ಪಶ್ಚಿಮ ಘಟ್ಟ ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ಭಾನುವಾರ ಒಳಹರಿವು ಹೆಚ್ಚಾಗಿದ್ದರಿಂದ ಪ್ರವಾಹ ಭೀತಿ ಎದುರಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯದ 12 ಕ್ರಸ್ಟ್ ಗೇಟ್ ಗಳ ಮೂಲಕ ಭಾನುವಾರ ನದಿಗೆ ನೀರು ಬಿಡಲಾಗಿದೆ. ಜಲಾಶಯದ ಗರಿಷ್ಠ 100.855 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗಾಗಲೇ 88 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು ನಿರಂತರ ಹೆಚ್ಚಾಗುತ್ತಿದೆ. ಜಲಾಶಯದ 33 ಕ್ಸ್ಟ್ ಗೇಟ್ ಪೈಕಿ ಬೆಳಗ್ಗೆ 5 ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರು ಬಿಡಲಾಗಿತ್ತು. ಆದರೆ, ಒಳ ಹರಿವು ಹೆಚ್ಚಾಗುತ್ತಿದ್ದರಿಂದ ಸಾಯಂಕಾಲ 4 ಗಂಟೆಗೆ 12 ಕ್ರಸ್ಟ್ ಗೇಟ್ ತೆರೆದು ನದಿಗೆ 32.736 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.
ಹರವಿ, ಕುರುವತ್ತಿ, ಲಿಂಗನಾಯಕನಹಳ್ಳಿ, ಕೋಟೆಹಾಳ, ಅಂಗೂರ, ಮರಕಬ್ಬಿ, ಬ್ಯಾಲಹುಣ್ಣಿ, ನಂದಿಗಾವಿ, ಬನ್ನಿಮಟ್ಟಿ ಗ್ರಾಮಗಳ ನದಿ ತೀರದ ಹೊಲ, ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಇದರಿಂದ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಸದ್ಯದ ಮಟ್ಟಿಗೆ ಪ್ರವಾಹದಿಂದ ತೊಂದರೆಯಾಗಿಲ್ಲ. ನದಿ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅವಶ್ಯಕತೆ ಬಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ತಹಶೀಲ್ದಾರ ಎ.ಎಚ್. ಮಹೇಂದ್ರ ತಿಳಿಸಿದ್ದಾರೆ.ನದಿ ಪಾತ್ರದಲ್ಲಿ ಗ್ರಾಮಸ್ಥರು, ಜನಜಾನುವಾರುಗಳನ್ನು ತೆಗೆದುಕೊಂಡು ಹೋಗದಿರುವಂತೆ ಎಚ್ಚರಿಕೆ ನೀಡಲಾಗಿದೆ.
ಕಾವೇರಿ ನದಿಗೆ ಕೆ.ಆರ್.ಎಸ್ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ-ನದಿ ಪಾತ್ರದ ಜನರಿಗೆ ಎಚ್ಚರಿಕೆ
ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ಎಸ್ ಜಲಾಶಯ ಕೂಡ ಭರ್ತಿಯಾಗುವತ್ತ ಸಾಗಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬಿಡಲಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಕಾವೇರಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ತುಂಬಿ ಹರಿದ ಬಸವಸಾಗರ
ಕಲ್ಯಾಣ ಕರ್ನಾಟಕದ ಪ್ರಮುಖ ಜಲಾಶಯವಾಗಿರುವ ಬಸವಸಾಗರ ಜಲಾಶಯ ವೀಕ್ಷಣೆಗೆ ಸುತ್ತಮುತ್ತಲಿನ ಜಿಲ್ಲೆಗಳ ಜನರು ಆಗಮಿಸಿ ಜಲಧಾರೆ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸಜ್ಯ ಜಲಾಶಯದಲ್ಲಿ 492.252 ಗರಿಷ್ಠ ಮಟ್ಟದಲ್ಲಿ 489.41 ಮೀಟರಿಗೆ ನೀರು ಬಂದಿದ್ದು, 33.313 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದಲ್ಲಿ 21.89 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.