ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ರೈತರಿಗೆ ಹನಿ ನೀರಾವರಿ ವ್ಯವಸ್ಥೆ ಕೈಗೊಳ್ಳಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ರೈತರು ತಮ್ಮ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ಕೋರಿ ಅರ್ಜಿ ಸಲ್ಲಿಸಬಹುದು.
ಹೌದು, ಪ್ರಸಕ್ತ ಸಾಲಿಗೆ ಪ್ರಧಾನಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯ ಮುಖ್ಯ ಮಂತ್ರಿಗಳ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳ ಅನುಷ್ಠಾನಕ್ಗಾಗಿ ಪರಿಷ್ಕೃತ ಕ್ರಿಯಾ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಬಹುದು ಎಂದು ಬಾಗಲಕೋಟೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ವರ್ಗದ ರೈತರಿಗೆ 2.0 ಹೆಕ್ಟೇರ್ ವರೆಗಿನ ಪ್ರದೇಶಕ್ಕೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ತುಂತುರು ನೀರಾವರಿ ಘಟಕಗಳಿಗೆ ಸಂಬಂಧಿಸಿದಂತೆ 2.0 ಹೆಕ್ಟೇರಿ ನಿಂದ 5.0 ಹೆಕ್ಟೇರ್ ಪ್ರದೇಶಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 90 ಮಿ.ಮೀ ಅಳತೆಯ ಎಚ್.ಡಿ.ಪಿ.ಇ ಪೈಪ್ ಗಳನ್ನು ನೀಡಲಾಗುವುದು.
ಹನಿ ನೀರಾವರಿ ಘಟಕಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದ ಸಣ್ಣ ಮತ್ತ್ ಅತೀ ಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 2.0 ಹೆಕ್ಟೇರ್ ವರೆಗಿನ ಪ್ರದೇಶಕ್ಕೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಹನಿ ನೀರಾವರಿ ಘಟಕಗಳಿಗೆ ಸಂಬಂಧಿಸಿದಂತೆ 2.0 ಹೆಕ್ಟೇರ್ ನಿಂದ 5.0 ಹೆಕ್ಟೇರ್ ಪ್ರದೇಶಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು ಸಹಾಯಧನ ಕೋರಿ ಅರ್ಜಿ ಸಲ್ಲಿಸಬಹುದು. ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೆ ಕಿಸಾನ್ ತಂತ್ರಾಂಶದಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ: ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಆಸಕ್ತಿ ಹೊಂದಿರಬೇಕು. ಸೂಕ್ಷ್ಮ ನೀರಾವರಿ ಅಳವಡಿಸಿದ ನಂತರ ತೋಟಗಾರಿಕೆ ಬೆಳೆಗಳನ್ನೇ ಬೆಳೆಸಬೇಕಾಗುತ್ತದೆ. ರೈತ ಸಂಪರ್ಕ ಕೇಂದ್ರದಲ್ಲಿ ಕೆ-ಕಿಸಾನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ ನಂತರ ಜೇಷ್ಠತಾ ಆಧಾರದ ಮೇಲೆ ರೈತರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಏನಿದು ಕೃಷಿ ಸಿಂಚಾಯಿ ಯೋಜನೆ?
ತೋಟಗಾರಿಕೆ ಮಾಡುತ್ತಿರುವ ರೈತರು ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿಯಿರುವ ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಕೃಷಿ ಉಪಕರಣಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಲು ಈ ಯೋಜನೆ ಆರಂಭಿಸಲಾಗಿದೆ.
ಕೃಷಿ ಸಿಂಚಾಯಿ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಹಾಯಧನ ನೀಡಲಾಗುವುದು. ತೋಟಗಾರಿಕೆಯಲ್ಲಿ ಆಸಕ್ತಿಯಿರುವ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದುಕೊಳ್ಳಬೇಕು.