ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ (ಮಾಡಿಸಿಕೊಳ್ಳುವಾಗ ವಿಮಾ ಕಂಪನಿಗಳು ಇನ್ನೂ ಮುಂದೆ ರೈತನ ಜತೆಗೆ ಕುಟುಂಬದ  ನಾಮಿನಿಯನ್ನು (Nominee mandatory for crop insurance ) ಮಾಡಿಕೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಕಾಸಸೌಧದ ಕಚೇರಿಯಲ್ಲಿ ಬೆಳೆವಿಮೆ ಸಂಬಂಧ ಕೃಷಿ ಹಾಗೂ ತೋಟಗಾರಿಕೆ ಇಲಾಖಾಧಿಕಾರಿಗಳ ಜೊತೆಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಮಾ ಕಂಪನಿಗಳಿಗೆ ಸೂಚಿಸಿದ್ದಾರೆ.

ಇಷ್ಟು ದಿನ ಬೆಳೆ ವಿಮಾ ಕಂಪನಿಗಳು ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಪರಿಗಣಿಸುತ್ತಿರಲಿಲ್ಲ. ಇದರಿಂದ ವಿಮಾದಾರ ರೈತ ಮೃತಪಟ್ಟಲ್ಲಿ ವಿಮೆಯ ಕಂತು ಪಡೆಯಲು ತೊಂದರೆಯಾಗುತ್ತಿತ್ತು. ಹಾಗಾಗಿ ಇನ್ಮುಂದೆ ಕಡ್ಡಾಯವಾಗಿ ನಾಮಿನಿ ಮಾಡುವಂತೆ ತಿಳಿಸಿದರು.

ಕೆಲವು ಕಡೆ ರೈತರು ಚಾಲ್ತಿಯಲ್ಲಿರದ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡಿಗೆ ಜೋಡಿಸಿರುವುದು ಕಂಡುಬಂದಿದೆ. ಹಾಗಾಗಿ ರೈತರು ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟನ್ನೇ ವಿಮೆಗೆ ಬಳಸಬೇಕು. ಆಧಾರ್ ಕಾರ್ಡ್ ಲಿಂಕ್ ಆಗಿರುವ ಅಕೌಂಟನ್ನೇ  ಬೆಳೆವಿಮೆಗೆ ದಾಖಲಿಸಬೇಕು. ಕೆಲ ರೈತರ ಖಾತೆಗಳು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿಲ್ಲ. ಹೀಗಾಗಿ ರೈತರಿಗೆ ವಿಮೆ ಹಣ ಜಮೆಯಾಗುವಲ್ಲಿ ಸಮಸ್ಯೆಯಾಗಿದೆ. ರೈತರು ಎಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ಸಹ ಆಧಾರ್ ಕಾರ್ಡ್ಗೆ ಜೋಡಿಸಿ ವಿಮೆ ಮಾಡಿಸಬೇಕು. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನೇ ಬೆಳವಿಮೆಗೆ ನಮೂದಿಸಬೇಕು ಎಂದರು

ಫಸಲ್ ಬಿಮಾ ಯೋಜನೆ ಮಾಡಿಕೊಳ್ಳುವ ವಿಮಾ ಕಂಪನಿಗಳು ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಕಚೇರಿ ತೆರೆಯಬೇಕು. ಅಲ್ಲದೆ ಕಚೇರಿ ತೆರೆದ ಲೋಕೇಷನ್ ನ ಜಿಪಿಎಸ್ ಲಿಂಕ್ ಅನ್ನು ಕೃಷಿ ಇಲಾಖೆಗೆ ನೀಡಬೇಕು. ಬೆಳೆವಿಮೆ ಬಗ್ಗೆ ಎಡಿಎ, ಜೆಡಿಎಗಳು ಸಹ ಸರಿಯಾಗಿ ಮಾಹಿತಿ ಪಡೆದು ತಮ್ಮನ್ನು ಸಂಪರ್ಕಿಸುವ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಹೇಳಿದರು.

ಕೃಷಿ ಇಲಾಖೆಗೆ ರೈತರು ಮಾಹಿತಿ ಕೇಳಲು ಬಂದಾಗ ಅವರಿಗೆ ಫಸಲ್ ಬಿಮಾ ಯೋಜನೆಯ ಕುರಿತು ಸಂಪೂರ್ಣವಾಗಿ ಅರ್ಥವಾಗುವ ಹಾಗೆ ಮಾಹಿತಿ ನೀಡಬೇಕು. ಫಸಲ್ ಬಿಮಾ ಯೋಜನೆಯೊಂದಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದೆಯೇ ಎಂಬುದನ್ನು ಸಹ ವಿಚಾರಿಸಿ ಅವರಿಗೆ ಮನವರಿಕೆ ಮಾಡಿಕೊಡಬೇಕು. ಫಸಲ್ ಬಿಮಾ ಯೋಜನೆಯಿಂದ ಅವರಿಗೆ ಆಗುವ ಲಾಭದ ಕುರಿತು ಸರಿಯಾಗಿ ತಿಳಿಸಿದರೆ ಮಾತ್ರ ರೈತರು ವಿಮೆ ಹಣ ಕಟ್ಟುತ್ತಾರೆ. ಬಹುತೇಕ ರೈತರಿಗೆ ಇನ್ನು ಫಸಲ್ ಬಿಮಾ ಯೋಜನೆಯ ಬಗ್ಗೆ ಗೊತ್ತಿಲ್ಲದ್ದರಿಂದ ಕೃಷಿ ಅಧಿಕಾರಿಗಳು ಯೋಜನೆಯ ಮಾಹಿತಿ ನೀಡಬೇಕೆಂದು  ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ನಿಮ್ಮ ಖಾತೆಗೆ ಫಸಲ್ ಭೀಮಾ ಯೋಜನೆ ಹಣ ಜಮಾ ಆಗಿದೆಯಾ ? ಇಲ್ಲಿ ಕ್ಲಿಕ್ ಮಾಡಿ ಚೆಕ್ ಮಾಡಿಕೊಳ್ಳಿ

2020 ರ ಮುಂಗಾರು ಹಂಗಾಮಿಗೆ ಒಟ್ಟು 11.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಒಟ್ಟು 12.81 ಲಕ್ಷ ಹೆಕ್ಟೇರ್ ಪ್ರದೇಶದ ವಿಸ್ತೀರ್ಣವೂ ಬೆಳೆ ವಿಮೆಗೆ ಒಳಪಡಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.

ಏನೀದು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ? (What is pradhan mantri fasal Bima yojana)

ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ.  ಈ ಯೋಜನೆಯಡಿ 2016 ರ ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕಾಗುತ್ತದೆ.  ವಿಮೆ ಮಾಡಿಸಿದ ರೈತರು ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು  48 ಗಂಟೆಯೊಳಗಾಗಿ ತಿಳಿಸಿದಲ್ಲಿ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು.

Leave a Reply

Your email address will not be published.