ರೈತರಿಗೆ ಬಿತ್ತನೆಯಿಂದ ಹಿಡಿದು ಕೊಯ್ಲುವರೆಗೆ ಬಳಕೆಯಾಗುವ ವಿವಿಧ ಕೃಷಿ ಯಂತ್ರೋಪಕರಣಗಳು ಶೇ. 50 ರಷ್ಟು ಸಬ್ಸಿಡಿಯಲ್ಲಿ ಸಿಗುತ್ತವೆ. ಆದರೆ ಬಹುತೇಕ ರೈತರಿಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಯಾವ ಯಾವ ಉಪಕರಣಗಳು ಸಿಗುತ್ತವೆ ಎಂಬ ಮಾಹಿತಿ ಇರುವುದಿಲ್ಲ. ಹೀಗಾಗಿ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ವಿವಿಧ ಕೃಷಿ ಯಂತ್ರೋಪಕರಣಗಳಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಯಾವ ಉಪಕರಣಗಗಳಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ ಎಂಬುದರ ಸಂಕ್ಷೀಪ್ತ ಮಾಹಿತಿ ಇಲ್ಲಿದೆ.
ಯಂತ್ರೋಪಕರಣಗಳ ಖರೀದಿಗೆ ಸಹಾಯಧನ
ಚಾಪ್ ಕಟರ್ ಖರೀದಿಗೆ ಶೇ. 50 ರಷ್ಟು ಸಹಾಯಧನ ಸಿಗಲಿದೆ. ಹೌದು, ಚಾಪ್ ಕಟರ್ ಖರೀದಿಗೆ ರೈತರಿಗೆ ಶೇ. 50 ರಷ್ಚು ಪ್ರತಿ ಘಟಕಕ್ಕೆ ಸಹಾಯಧನ ನೀಡಲಾಗುವುದು. ಇದನ್ನು ಲಭ್ಯತೆಯ ಆಧಾರದ ಮೇಲೆ ರೈತರಿಗೆ ವಿತರಿಸಲಾಗುವುದು.
ಟ್ರ್ಯಾಕ್ಟರ್ ಟ್ರ್ಯಾಲಿ 20 ಹೆಚ್.ಪಿಯೊಂದಿಗೆ ಟ್ರ್ಯಾಕ್ಟರ್ ಖರೀದಿಗೆ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಅಂದರೆ ಟ್ರ್ಯಾಕ್ಟರ್ ಖರೀದಿಗೆ 2 ಲಕ್ಷ ರೂಪಾಯಿಯವರೆಗೆ ಸಹಾಯಧನ ದೊರೆಯಲಿದೆ. ಟ್ರ್ಯಾಕ್ಟರ್ ಖರೀದಿ ಮಾಡಲು ತೋಟಗಾರಿಕೆ, ಕೃಷಿ ಇಲಾಖೆಯ ವತಿಯಿಂದ ಆಯಾ ಜಿಲ್ಲೆಗಳಿಂದ ಅರ್ಜಿ ಕರೆಯಲಾಗುವುದು. ಆಗ ಅರ್ಜಿ ಸಲ್ಲಿಸಿ ರೈತರು ಸೌಲಭ್ಯ ಪಡೆಯಬಹುದು.
ತೋಟಗಾರಿಕೆಯಲ್ಲಿ ಯಾಂತ್ರೀಕರಣ
20 ಹೆಚ್.ಪಿ ಟ್ರ್ಯಾಕ್ಟರ್ ಖರೀದಿಗೆ ಸಾಮಾನ್ಯರೈತರಿಗೆ ಶೇ. 25 ರಂತೆ ಗರಿಷ್ಠ 75 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ, ಅತೀ ಸಣ್ಮ ಮತ್ತು ಮಹಿಳಾ ರೈತರಿಗೆ ಶೇ. 35 ರಂತೆ ಗರಿಷ್ಠ 1 ಲಕ್ಷರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು.
ಪವರ್ ಟಿಲ್ಲರ್
8 ಹೆಚ್.ಪಿ ಗಿಂತ ಕಡಿಮೆ ಪವರ್ ಟಿಲ್ಲರ್ ಖರೀದಿಗೆ ಸಾಮಾನ್ಯ ರೈತರಿಗೆ ಶೇ. 40 ರಷ್ಟು ಅಂದರೆ ಗರಿಷ್ಠ 40 ಸಾವಿರ ರೀೂಪಾಯಿಯವರೆಗೆ ಸಹಾಯಧನ ಸಿಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಶೇ. 50 ರಷ್ಟು ಅಂದರೆ 50 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು.
ಇದನ್ನೂ ಓದಿ : ನಿಮ್ಮ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ತಾಳೆ ಹಣ್ಣುಗಳನ್ನು ಕಟಾವು ಮಾಡುವ ಏಣಿ ಖರೀದಿಗೂ ಶೇ. 50 ರಷ್ಟು ಸಬ್ಸಿಡಿ ಸಿಗುತ್ತದೆ. ಅಂದರೆ 5 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಅದೇ ರೀತಿ ತಾಳೆ ಹಣ್ಮುಗಳ ಗೊಂಚಲು ಹಾಗೂ ತಾಳೆ ಗರಿಗಳನ್ನು ಕತ್ತರಿಸಲು 15 ಸಾವಿರ ರೂಪಾಯಿಯಿರವಗೆ ಸಹಾಯಧನ ನೀಡಲಾಗುವುದು.
ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM) ಯೋಜನೆಯಡಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ
ತೋಟಗಾರಿಕೆ ಇಲಾಖೆಯ ವತಿಯಿಂದ ಸಮಾಮ್ ಯೋಜನೆಯಡಿ ಗರಿಷ್ಠ 1.25 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಯಂತ್ರೋಪಕರಣಗಳ ಖರೀದಿಗೆ ಶೇ. 50 ರಷ್ಟು, ಸಹಾಯಧನ ನೀಡಲಾಗುವುದು. ಅದೇ ರೀತಿ ಸಾಮಾನ್ಯ ವರ್ಗ ಮತ್ತು ಇತರೆ ವರ್ಗದವರಿಗೆ ಶೇ. 40 ರಷ್ಟು ಸಬ್ಸಿಡಿ ನೀಡಲಾಗುವುದು.
ಹನಿ ನೀರಾವರಿ ಅಳವಡಿಕೆಗೆ ಸಹಾಯಧನ
ಕೇಂದ್ರ ಸರ್ಕಾರದ PMKSY ಮಾರ್ಗಸೂಚಿ ಪ್ರಕಾರ 9 * 9 ಚದರ ಮೀಟರ್ ಅಂತರದ ತಾಳೆ ಸಸಿಗಳ ತಾಕಿನಲ್ಲಿ ಪ್ರತಿ ಹೆಕ್ಟೇರಿಗೆ 24,035 ರೂಪಾಯಿ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಗೆ ಸಂಪರ್ಕಿಸಬಹುದು.