ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಪರೀಕ್ಷಾ ಅಭ್ಯಾಸ ಕಾರ್ಯಕ್ರಮ ಇನ್ನು ಮುಂದೆ ಕೇಂದ್ರ ಸರ್ಕಾರದ ದೀಕ್ಷಾ ಆ್ಯಪ್ (Diksha app) ನಲ್ಲಿ ಲಭ್ಯವಾಗಲಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ ಆ್ಯಪ್ಗೆ ಅಳವಡಿಸಿದ ಪರೀಕ್ಷಾ ಅಭ್ಯಾಸ ಕಾರ್ಯಕ್ರಮವನ್ನು ಮಂಗಳವಾರ ಬಿಡುಗಡೆ ಮಾಡಿದ ನಂತರ ಮಾತನಾಡಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಆತ್ಮವಿಶ್ವಾಸದಿಂದ ಸಿದ್ದರಾಗಲು ಈ ಆ್ಯಪ್ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿರುವ ‘ದೀಕ್ಷಾ’ ಆ್ಯಪ್ 1ರಿಂದ 12ನೇ ತರಗತಿ ಎಲ್ಲ ಬಗೆಯ ಪಠ್ಯ ದೀಕ್ಷಾ ಆ್ಯಪ್ ನಲ್ಲಿ ಲಭ್ಯವಿದ್ದು, SSLC ವಿದ್ಯಾರ್ಥಿಗಳಿಗೆ ಫೋಕಸ್ ಎಂಬ ಪುನರ್‌ಮನನ ಮತ್ತು ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷಾ ಅಭ್ಯಾಸ’ ಎಂಬ ಕಾರ್ಯಕ್ರಮಗಳು ಆ್ಯಪ್ ನಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸಹಾಯ ಮಾಡಲಿವೆ. ಪಿಸಿಎಂಬಿ ವಿಷಯಕ್ಕೆ ಸುಮಾರು ಒಂಬತ್ತು ಸಾವಿರ ಬಹುಆಯ್ಕೆ ಪ್ರಶ್ನೆಗಳಿಗೆ ಅಧ್ಯಾಯವಾರು ಒದಗಿಸಲಾಗಿದೆ ಎಂದರು.
ಆ್ಯಪ್ ನಲ್ಲಿ ಏನಿದೆ?
. ಪ್ರತಿಯೊಂದು ವಿಷಯಕ್ಕೆ ಇ- ಪಠ್ಯಪುಸ್ತಕ, ಕನಿಷ್ಠ 2 ಮಾಡೆಲ್ ಪ್ರಶ್ನೆಪತ್ರಿಕೆಗಳು, ವಿವರಣಾತ್ಮಕ ವಿಡಿಯೋಗಳು, ಅಧ್ಯಾಯವಾರು ಅಭ್ಯಾಸ ಪ್ರಶ್ನೋತ್ತರಗಳು ಅದರಲ್ಲಿ ದೊರೆಯಲಿವೆ.
ಏನಿದು ದೀಕ್ಷಾ ಆ್ಯಪ್ (What is the diksha app?)
DIKSHA ಪೋರ್ಟಲ್ ಅನ್ನು https://diksha.gov.in/ ಇಲ್ಲಿ ನೋಡಬಹುದು. ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ DIKSHA ಆಪ್ನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಈ ಲಿಂಕ್ ಒತ್ತಿ ದೀಕ್ಷಾ ಆಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು: https://bit.ly/KA-diksha ಒತ್ತಿ ದೀಕ್ಷಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.ಬಳಿಕ ಆ್ಯಪ್ ಅಥವಾ ಪೋರ್ಟಲ್ ನಲ್ಲಿ ಬೇಕಿರುವ ಮಂಡಳಿ, ಮಾಧ್ಯಮ, ಭಾಷೆ ಮತ್ತು ತರಗತಿಗಳನ್ನು ಆಯ್ಕೆ ಮಾಡಬೇಕು. 1 ರಿಂದ 12 ನೇ ತರಗತಿಗಳಿಗೆ ಪಠ್ಯಾಂಶಗಳು, ಅಂದರೆ ಇ ಪಠ್ಯಪುಸ್ತಕಗಳು (ಇಟಿಬಿ) ವಿವರಣಾತ್ಮಕ ಪಠ್ಯಾಂಶಗಳು, ಕಲಿಕಾ ಸಂಪನ್ಮೂಲಗಳು, ಅಭ್ಯಾಸ ಪ್ರಶ್ನೆಗಳು, ಪ್ರಶ್ನೆ ಕೋಶ ಮತ್ತು ಶಿಕ್ಷಕರಿಗೆ ಪಾಠ ಯೋಜನೆ ಇನ್ನಿತರ ಸಂಪನ್ಮೂಲಗಳನ್ನು ಈ ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ.
ದೀಕ್ಷಾ ಆ್ಯಪ್ ನಿಂದ ಏನೇನು ಲಾಭ (What are the benefits ?)
ಕೊವಿಡ್ ಪಿಡುಗಿನ ಈ ಕಷ್ಟಕರ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ನಿಯಮಿತವಾಗಿ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಶಿಕ್ಷಣ ಇಲಾಖೆಯು ಚಂದನ ಟಿವಿಯ ಮೂಲಕ ಆನ್ಲೈನ್ ಪಾಠಗಳನ್ನು ನಡೆಸುತ್ತಿದೆ. ಆದಾಗ್ಯೂ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲಾ ಪಾಠಗಳನ್ನು ವೀಕ್ಷಿಸುವುದು ಸಾಧ್ಯವಾಗಿರುವುದಿಲ್ಲ. ಅದಕ್ಕಾಗಿ ದೀಕ್ಷಾ ಪೋರ್ಟಲ್ನಲ್ಲಿ ಅಳವಡಿಸಲಾಗಿರುವ ಈ ಎಲ್ಲಾ ಇ-ಕಲಿಕಾ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ತಮಗೆ ಸಾಧ್ಯವಾದಾಗ ಮತ್ತು ಅಗತ್ಯವಿದ್ದಾಗ ಬಳಸಬಹುದು. ಸಿಇಟಿ, ಕಾಮೆಡ್ ಕೆ, ಜೆಇಇ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳುವುದಕ್ಕಾಗಿ ಅನುಕೂಲವಾಗಲಿದೆ.