ರೈತರ ಜಮೀನಿನಲ್ಲಿ ನೀರು ಪೋಲಾಗುವುದನ್ನು ತಡೆದು ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕಗಳಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.
ಹೌದು, ಕೃಷಿಗೆ ಪ್ರೋತ್ಸಾಹ, ಕೃಷಿ ನೀರಾವರಿಯನ್ನು ಗಮನದಲ್ಲಿರಿಸಿಕೊಂಡು ದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಕೃಷಿ ಭೂಮಿಗಳಿಗೂ ನೀರಾವರಿ ಸೌಲಭ್ಯ ಒದಗಿಸುವುದಕ್ಕಾಗಿ ಈ ಯೋಜನೆಯನ್ನು ಆಂಭಿಸಲಾಗಿದೆ. ನಗರಗಳ ಕಲುಷಿತ ನೀರನ್ನು ಶುದ್ಧೀಕರಿಸಿ ಗ್ರಾಮಾಂತರ ಪ್ರದೇಶಗಳ ಕೃಷಿಗೆ ಒದಗಿಸುವುದು ಮತ್ತು ಜನರಲ್ಲಿ ನೀರಿನ ಬಳಕೆ ಬ್ಗಗೆ ಜಾಗೃತಿ ಮೂಡಿಸುವ ಅಭಿಯಾನವೂ ಈ ಯೋಜನೆಯಡಿಯಲ್ಲಿ ಬರುತ್ತದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ರೈತರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸ್ಪ್ರೀಂಕ್ಲರ್ ಘಟಕ ಸ್ಥಾಪನೆಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಈ ವಿಧಾನದಿಂದ ಹೊಲವನ್ನು ಸಮತಟ್ಟು ಮಾಡದೆಯೇ ನೀರಾವರಿ ಮಾಡಬಹುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಕೇಂದ್ರದಿಂದ ಶೇ. 60 ರಾಜ್ಯದಿಂದ ಶೇ. 40 ರ ಅನುಪಾತದಲ್ಲಿ ಯೋಜನೆ ವೆಚ್ಚವನ್ನು ಭರಿಸಲಾಗುವುದು. ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ ಜಲಾನಯನ ಉಪಚಾರಕ್ಕೆ 22 ಸಾವಿರ ರೂಪಾಯಿ ಗುಡ್ಡಗಾಡು ಪ್ರದೇಶದ ಉಪಚಾರಕ್ಕೆ28 ಸಾವಿರ ರೂಪಾಯಿಯವರೆಗೆ ಅನುದಾನ ನೀಡಲಾಗುವುದು.
ಕೃಷಿ ಸಿಂಚಾಯಿ ಯೋಜನೆಯ ಲಾಭ ಪಡೆಯಲು ಅರ್ಹತೆಗಳು
ರೈತರಿಗೆ ಜಮೀನು ಇರಬೇಕು. ನೀರಾವರಿ ಸೌಲಭ್ಯ ಹೊಂದಿರಬೇಕು. ರೈತರು ಕೆ-ಕಿಸಾನ್ ನಲ್ಲಿ ಹೆಸರು ನೋಂದಣಿ ಮಾಡಿಸಿರಬೇಕು. ಎಫ್.ಐಡಿ ಸಂಖ್ಯೆ ಹೊಂದಿರಬೇಕು.
ಕೃಷಿ ಸಿಂಚಾಯಿ ಯೋಜನೆಯ ಲಾಭ ಪಡೆಯಲು ಬೇಕಾಗುವ ದಾಖಲೆಗಳು
ರೈತರು ಆಧಾರ್ ಕಾರ್ಡ್ ಹೊಂದಿರಬೇಕು. ಜಮೀನಿನ ಜಮಾಬಂಧಿ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಇತ್ತೀಚಿನ ಪಾಸ್ಪೋರ್ಟ್ ಸೈಜಿನ ಎರಡು ಫೋಟೋಗಳನ್ನು ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ ನಂಬರ್ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ಇದನ್ನೂ ಓದಿ : ಬೆಳೆವಿಮೆ ಸ್ಟೇಟಸ್ ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಆಸಕ್ತ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೀರಾವರಿಗಾಗಿ ಸ್ಲ್ರಿಂಕ್ಲರ್ ಪಡೆಯಬಹುದು. ಲಭ್ಯತೆಯ ಆಧಾರದ ಮೇಲೆ ರೈತರಿಗೆ ಕೃಷಿ ಚಟುವಟಿಕೆಗಾಗಿ ಸ್ಪ್ರಿಂಕ್ಲರ್ ಘಟಕ ಸ್ಥಾಪಿಸಲು ಸಹಾಯಧನ ನೀಡಲಾಗುವುದು.
ರೈತರಿಗೆ 63 ಎಂಎಂ ಪೈಪ್ ಗಳಿಗೆ 1932 ರೂಪಾಯಿ ಹಾಗೂ 75 ಎಂಎಂ ಪೈಪ್ ಗಳಿಗೆ 2070 ರೂಪಾಯಿ ವಂತಿಗೆ ಭರಿಸಬೇಕು. ಎಸ್.ಸಿ ಎಸ್ ಟಿ ರೈತರಿಗೆ ಶೇ, 90 ರಷ್ಟು ಅಂದರೆ 26690 ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ರೈತರು ತಮ್ಮ ವಂತಿಗೆಯ ಹಣವನ್ನು ಆರ್.ಟಿ.ಜಿ.ಎಸ್ ಮೂಲಕ ಪಾವತಿಸಿದ ನಂತರ ಸೌಲಭ್ಯ ನೀಡಲಾಗುವುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕರ್ನಾಟಕಕ್ಕೆ 642.26 ಕೋಟಿ ಮಂಜೂರು
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 642.26 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 2.75 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಮೂಲಕ ಮಣ್ಣಿನ ತೇವಾಂಶ ರಕ್ಷಣೆ, ಅಂತರ್ಜಲ ಹೆಚ್ಚಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗೆಗಾಗಿ 642.26 ಕೋಟಿ ರೂಪಾಯಿ ಹಣ ಮಂಜೂರಾಗಿದ್ದು, 5 ವರ್ಷಗಳಲ್ಲಿ ರಾಜ್ಯದ 57 ತಾಲೂಕುಗಳಲ್ಲಿ 57 ಉಪ ಜಲಾನಯನಗಳನ್ನು ಉಪಚರಿಸಲು ಅನುಮೋದನೆ ದೊರಕಿದೆ ಎಂದರು.