2019ರ ಸಾಲಿನಲ್ಲಿ ಬೆಳೆವಿಮೆ ಕಟ್ಟಿದ ರೈತರಿಗೆ ಸಂತಸದ ಸುದ್ದಿ. ಹೌದು 2019 ರ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ಕಟ್ಟಿದ ಧಾರವಾಡ ಜಿಲ್ಲೆಯ ರೈತರಿಗೆ ವಿಮಾ ಪರಿಹಾರ ಹಣ (Insurance Compensation Fund Released) ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿನ 2019ರ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ವಿಮಾ ಪರಿಹಾರ ಒಟ್ಟು 45.05 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿ ನಿರ್ದೇಶನ ಅನುಸಾರ ಧಾರವಾಡ ಜಿಲ್ಲೆಯ ಒಟ್ಟು 197 ವಿಮಾ ಘಟಕಗಳಲ್ಲಿ 45.05 ಕೋಟಿ ರೂಪಾಯಿಗಳಲ್ಲಿ 59728 ರೈತ ಫಲಾನುಭವಿಗಳಿಗೆ ಬಿಡುಗಡೆಯಾಗಿದೆ. ಸಂರಕ್ಷಣಾ ತಂತ್ರಾಂಶದ ಮೂಲಕ ರೈತರ ಖಾತೆಗಳಿಗೆ ಮೊತ್ತ ಜಮೆ ಪ್ರಕ್ರಿಯೆ ನಡೆದಿದೆ.
2019 ರ ಮುಂಗಾರು ಹಂಗಾಮಿಗೆ ರಾಜ್ಯದ ನೆರೆಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಬೆಳೆಗೆ ಯೋಜನೆಯ ಮಾರ್ಗಸೂಚಿ ಮತ್ತು ಜಿಲ್ಲಾಡಳಿತದ ವರದಿಯಂತೆ ಹಾವೇರಿ, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಮಧ್ಯಂತರ ವಿಮಾ ಪರಿಹಾರ ಬಿಡುಗಡೆ ಮಾಡಲಾಗಿದೆ.
21-12-2020 ರಂದು ಬೆಂಗಳೂರಿನಲ್ಲಿ ತಮ್ಮ ನೇತೃತ್ವದಲ್ಲಿ ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರೊಂದಿಗೆ ಸಭೆ ನಡೆಸಲಾಗಿತ್ತು. ಆ ವೇಳೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಕೇಂದ್ರ, ರಾಜ್ಯದ ಕೃಷಿ ಮತ್ತು ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಧಾರವಾಡ ಜಿಲ್ಲೆಯ ಬಾಕಿ ಮಧ್ಯಂತರ ಪರಿಹಾರ ನಿಧಿ ಶೀಘ್ರ ಬಿಡುಗಡೆಗೆ ಒತ್ತಾಯಿಸಿದ್ದರಿಂದ ವಿಮಾ ಕಂಪನಿ ಹಣ ಬಿಡುಗಡೆಗೊಳಿಸಿದೆ ಎಂದು ತಿಳಿಸಿದ್ದಾರೆ.