ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ (Subsidy for irrigation )ಸಬ್ಸಿಡಿಯನ್ನು ಹಿಂದಿನ ಮಾದರಿಯಲ್ಲಿ ಮುಂದುವರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಅವರು ಜಿಲ್ಲಾ ಕೃಷಿ ಅಧಿಕಾರಿಗಳ ಜೊತೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸೂಕ್ಷ್ಮ ನೀರಾವರಿ ಸಬ್ಸಿಡಿ ಕುರಿತು ಗೊಂದಲವಾಗಿತ್ತು. ಈಗ ಈ ಯೋಜನೆಯನ್ನು ಯಥಾಸ್ಥಿತಿ ಮುಂದುವರೆಸಲಾಗುವುದು. ಎಲ್ಲಾ ವರ್ಗದ ರೈತರು ಹೆಕ್ಟೇರ್ ಜಮೀನು ಹೊಂದಿದ ರೈತರಿಗೆ ಶೇ. 90 ರಷ್ಟು, 5 ಹೆಕ್ಟೇರ್ ಜಮೀನು ಹೊಂದಿದ ರೈತರಿಗೆ ಶೇ. 45 ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಆದೇಶದ ಅನ್ವಯ ಹಿಂದಿನ ಮಾದರಿಯಲ್ಲಿಯೇ ಸಬ್ಸಿಡಿ ಮುಂದುವರೆಸಲಾಗುವುದು. 5 ಹೆಕ್ಟೇರ್ ಮೇಲ್ಪಟ್ಟ ರೈತರಿಗೆ ಸಬ್ಸಿಡಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ರೈತರ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ (Reservation for farmer son)
ಕೃಷಿಕರ ಮಕ್ಕಳಿಗೆ ರಾಜ್ಯ ಕೃಷಿ ಕಾಲೇಜುಗಳಲ್ಲಿನ ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಮಾಡ ಬಯಸುವ ರೈತರ ಮಕ್ಕಳಿಗೆ ಹೆಚ್ಚಿನ ಅವಕಾಶ ಸಿಗಬೇಕೆಂಬ ಕಾರಣಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 50 ರಷ್ಟು ಹೆಚ್ಚಿಸಲಾಗಿದೆ. ಇದಕ್ಕಿಂತ ಮೊದಲು ರೈತರ ಮಕ್ಕಳಿಗೆ ಶೇ. 40 ರಷ್ಟು ಮೀಸಲಾತಿಯಿತ್ತು. ಈಗ ಶೇ. 50 ರಷ್ಟು ಮೀಸಲಾತಿ ರೈತರ ಮಕ್ಕಳಿಗೆ ಸಿಗಲಿದೆ.
ರಾಜ್ಯದಲ್ಲಿ ಒಟ್ಟು ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಆರು ವಿಶ್ವವಿದ್ಯಾಲಯಗಳಿನವೆ. ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಬೀದರ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಅಧೀನದಲ್ಲಿ 26 ಸರ್ಕಾರಿ ಕಾಲೇಜುಗಳು, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳು ನಡೆಯುತ್ತಿವೆ. ಈ ವರ್ಷದಿಂದಲೇ ಶೇ. 50 ರಷ್ಟು ಮೀಸಲಾತಿ ಸಿಗಲಿದೆ ಎಂದರು.,
ಪಹಣಿಯಲ್ಲಿ ಬೆಳೆ ಸಮೀಕ್ಷೆ (Crop survey)
ಮುಂಗಾರಿನಲ್ಲಿ ಸುಮಾರು 2.10 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸುವ ಉದ್ದೇಶವಿದೆ. ಕಳೆದ ವರ್ಷದಂತೆ ಈ ವರ್ಷವೂ ಸಹ ರೈತರೇ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡಲಿದ್ದಾರೆ. ರೈತ ತನ್ನ ಬೆಳೆಗೆ ತಾನೇ ಸಮೀಕ್ಷೆ ನಡೆಸಿ ನನ್ನ ಬೆಳೆ ನನ್ನ ಹಕ್ಕು ಎಂಬ ಪ್ರಮಾಣ ಪತ್ರ ಪಡೆಯುವ ಮೂಲಕ ಮೊಬೈಲ್ ಆಪ್ ಬೆಳೆ ಸಮೀಕ್ಷೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ರೈತರು ಸಹ ತಮ್ಮ ಬೆಳೆಗಳ ಸಮೀಕ್ಷೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರವು ಮೆಚ್ಚುಕೆ ವ್ಯಕ್ತಪಡಿಸಿದೆ ಎಂದರು.