ಹಾಗಲಕಾರಿಯ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ. ಆದರೆ ಮಾಡಹಾಗಲ (Spine Gourd) ಎಂದರೆ ಬಹುತೇಕ ಜನರಿಗೆ ಗೊತ್ತಿಲ್ಲ. ಇದು ಹಾಗಲಕಾಯಿ ವರ್ಗಕ್ಕೆ ಸೇರಿದೆ.ಇದು ಗಡ್ಡೆಯಿಂದ ಬೆಳೆಯುವ ಬಳ್ಳಿಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಹೇರಳವಾಗಿ ಬೆಳೆಯುತ್ತದೆ. ಈ ಅಪರೂಪದ ತರಕಾರಿ ನಗರದಲ್ಲಿ ಕೆಜಿಗೆ 200ರೂಪಾಯಿಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು. ನಮ್ಮ ಹೊಲದ ಬದಿಯಲ್ಲಿ ಯತೇಚ್ಛವಾಗಿ ಬೆಳೆಯುವ ಈ ತರಕಾರಿಗೆ ಇಷ್ಟೊಂದು ಬೆಲೆಯೇ. ಮಾಡಹಾಗಲ ತರಕಾರಿಯ ಬಗ್ಗೆ ನಮ್ಮೂರಿನ ಹಿರಿಯರೊಂದಿಗೆ ಚರ್ಚಿಸಿದಾಗ ಗೊತ್ತಾಯಿತು ಇದರ ಮಹಿಮೆ.
ಹೊಲದ ಬದುಗಳಲ್ಲಿ, ಕಾಡುಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಮಾಡಹಾಗಲ ಕಣ್ಮರೆಯಾಗುತ್ತಿದೆ. ಕೆಜಿಗೆ 200 ರೂಪಾಯಿಯಂತೆ ಮಾರಾಟವಾಗುವ ಈ ತರಕಾರಿ ನೋಡಕ್ಕೂ ಸಿಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಈ ತರಕಾರಿಗೆ ಭಾರಿ ಬೇಡಿಕೆಯಿದೆ. ಏಕೆಂದರೆ ಈ ತರಕಾರಿಯಲ್ಲಿ ಅಡಗಿದೆ ಹಲವಾರು ಆರೋಗ್ಯಗದ ಗುಟ್ಟು. ಬಡವರ ವಯಾಗ್ರವೆಂದೇ ಕರೆಯಲ್ಪಡುವ ಮಾಡಹಾಗಲ ಮಧುಮೇಹ ನಿಯಂತ್ರಣ ಮಾಡುತ್ತದೆ. ಮೂತ್ರಕೋಶದ ಕಲ್ಲು, ಯಕೃತ ದೋಷ, ಮೂತ್ರಪಿಂಡದಲ್ಲಿನ ದೋಷ, ಉದರದ ಸಮಸ್ಯೆಗೆ ಮಾಡಹಾಗಲ ಮದ್ದು. ಪ್ರಕೃತ್ತಿದತ್ತವಾಗಿ ಬೆಳೆಯುವ ಈ ತರಕಾರಿ ಮುಂಗಾರು ಸಮಯದಲ್ಲಿ ಮಾತ್ರ ದೊರೆಯುತ್ತದೆ. ಮುಂಗಾರು ಆರಂಭವಾಗುವ ತಕ್ಷಣ ಕಾಡಿನಲ್ಲಿ ಬಳ್ಳಿ ಹರಡಲು ಆರಂಭವಾಗುತ್ತದೆ. ಈ ತರಕಾರಿಗೆ ಕಾಡುಹಾಗಲ, ಕಾಡು ಹೀರೆ, ಮಡಹಾಗಲ, ಪಾಗಿಳವೆಂದು ಕರೆಯುತ್ತಾರೆ.
ನಮ್ಮೂರ ಕಾಡಿನಂಚಿನಲ್ಲಿರುವ ಹೊಲದ ಬದುಗಳಲ್ಲಿ ಯತೇಚ್ಛವಾಗಿ ಸಿಗುವ ಈ ತರಾಕಾರಿಗೆ ಹೊಲದ ಸುತ್ತ ಸುತ್ತು ಹಾಕಿ ಸುಸ್ತಾದರೂ ಸಹ ಸಿಗಲಿಲ್ಲ. ಎಂಟಹತ್ತು ವರ್ಷಗಳ ಹಿಂದೆ ನಮ್ಮದೇ ಹೊಲದಲ್ಲಿ ಮುಂಗಾರು ಆರಂಭದಲ್ಲಿ ಸಾಕಷ್ಟು ಸಿಗುತ್ತಿತ್ತು. ಇದು ನಮಗೆ ಇಷ್ಟವಾದ ಕಾಯಿಪಲ್ಲೆ. ಆದರೆ ಇಂದು ಬಳ್ಳಿಗಳಿದ್ದವು ಇನ್ನೂ ಹೂವಾಡುವ ಹಂತದಲ್ಲಿತ್ತು. ಸುಮಾರು ಮೂರು ಕಿ.ಮೀ ಗೂ ಹೆಚ್ಚು ಹೊಲಸ ಸುತ್ತ ಹಾಗೂ ಕಾಡಿನಲ್ಲಿ ಗಿರಕಿ ಹಾಕಿದರೂ ಸಿಗಲಿಲ್ಲ. ಮನೆಗೆ ಬಂದು ಅಪ್ಪಅಮ್ಮಂದಿರಿಗೆ ಕೇಳಿದಾಗ ಮೊದಲು ಬಹಳಷ್ಟು ಸಿಗುತ್ತಿತ್ತು. ಮೊದಲು ಹೊಲದ ಬದುಗಳು ಅಗಲವಾಗಿರುತ್ತಿದ್ದವು. ಈಗ ಮನುಷ್ಯನ ಅತೀಯಾದ ಹಸ್ತಕ್ಷೇಪದಿಂದ ಕಣ್ಮರೆಯಾಗುತ್ತಿದೆ ಎಂದು ಹೇಳಿ ಸುಮ್ಮನಾದರು.
ಮಾಡಹಾಗಲ ಬಳ್ಳಿಯಲ್ಲಿಯೂ ಗಂಡು ಹೆಣ್ಣು
ಪ್ರಾಣಿ ಪಕ್ಷಿಗಳಂತೆ ಮಾಡಹಾಗಲ ಬಳ್ಳಿಯಲ್ಲಿಯೂ ಗಂಡು ಹೆಣ್ಣು ಎಂಬ ಬಳ್ಳಿಯಿರುತ್ತದೆ. ಹೆಣ್ಣು ಬಳ್ಳಿ ಮಿಡಿ ಕಟ್ಟಿ ಹೂವು ಬಿಟ್ಟರೆ, ಗಂಡು ಬಳ್ಳಿ ಹೂವನ್ನಷ್ಟೇ ಬಿಡುತ್ತದೆ. ಗಂಡು ಹೆಣ್ಣು ಹೀಗೆ ಎರಡು ಬಳ್ಳಿಗಳಿದ್ದಲ್ಲಿ ಮಾತ್ರ ಕಾಯಿಕಟ್ಟುತ್ತವೆ. ಒಂದು ಇಲ್ಲದಿದ್ದರೂ ಬೆಳೆ ಬರೋದಿಲ್ಲ.
ಮಾಡಹಾಗಲ ತರಕಾರಿಯನ್ನು ಎಕರೆಗಟ್ಟಲೆ ಬೆಳೆಸುವುದು ಕಷ್ಟ. ನಿಶ್ಚಿತ ಸ್ಥಳದಲ್ಲಿ ಬೆಳೆಯಬಹುದು. ಒಮ್ಮೆ ಬೀಜದಿಂದ ಬಳ್ಳಿಯಾದರೆ ಸಾಕು ನಂತರ ಗಡ್ಡೆಯಿಂದ ಪ್ರತಿ ವರ್ಷ ಮುಂಗಾರುವಿನಲ್ಲಿ ಚಿಗುರು ಬಂದು ಕಾಯಿ ಬಿಡುತ್ತದೆ. ಈ ಗಡ್ಡೆ ಬಹಳ ಸೂಕ್ಷ್ಮ ವಾಗಿರುತ್ತದೆ. ಬಳ್ಳಿ ಎಷ್ಟು ವಿಸ್ತಾರವಾಗಿ ಹಬ್ಬುತ್ತದೆಯೋ ಅಷ್ಟು ಹೂವಾಗುತ್ತದೆ. ಒಂದು ಕಾಯಿ ಸರಾಸರಿ 100 ಗ್ರಾಂ ತೂಕ ಇರುತ್ತದೆ. ಸ್ವಲ್ಪ ಪೆಟ್ಟಾದರೆ ಸಾಕು, ಕೊಳೆತು ಹೋಗುತ್ತದೆ.
ಉತ್ತಮ ಗೊಬ್ಬರ ಕೊಟ್ಟು ಕೃಷಿ ಮಾಡಿ ಚಪ್ಪರಕೆ ಬಳ್ಳಿ ಹಬ್ಬಿಸಿದಲ್ಲಿ ಆರಂಭವಿಕ ವರ್ಷದಲ್ಲಿ ಒಂದು ಕಡಿಮೆ ಇಳುವರಿ ಬಂದರೂ ನುಂತರ ಬಳ್ಳಿ ಹಬ್ಬಿದಂತೆಲ್ಲಾ ಒಂದು ಬಳ್ಳಿಯಿಂದ 25 ಕೆಜಿಯವರೆಗೂ ಇಳುವರಿ ಪಡೆಯಬಹುದು.
ಹಲವಾರು ಆರೋಗ್ಯದ ಗುಟ್ಟನ್ನು ಹೊಂದಿರುವ ನೈಸರ್ಗಿಕವಾಗಿ ಸಿಗುವ ಮಾಡಹಾಗಲ ಈಗ ಅವಸಾನದ ಅಂಚಿಗೆ ತಲುಪಿದೆ. ಮನೆಯ ಹೂದೋಟದಲ್ಲಿ, ಟೆರಿಸ್ ನಲ್ಲಿ, ಹೊಲದ ಬದುಗಳಲ್ಲಿ, ಕುಂಡದಲ್ಲಿ ಸ್ವಲ್ಪ ಜಾಗ ಕೊಟ್ಟು ಬೆಳೆಸುವಂತಹ ಈ ಬಳ್ಳಿ ಮುಂದೆ ಸಿಗುತ್ತೋ ಇಲ್ಲೊ ಗೊತ್ತಿಲ್ಲ.
ಮಾಡಹಾಗಲಕಾಯಿ ಬಳ್ಳಿಯ ಗಡ್ಡೆ ನಾಟಿ ಮಾಡಿದ ರೈತನ ತಲೆಗಿಂತ ದೊಡ್ಡದಾದರೆ ತಲೆ ಒಡೆಯುತ್ತದೆ ಎಂಬ ಮೂಢನಂಬಿಕೆಯಿದೆ. ಆದರೆ ಈಗ ರೈತರು ಇಂತಹ ಮೂಢನಂಬಿಕೆಗೆ ಒಳಗಾಗದೆ ಸಾವಿರಕ್ಕೊಬ್ಬರಂತೆ ಧೈರ್ಯಮಾಡಿ ಬೆಳೆಯಲು ಮುಂದಾಗುತ್ತಿದ್ದಾರೆ. ಕಾರವಾರ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಹೊನ್ನಳ್ಳಿಯ ಗುರುಪ್ರಸಾದ ಭಟ್ ರವರು ನಾಟಿ ಮಾಡಿ ಹೆಸರುವಾಸಿಯಾಗಿದ್ದನ್ನು ಪತ್ರಿಕೆಯಲ್ಲಿ ಓದಿದ್ದು ಇನ್ನೂ ನೆನಪಿದೆ.