ಕೃಷಿ ಜಮೀನಿನ ಮಾಲಿಕರು, ಅಕಾಲಿಕ ಮರಣಹೊಂದಿದ ನಂತರ ಅವರ ವಾರಸುದಾರರು ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಸಹಜ. ಆದರೆ ಕೆಲವು ರೈತರು ಮುಂದೆ ಬದಲಾವಣೆ ಮಾಡಿಕೊಂಡರಾಯಿತು ಎಂದು ನಿರ್ಲಕ್ಷ ಮಾಡಿಬಿಡುತ್ತಾರೆ. ಇತ್ತೀಚೆಗೆ ದಿನಕ್ಕೊಂದು ಕಾನೂನುಗಳು ಬರುತ್ತಿರುವುದರಿಂದ ಜಮೀನಿನನ್ನು ಪೌತಿಖಾತೆಯಡಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಪಿತ್ರಾರ್ಜಿತ ಆಸ್ತಿಯನ್ನು ವಾರಸುದಾರರು ತಮ್ಮ ಹೆಸರಿನಲ್ಲಿ ಬಹಳಷ್ಟು ರೈತರು ಬದಲಾವಣೆ ಮಾಡಿಕೊಂಡಿಲ್ಲ. ಹಿರಿಯರ ಮರಣ ಪ್ರಮಾಣ ಪತ್ರ ಇಲ್ಲದೆ ಜಮೀನಿನ ಖಾತೆ ವರ್ಗಾವಣೆ ಸಾಧ್ಯವಾಗುತ್ತಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರಗಳನ್ನು ಕಾನೂನಾತ್ಮಕವಾಗಿ ಪಡೆಯಲು ಮಾಹಿತಿಯ ಕೊರತೆಯಿರುವುದರಿಂದ ಕೆಲವು ರೈತರು ತಮ್ಮ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಂಡಿಲ್ಲ.  ನಿಯಮದ ಪ್ರಕಾರ ಗ್ರಾಮಗಳಲ್ಲಿ ವ್ಯಕ್ತಿ ಸತ್ತ 28 ದಿನಗಳೊಳಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ ಪತ್ರ ನೀಡಬೇಕು.  ಒಂದು ವರ್ಷದೊಳಗಿದ್ದರೆ ತಹಶೀಲ್ದಾರ ನೀಡಬಹುದು. ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಿದ್ದರೆ ಜೆಎಂಎಫ್ ನ್ಯಾಯಾಲಯದ ಮೂಲಕವೇ ದಾವೆ ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕು.

ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಯಾವ ಸಮಸ್ಯೆಗಳು ಎದುರಿಸಬೇಕಾಗುತ್ತದೆ?

ಕೃಷಿ ಜಮೀನಿನ ಮಾಲಿಕರು ಮರಣಹೊಂದಿದ ನಂತರ ಪೌತಿ ಖಾತೆಯಡಿ ಜಮೀನಿ ವರ್ಗಾವಣೆ ಮಾಡಿಕೊಳ್ಳದಿದ್ದರೆ ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತಾಗುತ್ತದೆ. ಬ್ಯಾಂಕುಗಳಿಂದ ಸಾಲಸೌಲಭ್ಯ ಪಡೆಯುವುದಕ್ಕಾಗುವುದಿಲ್ಲ. ಪ್ರಕೃತಿ ವಿಕೋಪದಿಂದಾಗಿ ಬೆಳೆನಷ್ಟವಾದರೆ ಬೆಳೆವಿಮೆಯಾಗಲಿ ಅಥವಾ ಬೆಳೆನಷ್ಟ ಪರಿಹಾರ ಪಡೆಯುವುದಕ್ಕಾಗುವುದಿಲ್ಲ. ಖಾತೆ ಬದಲಾವಣೆ ಮಾಡದಿದ್ದರೆ ಮುಂದೆ ಹೊಸ ಹೊಸ ಕಾನೂನು ಬಂದು ಕಚೇರಿಗಳಿಗೆ ಹಲವಾರು ಸಲ ಅಲದಾಡುವ ಸಂದರ್ಭ ಬರಬಹುದು.

 ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡುವುದು ಹೇಗೆ?

ಜಮೀನಿನ ವಾರಸುದಾರ ಮರಣ ಹೊಂದಿದ ನಂತರ ಸರ್ಕಾರ ಸೂಚಿಸಿರುವ ಮೂಲಗಳ ಪ್ರಕಾರ ಮರಣಹೊಂದಿದ ಮಾಲಿಕನ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪಡೆದು ನಮೂನೆ-1 ರಲ್ಲಿ ಅರ್ಜಿ ದಾಖಲಿಸಬೇಕು.  ಒಂದುವೇಳೆ ವಂಶವೃಕ್ಷ ಲಭ್ಯವಿರದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನ್ಯಾಯಾಲಯದಲ್ಲಿ ನೋಟರಿ ಮಾಡಿಸಬೇಕು. ಮರಣ ಹೊಂದಿದ ವ್ಯಕ್ತಿ ಸಾವನ್ನಪ್ಪಿ ಹಲವಾರು ವರ್ಷಗಳಾಗಿ ನೋಂದಣಿಯಾಗದಿದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣದ ಕುರಿತು ಆದೇಶ ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು.

ಪೌತಿ ಖಾತೆ ಅರ್ಜಿಗಳು ಎಲ್ಲಿ ಸಿಗುತ್ತವೆ?

ಪೌತಿ ಖಾತೆ ಮಾಡಿಕೊಳ್ಳಲು ಅರ್ಜಿ ನಮೂನೆ-1 ರಾಜ್ಯದ ಎಲ್ಲಾ ನಾಡಕಚೇರಿಗಳಲ್ಲಿ ಸಿಗುತ್ತವೆ. ತಹಶೀಲ್ದಾರ ಕಚೇರಿಯ ಎದುರುಗಡೆಯಿರುವ ಝರಾಕ್ಸ್ ಅಂಗಡಿಗಳಲ್ಲಿಯೂ ಪೌತಿ ಖಾತೆ ಅರ್ಜಿ ನಮೂನೆ 1 ಸಿಗುತ್ತದೆ. ಅರ್ಜಿ ಪಡೆದು ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಪೌತಿಖಾತೆಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : ಗ್ರಾಮಗಳಲ್ಲಿಯೇ ಸರ್ಕಾರಿ ಸೇವೆ ನೀಡಲು ಆರಂಭವಾಗಲಿದೆ ಗ್ರಾಮ ಒನ್ ಯೋಜನೆ- ಏನಿದು ಗ್ರಾಮ ಒನ್ ಯೋಜನೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕಿದೆ. ಮೊದಲು ಜಮೀನು ವಾರಸುದಾರರ ಪತ್ನಿ ಹೆಸರಿಗೆ ಖಾತೆ ಬದಲಾಗಬೇಕು. ಪತ್ನಿ ಒಪ್ಪಿಗೆ ನೀಡಿದರೆ ಮಾತ್ರ ಮಕ್ಕಳ ಹೆಸರಿಗೆ ಖಾತೆ ಮಾಡಲು ಅವಕಾಶವಿದೆ. ಜಮೀನು ದಾಖಲೆಗಳಲ್ಲಿ ಹೆಸರು, ಹಿಸ್ಸಾ, ನಂಬರ್ ತಪ್ಪಾಗಿದ್ದರೆ ಅರ್ಜಿ ಸಲ್ಲಿಸಿ ಅದನ್ನು ಸರಿಪಡಿಸಿಕೊಳ್ಳಬಹುದು.

ಜಮೀನು ಖಾತೆದಾರ ವ್ಯಕ್ತಿ ಮೃತಪಟ್ಟದಲ್ಲಿ ಸಂಬಂಧಿಸಿದವರು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತಂದು ಪೌತಿ ಖಾತೆ ಮಾಡಿಕೊಳ್ಳಬೇಕು. ಏಕೆ ಪೌತಿಖಾತೆ ಮಾಡಿಸಿಕೊಳ್ಳದಿದ್ದರೆ ಬೆಳೆ ಪರಿಹಾರ, ಪ್ರಕೃತಿ ವಿಕೋಪ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆ, ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲ.

Leave a Reply

Your email address will not be published. Required fields are marked *