ರೈತರು ತಿಂಗಳುಗಟ್ಟಲೇ ಕಷ್ಟಪಟ್ಟು ಉತ್ತಿ, ಬಿತ್ತಿ, ಬೆಳೆದ ಬೆಳೆ ಕೈ ಸೇರುವವರೆಗೂ ಪಡಬಾರದ ಕಷ್ಟ ಪಡುತ್ತಾರೆ. ಆರಂಭದಲ್ಲಿ ಅತೀವೃಷ್ಟಿನೋ ಅನಾವೃಷ್ಟಿಯೋ ಹೊಡೆತ ನೀಡುತ್ತದೆ. ನಂತರ ಮಳೆಯ ಕೊರತೆ, ಅಥವಾ ಕಳೆ ಸಮಸ್ಯೆ, ಬೆಳಗಳಿಗೆ ತಗಲುವ ರೋಗ, ಕೀಟಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳುತ್ತಾರೆ. ನಂತರ ಕಾಡುವುದೇ ಕಾಡುಪ್ರಾಣಿಗಳ ಸಮಸ್ಯೆಯೂ ಒಂದು.
ಅದರಲ್ಲೆ ಕರ್ನಾಟಕದ ಆಯಾ ಭಾಗದ ಕಡೆ ವಿವಿಧ ಪ್ರಾಣಿಗಳ ಸಮಸ್ಯೆಯಿದೆ. ಕೆಲವು ಕಡೆ ಆನೆಗಳ ಹಿಂಡು, ಇನ್ನೂ ಕೆಲವು ಕಡೆ,ಕಾಡುಹಂದಿಗಳ ಕಾಟ. ಉತ್ತರ ಕರ್ನಾಟಕದ ಭಾಗದ ಕಡೆ ಹೆಚ್ಚು ಕಾಡುಹಂದಿಗಳ ಕಾಟವಿದೆ. ಈ ಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ತಾವೇ ಹತ್ತಾರು ರೀತಿಯ ಪ್ರಯೋಗಗಳನ್ನು ಮಾಡಿ ಅದರಲ್ಲಿ ಯಶಸ್ವಿ ಕೂಡ ಆಗುತ್ತಿದ್ದಾರೆ.
ಹೌದು, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಕಡೆ ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ಹಳೆ ಸೀರೆಗಳ ಮೊರೆ ಹೋಗುತ್ತಾರೆ.ಸೀರೆಗಳಿಂದ ಬೆಳೆ ಹೇಗೆ ರಕ್ಷಿಸಿಕೊಳ್ಳುತ್ತಾರೆ ಅಂದು ಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.
ಬೆಳೆ ಮೊಳಕೆ ಒಡೆಯುವಾಗ, ಹಾಗೂ ಕಟಾವಿಗೆ ಬಂದಾಗ ಹೆಚ್ಚು ಕಾಡು ಹಂದಿಗಳ ಕಾಟವಿರುತ್ತದೆ. ಈ ಸಂದರ್ಭದಲ್ಲಿ ರೈತರು ತಮ್ಮ ಬೆಳೆಯ ಸುತ್ತಮುತ್ತ ಹಳೆ ಸೀರೆಗಳನ್ನು ಕಟ್ಟುತ್ತಾರೆ. ಹಾಗಂತ ಅವುಗಳನ್ನು ಅಲಂಕಾರಕ್ಕಾಗಿ ಕಟ್ಟುವುದಿಲ್ಲ. ಅದರ ಬದಲಾಗಿ ಕೈಗೆ ಬಂದ ತುತ್ತು ಕಾಡುಪ್ರಾಣಿಗಳ ಪಾಲಾಗಬಾರದೆಂಬ ಉದ್ದೇಶದಿಂದ ಸೀರೆ ಕಟ್ಟಿರುತ್ತಾರೆ.
ಕಾಡು ಹಂದಿಗಳು ಹಿಂಡು ಹಿಂಡಾಗಿ ಬಂದು, ಇಡೀ ಹೊಲದಲ್ಲಿ ಹೊರಳಾಡಿ, ಬೆಳೆಯನ್ನು ಸರ್ವನಾಶ ಮಾಡಿಬಿಡುತ್ತದೆ. ಸಾಲು ಸಾಲು ಹಿಡಿದು ಬೆಳೆಯನ್ನೆಲ್ಲಾ ತಿಂದು ಮುಗಿಸುತ್ತವೆ. ಹೀಗಾಗಿ ಅನಿವಾರ್ಯವಾಗಿ ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲು ಸೀರೆಗಳನ್ನು ಕಟ್ಟುತ್ತಾರೆ. ಸೀರೆಗಳನ್ನು ನೋಡಿ ಕಾಡು ಹಂದಿಗಳು ಜಮೀನಿನತ್ತ ಬರೋದಿಲ್ಲ. ಇಧರಿಂದ ಬೆಳೆ ಉಳಿಯುತ್ತದೆ ಎನ್ನುತ್ತಾರೆ ರೈತರು.
ಸೀರೆ ಕಟ್ಟರೆ ಕಾಡು ಹಂದಿಗಳು ಬರುವುದಿಲ್ಲವೇ?
ಸೀರೆಯನ್ನು ಕಟ್ಟಿದರೂ ಕೆಲ ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ತಿಂದಿರುವ ಉದಾಹರಣೆಗಳು ಇವೆ. ಆದರೆ ಹೆಚ್ಚಿನ ಕಾಡು ಹಂದಿಗಳು ಸಿರೆಗಳನ್ನು ಕಂಡೊಡನೆ ಬಲೆ ಇದೆ ಎಂದು ಭಾವಿಸಿ ಬೆಳೆಯ ಸಮೀಪರ ಬರದೆ ಹಿಂದಿರುಗುತ್ತವೆ. ಹೀಗಾಗಿ ಹೆಚ್ಚಿನ ರೈತರು ತಮ್ಮ ಬೆಳೆಗಳ ಸುತ್ತಮುತ್ತ ಸೀರೆಗಳನ್ನು ಕಟ್ಟುವ ರೂಢಿಯನ್ನು ಹಾಕಿಕೊಂಡಿದ್ದಾರೆ.
. ಜಮೀನುಗಳ ಸುತ್ತಲೂ ಸೀರೆಗಳನ್ನು ಕಟ್ಟಿದ್ದರಿಂದಾಗಿ ಕಾಡು ಹಂದಿಗಳು ಜಮೀನಿನಲ್ಲಿ ಮನುಷ್ಯರು ಇದ್ದಾರೆ ಎಂದು ಅಂದುಕೊಂಡು ಬೆಳೆಯೊಳಗೆ ಕಾಲಿಡಿವುದಿಲ್ಲ ಎಂಬುದು ರೈತರ ನಂಬಿಕೆಯಾಗಿದೆ. ಏನೇ ಇರಲಿ ಬೆಳೆ ರಕ್ಷಣೆಯಾದರೆ ಸಾಕು. ಎಂಬ ಭಾವನೆಯಿಂದ ಬಣ್ಣ ಬಣ್ಣದ ಸೀರೆಗಳನ್ನು ತಮ್ಮ ಜಮೀನಿನ ಸುತ್ತ ಬೇಲಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಅಲ್ಪಾವಧಿಯಲ್ಲಿ ಬರುವ ವಾಣಿಜ್ಯ ಬೆಳೆ ಶೇಂಗಾ. ಭೂಮಿಯ ಒಳಗೆ ಬಲಿಯುವ ಈ ಬೆಳೆಗೆ ಸೂಕ್ತ ರಕ್ಷಣೆ ಅತ್ಯಗತ್ಯ. ಇಲ್ಲವಾದಲ್ಲಿ ಪ್ರಾಣಿಗಳು ವಿಶೇಷವಾಗಿ ನೆಲವನ್ನು ಅಗೆದು ಬೆಳೆ ಹಾಳು ಮಾಡುವ ಕಾಡು ಹಂದಿಗಳು ಕಾಟ ಹೆಚ್ಚು. ರಾತ್ರಿ ವೇಳೆ ಹಿಂಡು ಹಿಂಡಾಗಿ ದಾಳಿ ಇಡುವ ಹಂದಿಗಳು, ಮೂತಿಯಿಂದ ನೆಲವನ್ನು ಅಗೆದು ಬೆಳೆ ನುಂಗಿ ಹಾಕುತ್ತವೆ. ಇದಕ್ಕಾಗಿ ರೈತರು 24 ಗಂಟೆ ಕಾವಲು ಕಾಯಬೇಕಾಗಿದೆ. ಅಲ್ಲದೇ ರಾತ್ರಿ ವೇಳೆ ಪಟಾಕಿ ಸಿಡಿಸಿ ಹಂದಿಗಳು ಜಮೀನಿನ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತಾರೆ.