ರೈತರ ಜಮೀನುಗಳ ದಾಖಲೆಗಳನ್ನು ರೈತರಿಗೆ ಸುಲಭವಾಗಿ ದೊರಕುವಂತೆ ಮಾಡಲು ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ ಕಂದಾಯ ಇಲಾಖೆಯು ರೈತರ ಮನೆಗೆ ಕಂದಾಯ ದಾಖಲೆಗಳು ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ರೈತರ ಮನೆ ಮನೆಗೆ ಪಹಣಿ, ಜಾತಿ ಆದಾಯ ಪ್ರಮಾಣ ಪತ್ರಗಳನ್ನು ತಲುಪಿಸಿತ್ತು. ರೈತರ ಪಹಣಿಯನ್ನು ಆನ್ಲೈನ್ ನಲ್ಲೇ ಪಡೆಯಲು ಕಂದಾಯ ಇಲಾಖೆ ವ್ಯವಸ್ಥೆ ಮಾಡಿದೆ. ಇದರೊಂದಿಗೆ ಮೋಜಿನಿಗೆ ಅರ್ಜಿ ಸಲ್ಲಿಸುವುದು, ಅರ್ಜಿಯ ಸ್ಟೇಟಸ್ ಸೇರಿದಂತೆ ಇನ್ನಿತರ ದಾಖಲೆ ಆನ್ಲೈನ್ ನಲ್ಲೇ ಪಡೆಯಲು ರೈತರಿಗೆ ಕಂದಾಯ ಇಲಾಖೆಯು ವ್ಯವಸ್ಥೆ ಮಾಡಿದೆ.

ಪಹಣಿ, ಮೋಜಿನಿಯೊಂದಿಗೆ ಈಗ ರೈತರಿಗೆ ತತ್ಕಾಲ್ ಪೋಡಿ, 11ಇ ನಕ್ಷೆ ಹಾಗೂ ಭೂ ಪರಿವರ್ತನೆಗೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಹೌದು, ರೈತ ಸ್ವಾವಲಂಬಿ ಆ್ಯಪ್ ಮೂಲಕ 11ಇ ನಕ್ಷೆ, ತತ್ಕಾಲ್ ಪೋಡಿ ಹಾಗೂ ಭೂ ಪರಿವರ್ತನೆಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಈಗ ರೈತರು ತಮ್ಮ ಜಮೀನಿನ ಪಹಣಿ, ಪೋಡಿ, 11ಇ ನಕ್ಷೆ ಹಾಗೂ ಭೂಪರಿವರ್ತನೆಗಾಗಿ ಅರ್ಜಿ ಸಲ್ಲಿಸಲು ಸರ್ಕಾರಿ ಕಚೇರಿಗಳಿಗೆ ಸುತ್ತಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ದಾಖಲೆ ಪಡೆಯಬಹುದು.

ರೈತರು ಸ್ವಾವಲಂಬಿ ಆ್ಯಪ್ ಮೂಲಕ ಹೇಗೆ ತತ್ಕಾಲ್ ಪೋಡಿ, 11ಇ ನಕ್ಷೆಗಾಗಿ ಅರ್ಜಿ ಸಲ್ಲಿಸಬೇಕು?

ರೈತರು ಮನೆಯಲ್ಲಿಯೇ ಕುಳಿತು, ತತ್ಕಾಲ್ ಪೋಡಿ, 11ಇ ನಕ್ಷೆ, ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಬೇಕಾದರೆ ಈ

https://bhoomojini.karnataka.gov.in/Service27/

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಭೂ ಕಂದಾಯ ಇಲಾಖೆಯ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಆಗ ರೈತರು ತಮ್ಮ ಮೊಬೈಲ್ ನಂಬರ್ ಹಾಕಿ, ಕೆಳಗಡೆ ಕಾಣುವ ಕ್ಯಾಪ್ಚ್ಯಾ ಕೋಡ್ ಹೇಗಿದೆಯೋ ಅದೇ ರೀತಿ ನಮೂದಿಸಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಪಡೆಯಲು ಸೆಂಡ್ ಓಟಿಪಿ ಕ್ಲಿಕ್ ಮಾಡಬೇಕು. ನಂತರ ನಿಮ್ಮ ನೋಂದಾಯಿತ ಮೊಬೈಲಿಗೆ ಒಂದು ಓಟಿಪಿ ಬರುತ್ತದೆ. ರೈತರು ಮೊಬೈಲಿಗೆ ಬಂದ ಓಟಿಪಿಯನ್ನು ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ರೈತರಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ತೊಂದರೆಯಾಗಬಾರದೆಂದು ಅರ್ಜಿ ಸಲ್ಲಿಸುವಾಗ ಏನಾದರೂ ತೊಂದರೆಯಾದರೆ ಮಾಹಿತಿ ನೀಡಲು ಒಂದು ವೀಡಿಯೋ ಲಿಂಕ್ ಸಹ ಅಪ್ಲೋಡ್ ಮಾಡಲಾಗಿದೆ. ಆ ವೀಡಿಯೋ ಸಹಾಯದಿಂದ ರೈತರು ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ.

ರೈತರು  ಅರ್ಜಿ ಸಲ್ಲಿಸುವಾಗ ಬಲಗಡೆ ಕಾಣುವ ಹೊಸ ಅರ್ಜಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ವೈಯಕ್ತಿಕ ವಿವರಗಳನ್ನು ತುಂಬಬೇಕು. ಜಮೀನನ ವಿವರಗಳು,  ಖರೀದಿದಾರರ ವಿವರಗಳು ಹಾಗೂ ಹಣ ಸಂದಾಯ ಈ ಮೂರರದಲ್ಲಿ ಅರ್ಜಿದಾರರ ವಿವರಗಳ ಮೇಲೆ ಕ್ಲಿಕ್ ಮಾಡಬೇಕು. ರೈತರು ಪಹಣಿಯಲ್ಲಿ ಹೆಸರು ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ. ರೈತರ ಹೆಸರು ಆಧಾರ್ ಕಾರ್ಡ್ ಹಾಗೂ ಪಹಣಿಯಲ್ಲಿ ಒಂದೇ ರೀತಿ ಇರಬೇಕು.

ಇದನ್ನೂ ಓದಿ ಐದು ನಿಮಿಷ ಮೊದಲೇ ಸಿಡಿಲಿನ ಮುನ್ಸೂಚನೆ ನೀಡುತ್ತದೆ ದಾಮಿನಿ ಆ್ಯಪ್- ಇಲ್ಲಿದೆ ಸಂಪೂರ್ಣ ಮಾಹಿತಿ

ನಾನೇ ಸ್ಕೆಚ್ ಸಿದ್ದಪಡಿಸಿ ಅಪ್ಲೋಡ್ ಮಾಡುತ್ತೇನೆ ಹಾಗೂ ಭೂ ಮಾಪನ ಇಲಾಖೆಯಿಂದ ಸಿದ್ದಪಡಿಸಲು ನಾನು ಬಯಸುತ್ತೇನೆ ಎಂಬ ಎರಡು ಆಯ್ಕೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. 11ಇ ನಕ್ಷೆಗಾಗಿ ಅರ್ಜಿ ಸಲ್ಲಿಸಲು ಬಯಸಿದ್ದರೆ ನಾನೇ ಸ್ಕೆಚ್ ಸಿದ್ದಪಡಿಸಿ ಅಪ್ಲೋಡ್ ಮಾಡುತ್ತೇನೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅರ್ಜಿಸಲ್ಲಿಸುವಾಗ ಯಾವುದಕ್ಕೆ ಅರ್ಜಿ ಸಲ್ಲಿಸಬಯಸುತ್ತಾರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೆಸರು, ತಂದೆಯ ಹೆಸರು, ಮೊಬೈಲ್ ನಂಬರ್, ಆಧಾರ್ ನಂಬರ್, ಗ್ರಾಮ, ತಾಲೂಕು, ಜಿಲ್ಲೆ ಸೇರಿದಂತೆ ಇನ್ನಿತರ ಮಾಹಿತಿ ನಮೂದಿಸಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

Leave a Reply

Your email address will not be published. Required fields are marked *