ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ (Crop Survey) ಯನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸುವ ವಿನೂತನ ಯೋಜನೆ ಬೆಳೆ ಸಮೀಕ್ಷೆಯಾಗಿದೆ.

ಹೌದು, ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ಬೆಳೆ ಸಮೀಕ್ಷೆ ಮಾಡಲು ರೈತರು ಈಗ ಎಲ್ಲಿಯೂ ಹೋಗಬೇಕಿಲ್ಲ. ಸ್ವತಃ ರೈತರೇ ತಮ್ಮ ಮೊಬೈಲ್ ಮೂಲಕ ಸಮೀಕ್ಷೆ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ರೈತರು ತಮ್ಮ ಜಮೀನುಗಳ ಸರ್ವೇ ನಂಬರ್, ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಇನ್ನಿತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವತಃ ತಾವೇ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸಬೇಕಾಗುತ್ತದೆ.

ರೈತರು ತಮ್ಮ ಮೊಬೈಲ್‌ಗಳಲ್ಲಿ ‘ಖಾರಿಫ್ ಸೀಸನ್ ಫಾರ್ಮರ್ ಕ್ರಾಪ್ ಸರ್ವೆ 2021-22’ (Kharif Season Farmer Crop Survey 2021-22) ಎಂಬ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ತಮ್ಮ ಆಂಡ್ರಾಯ್ಡ್ ಮೊಬೈಲ್‌ನ ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಗೂಗಲ್ ಪ್ಲೇ ಸ್ಟೋರ್ ನಲ್ಲಿ Kharif Season Farmer Crop Survey 2021-22  ಟೈಪ್ ಮಾಡಿ ಆ್ಯಪ್‌ ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ  https://play.google.com/store/apps/details?id=com.csk.Khariffarmer2021.cropsurvey&hl=en_IN&gl=US ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ಸ್ಟಾಲ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.ಆಗ ಮುಂಗಾರು ರೈತರ ಬೆಳೆ ಸಮೀಕ್ಷೆ 2021-22 ಚಿತ್ರ ಕಾಣುತ್ತದೆ. . ಆ್ಯಪ್‌ನಲ್ಲಿ ಆರ್ಥಿಕ ವರ್ಷ (2021-22) ಹಾಗೂ ಋತು (ಮುಂಗಾರು) ಎಂದು ಆಯ್ಕೆ ಮಾಡಬೇಕು. ಆಧಾರ್ ಕಾರ್ಡ್ ಬಾರ್ ಕೋಡ್ ಸ್ಕ್ಯಾನ್ ಮಾಡಬಹುದು. ಆಧಾರ್ ಸಂಖ್ಯೆ, ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು,ಹುಟ್ಟಿದ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ , ಲಿಂಗ, ನಮೂದಿಸಿ ಸಕ್ರಿಯಗೊಳಿಸಿದ ಬಳಿಕ ರೈತರು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (ಓಟಿಪಿ) ಬರುತ್ತದೆ. ಆ ಓಟಿಪಿ ಸಂಖ್ಯೆಯನ್ನು ದಾಖಲಿಸಿ ನೋಂದಣಿಗೆ ಸಲ್ಲಿಸಬೇಕು.

ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡ ನಂತರ ಮೊದಲು ರೈತರ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮದ ಹೆಸರನ್ನು ನಮೂದಿಸಬೇಕು. ಆ ನಂತರ, ಕೃಷಿ ಬೆಳೆ ಬೆಳೆದಿರುವ ಸರ್ವೇ ನಂಬರ್, ಹಿಸ್ಸಾ ಹಾಗೂ ಹೊಲದ ಮಾಲೀಕರ ಹೆಸರು ಆಯ್ಕೆ ಮಾಡಬೇಕು. ಬಳಿಕ ಅಲ್ಲಿ ನಮೂದಿಸಲಾಗಿರುವ ಸರ್ವೇ ನಂಬರ್‌ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ಕ್ಷೇತ್ರವನ್ನು ನಮೂದಿಸಿ, ಬೆಳೆಯ ಫೋಟೊ ತೆಗೆದು ಮಾಹಿತಿಯನ್ನು ಅಪ್ ಲೋಡ್ ಮಾಡಬೇಕು.

ಕೃಷಿ ವಲಯ ಹಾಗೂ ಕೃಷಿಕರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೊಳಿಸುವ ವಿವಿಧ ಯೋಜನೆಗಳ ಅನುಷ್ಠಾನಗೊಳಿಸಲು ಪ್ರಮುಖ ಆಧಾರವಾಗಿ ಬೆಳೆ ಸಮೀಕ್ಷೆ ದತ್ತಾಂಶವನ್ನು ಬಳಸಲಾಗುವುದು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಲೆ ನಿಗದಿ ಮಾಡಲು ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಮೊಬೈಲ್ ಆ್ಯಪ್ ಸರ್ವೆ ಸಹಾಯವಾಗಲಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸಲು, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ ಸಿದ್ಧಪಡಿಸಲು ಮತ್ತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲು ನೆರವಾಗುತ್ತದೆ. ಅಲ್ಲದೆ, ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆಯನ್ನೇ ಆಧಾರವಾಗಿ ಇರಿಸಿಕೊಳ್ಳುವ ಕಾರಣ, ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರವನ್ನು ರೈತರ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನಮೂದಿಸಲು ಕೋರಲಾಗಿದೆ.

ಬೆಳೆ ಸಮೀಕ್ಷೆ ಅಪ್ಲೋಡ್ ಮಾಡಲು ಸಮಸ್ಯೆಯಾಗುತ್ತಿದ್ದರೆ ಅಥವಾ ಸ್ಮಾಹರ್ಟ್ ಫೋನ್ ಇರದಿದ್ದರೆ ರೈತರ ಪರವಾಗಿ ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ, ಕೃಷಿ ಇಲಾಖೆಯಿಂದ ಸಮೀಕ್ಷಕರ ಸಹಾಯದಿಂದ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಪಡೆದು ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡಬಹುದು.

ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ತಹಶೀಲ್ದಾರರ ಕಚೇರಿ ಅಥವಾ ಸಂಬAಧಪಟ್ಟ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು

Leave a Reply

Your email address will not be published. Required fields are marked *