ಭೂಮಿ ಖರೀದಿಸಿ ಭೂ ಪರಿವರ್ತನೆ ಮಾಡಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಅಲೆಯುತ್ತಿದ್ದವರಿಗೆ ಸಂತಸದ ಸುದ್ದಿ. ಭೂಮಿ ಖರೀದಿಸಿ ಭೂ ಪರಿವರ್ತನೆಗಾಗಿ ಅಲೆದಾಟ ತಪ್ಪಿಸಲು ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಲು ಸರ್ಕಾರ ನಿರ್ಧರಿಸಿದೆ.

ಕಂದಾಯ ಸಚಿವ ಆರ್. ಅಶೋಕ ಸುದ್ದಿಗಾರರೊಂದಿಗೆ ಮಾತನಾಡಿ, ಭೂಮಿ ಖರೀದಿಸುವವರು ಅದರ ಪರಿವರ್ತನೆಗಾಗಿ ಆರು ತಿಂಗಳ ಸಮಯಾವಕಾಶ ತೆಗೆದುಕೊಳ್ಳುತ್ತಿದ್ದ ಕಾನೂನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಭೂ ಪರಿವರ್ತನೆಗೆ ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂಮಿ ಪರಿವರ್ತನೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಭೂಮಿ ಖರೀದಿಸಿದವರು ಅರ್ಜಿ ಸಲ್ಲಿಸಿದ 24 ತಾಸಿನಲ್ಲಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲೆಂದು ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಇದಕ್ಕಿಂತ ಮುಂಚೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವುದು, ಬಡ್ಡಿ ಹೊರೆ ಹೊತ್ತುಕೊಳ್ಳುವುದು ತಪ್ಪಲಿದೆ.  ಪ್ರತಿ ಎಕರೆಗೆ 5 ಲಕ್ಷ ರೂಪಾಯಿಯವರೆಗೆ ಅಧಿಕಾರಿಗಳ ಮಟ್ಟದಲ್ಲಿ ಅರ್ಜಿದಾರರು ಕೊಡಬೇಕಾಗುತ್ತಿತ್ತು. ಈ ರೀತಿಯ ಒಳ ವ್ಯವಹಾರವನ್ನು ತಪ್ಪಿಸಲು ಕಾಯ್ದೆ ತಿದ್ದುಪಡಿ ಮಾಡಲಾಗುವುದು ಎಂದರು.

ರೈತರ ಹಿತ ಹಾಗೂ ಕೃಷಿ-ಕೈಗಾರಿಕೆ ನಡುವಿನ ಬಾಂಧ್ಯವ ವೃದ್ಧಿ, ಕೃಷಿಗೆ ಯುವ ಸಮೂಹವನ್ನು ಆಕರ್ಷಿಸುವ ಉದ್ದೇಶದಿಂದ ಭೂ ಕಂದಾಯ ಕಾಯ್ದೆ ಕಲಂ 79(ಎ)  ಮತ್ತು 79(ಬಿ) ರದ್ದು ಮಾಡಿರುವುದು ಕ್ರಾಂತಿಕಾರಕ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ಕಡಿಮೆ ಬಡ್ಡಿದರದಲ್ಲಿ ಹೈನುಗಾರಿಕೆ, ಕುರಿ, ಕೋಳಿ, ಹಂದಿ ಸಾಕಾಣಿಕೆಗೆ 1.60 ಲಕ್ಷ ರೂಪಾಯಿಯವರೆಗೆ ಸಾಲ ಸೌಲಭ್ಯ

ಪ್ರಸ್ತುತ ಭೂ ಪರಿವರ್ತನೆಗೆ ಹಲವು ಪ್ರಾಧಿಕಾರಗಳ ಒಪ್ಪಿಗೆ ಅಗತ್ಯವಿದ್ದು, ಸಂಕೀರ್ಣ ನಿಯಮಾವಳಿ ಇವೆ. ಇವುಗಳನ್ನೆಲ್ಲಾ ಸರಳೀಕರಿಸಿ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡುವಂತಹ ವ್ಯವಸ್ಥೆ ರೂಪಿಸಲಾಗುವುದು.ಪರಿವರ್ತನೆಗೆ ಒಳಪಡುವ ಭೂಮಿ ಒತ್ತುವರಿಯಾಗಿರಬಾರದು ಸೇರಿದಂತೆ ಹಲವು ಷರತ್ತುಗಳಿದ್ದು, ಇವುಗಳನ್ನು ಪೂರೈಸಿದರೆ ಒಂದೇ ದಿನದಲ್ಲಿ ಅರ್ಜಿ ಪುರಸ್ಕರಿಸಲಾಗುವುದು ಎಂದರು.

ಈ ಮೊದಲು ಕಂದಾಯ ಇಲಾಖೆಯು ಅರ್ಜಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಯೋಜನಾ ಪ್ರಾಧಿಕಾರಕ್ಕೆ ರವಾನಿಸುತ್ತಿತ್ತು.ಅಲ್ಲಿಂದ ಭೂ ಸ್ವಾಧೀನ ಅಧಿಕಾರಿಗಳು, ತಹಶೀಲ್ದಾರ, ರೆವಿನ್ಯೂ ಇನ್ಸ್ ಪೆಕ್ಟರ್ ಮೂಲಕ ಕೊನೆಯದಾಗಿ ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿ ತಲುಪುತ್ತಿದ್ದರಿಂದ ವಿವಿಧ ಹಂತದಲ್ಲಿ ವಿಳಂಬ ಆಗುತ್ತಿತ್ತು. ಕೃಷಿ ಭೂಮಿಯನ್ನು ಗೃಹ ಬಳಕೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಲು ಇನ್ನೂ ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಭೂ ಪರಿವರ್ತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *