ನುಗ್ಗೆ ಬೆಳೆಯುವುದು ತೀರ ಕಷ್ಟದ ಕೆಲಸವಲ್ಲ, ಆದರೆ ನಿರ್ವಹಣೆ ಮಾತ್ರ ಅಚ್ಚುಕಟ್ಟಾಗಿರಬೇಕು. ನುಗ್ಗೆಯನ್ನು (Drumstick) ತಮ್ಮ ಹೊಲಗದ್ದೆಗಳಲ್ಲಿ ಅಥವಾ ಪಾಳು ಬಿದ್ದರುವ ಜಮೀನುಗಳಲ್ಲಿ ಬೆಳೆಸಿದರೆ ಕೈತುಂಬ ಸಂಪಾದನೆ ನಿಶ್ಚಿತ. ಹಾಗಾದರೆ ಹೆಚ್ಚು ಇಳುವರಿ ಕೊಡುವ ನುಗ್ಗೆ ಕಾಯಿಗಳ (moringa) ಮಾಹಿತಿ ತಿಳಿದುಕೊಳ್ಳೋಣವೇ…. ಇಲ್ಲಿದೆ ಸಂಪೂರ್ಣ ಮಾಹಿತಿ.
ನುಗ್ಗೆ ತೀರ ದೊಡ್ಡ ಗಿಡವಾಗುವ ಬೆಳೆ ಅಲ್ಲ, ಆರೇಳು ಅಡಿ ಎತ್ತರಕ್ಕೆ ಪೊದೆಯಾಕಾರದಲ್ಲಿ ಬೆಳೆಸಬೇಕು. ಹೀಗಾಗಿ ಜಾಸ್ತಿ ಅಂತರ ಇಟ್ಟು ಬೆಳೆಯುವ ಅವಶ್ಯಕತೆಯಿಲ್ಲ. ಸಾಲಿನಿಂದ ಸಾಲಿಗೆ ಏಳು ಅಡಿ, ಗಿಡದಿಂದ ಗಿಡಕ್ಕೆ ಆರು ಅಡಿ ಸಾಕು, ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಕೊಟ್ಟರೆ ಸಾಕು, ಜೊತೆಗೆ ಜೀವಮೃತ ತಯಾರಿಸಿಕೊಂಡು ಪ್ರತಿ ಇಪ್ಪತ್ತು ದಿನಕ್ಕೊಮ್ಮೆ ಕಡ್ಡಾಯವಾಗಿ ಸಿಂಪಡಿಸಬೇಕು. ಹಾಗೂ ಗಿಡದ ಬುಡದಲ್ಲಿ ಹಾಕಬೇಕು. ಇಷ್ಟಾದರೆ ಸಾಕು, ಮತ್ಯಾವುದೇ ಮೇಲುಗೊಬ್ಬರದ ಅವಶ್ಯಕತೆಯಿಲ್ಲ ಎನ್ನುತ್ತಾರೆ ತಜ್ಞರು.
ನುಗ್ಗೆ ಬಹುವಾರ್ಷಿಕ ತರಕಾರಿ ಬೆಳೆಯಾಗಿದ್ದು, ಇದರ ಕಾಯಿಗಳಲ್ಲದೆ ಸೊಪ್ಪು ಹಾಗೂ ಹೂಗಳನ್ನು ಸಹ ತರಕಾರಿಯಂತೆ ಉಪಯೋಗಿಸಬಹುದು.
ಮಣ್ಣು : ಸಾಧಾರಣವಾಗಿ ನುಗ್ಗೆಯನ್ನು ಎ ಲ್ಲ ತರಹದ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ಜಿಗುಟು ಮಣ್ಣು ಯೋಗ್ಯವಾದುದಲ್ಲ. ಮರಳುಮಿಶ್ರಿತ ಗೋಡು ಮಣ್ಣು ಈ ಬೆಳೆಗೆ ಅತಿ ಸೂಕ್ತ.
ಬಿತ್ತನೆ ಕಾಲ : ಇದು ಮುಖ್ಯವಾಗಿ ಅಲ್ಪ ಮಳೆ ಬೀಳುವ ಒಣ ಪ್ರದೇಶದ ಬೆಳೆ. ಇದನ್ನು ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡಬಹುದು.ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲಾ ಕಾಲದಲ್ಲಿ ಈ ಬೆಳೆಯನ್ನು ನಾಟಿ ಮಾಡಬಹುದು.
- ಜಾಫ್ನಾ : ಗಿಡಗಳು 5 ಮೀ. ಎತ್ತರ ಬೆಳೆಯುತ್ತವೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಬೆಳೆಯುವ ತಳಿಯಾಗಿದೆ. ನುಗ್ಗೆಕಾಯಿಗಳು 60-90 ಸೆಂ. ಮೀ. ಉದ್ದವಾಗಿದ್ದು ಮೆತ್ತನೆಯ ತಿರುಳು ಹಾಗೂ ಒಳ್ಳೆಯ ರುಚಿಯನ್ನು ಹೊಂದಿದೆ.
- ಚವಕಚೇರಿ ಮುರುಂಗಾ : ಈ ತಳಿಯು ಜಾಫ್ನಾ ತಳಿಯ ಹೋಲಿಕೆ ಪಡೆದಿದ್ದು ನುಗ್ಗೆಕಾಯಿಗಳು 90-120 ಸೆಂ. ಮೀ. ಉದ್ದವಾಗಿರುತ್ತವೆ.
- ಜಿ.ಕೆ.ವಿ.ಕೆ. -1 : ಸುಮಾರು 250-3೦೦ ಕಾಯಿಗಳನ್ನು ಬಿಡುತ್ತದೆ. ಪ್ರತಿ ಕಾಯಿಯು 35-40 ̧ಸೆಂ. ಮೀ. ಉದ್ದವಿದ್ದು 40 ಗ್ರಾಂತೂಕವಿರುತ್ತದೆ. ಈ ತಳಿಯು ಅಧಿಕ ̧ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ.
- ಜಿ.ಕೆ.ವಿ.ಕೆ. -2 : ಗಿಡ್ಡಜಾತಿಯ ಫಲ ಭರಿತವಾದ ತಳಿ. ಒಂದು ವರ್ಷಕ್ಕೆ ಸುಮಾರು 300-400 ಕಾಯಿಗಳನ್ನು ಬಿಡುತ್ತದೆ.
- ಜಿ.ಕೆ.ವಿ.ಕೆ-3 : ಗಿಡ್ಡ ಜಾತಿಯ ತಳಿಯಾಗಿದೆ. ನುಗ್ಗೆಕಾಯಿಗಳು ತ್ರಿಕೋನಾಕಾರವಾಗಿದ್ದು, ಕಪ್ಪು ಮಿಶ್ರಿತ ಹಸಿರು ಬಣ್ಣದಿಂದಕೂಡಿರುತ್ತವೆ. ಈ ತಳಿಯು ಅಧಿಕ ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ. ಒಂದು ವರ್ಷಕ್ಕೆ ಸುಮಾರು 250-300 ಕಾಯಿಗಳನ್ನು ಪ್ರತಿ ಗಿಡದಿಂದ ಪಡೆಯಬಹುದು.
- ಧನರಾಜ ( ಸೆಲೆಕ್ಷನ್ 6/4) : ಇದು ಗಿಡ್ಡ ತಳಿ, ತೆಂಗು ಮತ್ತು ಮಾವು ತೋಟಗಳಲ್ಲಿ ಅಂತರ ಬೆಳೆಯಾಗಿ, ಜಲಾನಯನ ಪ್ರದೇಶಗಳಲ್ಲಿ ಇಡೀ ಬೆಳೆಯಾಗಿ ಹಾಗೂ ಕೈತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಬೀಜ ಬಿತ್ತಿದ ಕೇವಲ 9-10 ತಿಂಗಳುಗಳಲ್ಲಿ ಫಸಲು ಕೊಡುವುದು. ಎರಡು ವರ್ಷದ ಗಿಡ ಪ್ರತಿ ವರ್ಷ 250-300 ರವರೆಗೆ ಕಾಯಿ ಕೊಡುವುದು. ಕಾಯಿಗಳು 35-40 ̧ಸೆಂ. ಮೀ.ಉದ್ದವಿರುತ್ತವೆ.
- ೭. ಪಿ.ಕೆ.ಎಂ.-1 : ಇದು ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6-12 ತಿಂಗಳಲ್ಲಿ ಫಸಲು ಕೊಡುತ್ತದೆ. ಮೆತ್ತನೆಯ ತಿರುಳು ಮತ್ತು ಉತ್ತಮ ರುಚಿಯನ್ನು ಹೊಂದಿರುತ್ತದೆ.
- ಭಾಗ್ಯ (ಕೆ.ಡಿ.ಎಮ್-01) : ಈ ತಳಿಯು ಮೂಲವಾಗಿ ಗಿಡ್ಡ ಜಾತಿಯದ್ದು. ಗಿಡದ ಎತ್ತರ 2-4 ಮೀ. ವರೆಗೆ ಬೆಳೆಯುವುದು.ಗಿಡಗಳು ಶೀಘ್ರವಾಗಿ ಹೂ ಬಿಡುತ್ತವೆ (100-110 ದಿನಗಳು ನಾಟಿ ಮಾಡಿದ ನಂತರ) ಒಟ್ಟು ನಾಟಿ ಮಾಡಿದ 160-180 ದಿನಗಳನಂತರ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ತಳಿಯ ವೈಶಿಷ್ಟತೆ ಎಂದರೆ ಕಾಯಿಗಳು ಬಿಟ್ಟಾಗಲೂ ಸಹಿತ ಗೊಂಚಲುಗಳಲ್ಲಿ ಹೂ ಹಾಗೂ ಮಿಡಿಕಾಯಿಗಳು ನಿರಂತರವಾಗಿ ಬರುವುದರಿಂದ ವರ್ಷವಿಡೀ ಫಸಲ ತೆಗೆಯಬಹುದು. ಪ್ರತಿ ಕಾಯಿಯು 60-70 ಸೆಂ. ಮೀ.ಉದ್ದವಿದ್ದು, ಕಡುಹಸಿರು ಬಣ್ಣ ಹೊಂದಿ ದುಂಡಗೆ ಇರುವುದು. ಪ್ರಥಮ ವರ್ಷದಿಂದ 350-400 ಕಾಯಿಗಳು ಹಾಗೂ ಎರಡನೇ ವರ್ಷದಲ್ಲಿ 800-1000 ಕಾಯಿಗಳ ಉತ್ತಮ ಫಸಲನ್ನು ಪಡೆಯಬಹುದು.