ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರಾಜ್ಯ ರೈತರಿಗೆ 5 ಲಕ್ಷ ರೂಪಾಯಿಯವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. 20 ಲಕ್ಷದವರೆಗೆ ಶೇ. 3 ರ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆ ಈ ವರ್ಷದಿಂದಲೇ ಜಾರಿ ಮಾಡುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಮತ್ತೊಂದು ಭರವಸೆ ಇದೇ ವರ್ಷ ಸಾಕಾರಗೊಳ್ಳಲಿದೆ ಎಂದು ಮಂಗಳವಾರ ಸಚಿವರು ಸುದ್ದಿಗಾರರರಿಗೆ ತಿಳಿಸಿದ್ದರು.
ಗುರಿ ನಿಗದಿ ಮಾಡಿ ಸಾಲ ವಿತರಣೆ ಮಾಡುವುದಕ್ಕಿಂತ, ರೈತರ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ರೈತರಿಗೆ ಸಾಲ ವಿತರಣೆ ಮಾಡಲು ಆದ್ಯತೆ ನೀಡಲಾಗುವುದು ಎಂದರು.
ಈ ಹಿಂದೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ದವರೆಗೆ ನೀಡಲಾಗುತ್ತಿತ್ತು. ಇನ್ನೂ ಮುಂದೆ5 ಲಕ್ಷದವರೆಗೆ ನೀಡಲಾಗುವುದು. ಅದೇ ರೀತಿ ಶೇ. 3 ರ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲವನ್ನು 20 ಲಕ್ಷಕ್ಕೆ ಹೆಚ್ಚಿಸಲಾಗುವುದು. ಈ ಅಂಶವನ್ನು ಪ್ರಣಾಳಿಕೆಯಲ್ಲಿಯೂ ಹೇಳಲಾಗಿತ್ತು. ಈ ಭರವಸೆಯನ್ನು ಪ್ರಸಕ್ತ ಮುಂಗಾರು ಹಂಗಾಮಿನಲ್ಲೇ ಜಾರಿಗೊಳಿಸಿ ಅರ್ಹ ರೈತರಿಗೆ ಸಾಲ ನೀಡಲಾಗುವುದು ಎಂದು ಹೇಳಿದರು.
ಕೃಷಿ ಸಾಲ ನೀಡಿಕೆಯನ್ನು ಪ್ರತಿ ವರ್ಷ ಶೇ. 10 ಅಥವಾ ಶೇ. 20 ಹೆಚ್ಚಿಸುವುದರ ಬದಲು ಹೆಚ್ಚಿನ ಅರ್ಹ ರೈತರಿಗೆ ಸಾಲ ಕೊಡಲು ಆದ್ಯತೆ ನೀಡುತ್ತೇವೆ. ಸಾಮಾನ್ಯವಾಗಿ ರೈತರಿಗೆ ಗುರಿ ಮೀರಿ ಸಾಲ ನೀಡಲಾಗುತ್ತಿದೆ. ಕಳೆದ ವರ್ಷ12 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಿದ್ದು, ಸುಮಾರು 20 ಸಾವಿರ ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿತ್ತು. ಅದೇ ರೀತಿ ಈ ವರ್ಷವೂ ರೈತರಿಗೆ ಸಾಲ ವಿತರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಇನ್ನೂ ರೈತರಿಗೆ 50 ಸಾವಿರ ಹಾಗೂ1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ರೈತ ಸಾಲ ಮನ್ನಾದ ಪ್ರಯೋಜನ ಎಲ್ಲಾ ರೈತರಿಗೂ ಸಿಕ್ಕಿಲ್ಲ. ಯಾರಿಗೆಲ್ಲಾ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಪಡೆಯಲಾಗುತ್ತಿದೆ. ಅತೀ ಶೀಘ್ರದಲ್ಲಿ ಸಭೆ ನಡೆಸಿ ರೈತರ ಸಾಲಮನ್ನಾವನ್ನು ಸಮರ್ಪಕವಾಗಿ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿನ ಎಲ್ಲಾ ಡಿಸಿಸಿ ಬ್ಯಾಂಕ್ ಗಳ ಸ್ಥಿತಿಗತಿ ಪರಿಶೀಲನೆ ಹಾಗೂ ನಡೆದಿರುವ ಅಕ್ರಮಗಳ ಬಗ್ಗೆಮಾಹಿತಿ ಪಡೆಯಲು ಜೂನ್ 16 ರಂದು ರಾಜ್ಯಮಟ್ಟದ ಎಲ್ಲಾ ಡಿಸಿಸಿ ಬ್ಯಾಂಕ್ ಗಳ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರಿ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸಮಗ್ರ ಜಿಲ್ಲಾ ಬ್ಯಾಂಕುಗಳಲ್ಲಿ ಅಕ್ರಮ ನಡೆದಿದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂದಿನಿ ಅಮೂಲ್ ವಿಲಿನ ಸಾಧ್ಯವಿಲ್ಲ
ನಂದಿನಿ ಹಾಗೂ ಅಮುಲ್ ವಿಲೀನ ಸಾಧ್ಯವೇ ಇಲ್ಲ. ಅಂತಹ ಪ್ರಯತ್ನ ನಡೆಯಲು ಅವಕಾಶವನ್ನೂ ನೀಡುವುದಿಲ್ಲ ಎಂದು ಸಚಿವ ರಾಜಣ್ಣ ಸ್ಪಷ್ಟಪಡಿಸಿದರು.
ಕೆಎಂಎಫ್ ಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಇದಾದ ನಂತರ ನಂದಿನಿಯನ್ನು ಮತ್ತಷ್ಟು ಶಕ್ತಿಶಾಲಿ ಸಂಸ್ಥೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಾಲು ಉತ್ಪಾದಕರಿಗೆ ಹಾಲಿನ ಸಬ್ಸಿಡಿ ನೀಡುವುದು ಬಾಕಿಯಿದೆ. ಎಷ್ಟೇ ಬಾಕಿಯಿದ್ದರೂ ಸಬ್ಸಿಡಿ ಮೊತ್ತ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರಸವಸೆ ನೀಡಿದ್ದಾರೆ.
ಶೂನ್ಯ ಬಡ್ಡಿ ದರದಲ್ಲಿ ಎಲ್ಲಾ ರೈತರಿಗೆ ಸಾಲ ನೀಡಲಾಗುವುದೋ ಅಥವಾ ಕೆಲವು ಷರತ್ತುಗಳನ್ವಯ ಸಾಲ ನೀಡಲಾಗುವುದು ಎಂಬುದರ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.