರಲಿದೆ. ರೈತರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಮಹಿಳಾ ಸ್ವ ಸಹಾಯ  ಸಂಘಗಳಿಗೆ ಹೈನುಗಾರಿಕೆ, ಸ್ವ ಉದ್ಯೋಗ, ಕೋಲಿ ಸಾಕಾಣಿಕೆ, ಕುರಿ ಸಾಕಾಣಿಕೆಗೆ 5 ಲಕ್ಷ ರುಪಾಯಿಯವರೆಗೆ ಸಾಲ ಕೊಡಲಾಗುವುದು.

ರೈತರಿಗೆ ಹೈನುಗಾರಿಕೆ, ತೋಟಗಾರಿಕೆಗೆ 3 ಲಕ್ಷ ರೂಪಾಯಿ,  10 ಲಕ್ಷದವರೆಗೆ ಮಧ್ಯಮಾವಧಿ ಬೆಳೆ ಸಾಲ ನೀಡಲಾಗುವುದು. ಗರಿಷ್ಟ 40 ಲಕ್ಷದವರೆಗೆ ವಾಣಿಜ್ಯ ಸಾಲವನ್ನು  10 ಸಾವಿರ ವ್ಯಾಪಾರಸ್ಥರಿಗೆ ನೀಡುವ ಯೋಜನೆ ಇದೆ. ರೈತರಿಗೆ ಚಿನ್ನದ ಮೇಲೆಯೂ ಸಾಲ ಪಡೆದುಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.

ಬ್ಯಾಂಕ್ ನ ಮುಖ್ಯ ಕಚೇರಿ ಮತ್ತು ಎಲ್ಲಾ ಶಾಖಖೆಗಳನ್ನು ಮುಂದಿನ ಒಂದು ವರ್ಷದ ಒಳಗೆ ನವೀಕರಣ ಮಾಡಲಾಗುವುದು. ಅಲ್ಲದೆ, ಹೊಸ ತಾಲೂಕಗಳಲ್ಲಿಯೂ ಶಾಖೆಗಳನ್ನು ತೆರೆಯಲಾಗುವುದು.

ವಿವಿಧ ಕಾರಣಗಳಿಂದ ರೈತರಿಗೆ ಸಾಲದ ವಿತರಣೆ ನಿಂತು ಹೋಗಿತ್ತು. ಬ್ಯಾಂಕ್ ನ ಸ್ಥಿತಿಗತಿ ಸರಿ ಇರಲಿಲ್ಲ. ಈಗ ಹಂತಹಂತವಾಗಿ ಬ್ಯಾಂಕ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಂದರು.

Leave a Reply

Your email address will not be published.