ಕೊಬ್ಬರಿ ಬೆಲೆಯಲ್ಲಿ ದಿಢೀರನೆ ಏರಿಕೆಯಾಗಿದೆ. ಕಳೆದ ಕೆಲ ವಾರಗಳ ಹಿಂದೆ 14 ಸಾವಿರ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ ಈಗ 16 ಸಾವಿರಕ್ಕೆ coconut price reached 16 thousand per quintal) ತಲುಪಿದೆ. ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆಯು ಕಳೆದ ಮೂರ‍್ನಾಲ್ಕು ತಿಂಗಳಿಂದ ಏರುಮುಖ ಚಲನೆ ಕಂಡಿದೆ. ವಾರದಿಂದ ವಾರಕ್ಕೆ ಧಾರಣೆ ಹೆಚ್ಚಾಗುತ್ತಲೇ ಸಾಗಿದ್ದು, ಈಗ ತುಮಕೂರಿನಲ್ಲಿ ಒಂದು ಕ್ವಿಂಟಲ್‌ಗೆ ಕೊಬ್ಬರಿ ಬೆಲೆ 16 ಸಾವಿರ ರೂಪಾಯಿಗೆ ತಲುಪಿದೆ.
ವಾಯುಭಾರ ಕುಸಿತದಿಂದಾಗಿ ಹಾಗೂ ಚಳಿಯ ವಾತಾವರಣದಿಂದಕೊಬ್ಬರಿ ಹಾಗೂ ಕೊಬ್ಬರಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.
ಕಳೆದ ವರ್ಷ ಇದೇ 2020ರ ನವೆಂಬರ್‌ನಲ್ಲಿ ಕ್ವಿಂಟಲ್ ಕೊಬ್ಬರಿ ಬೆಲೆ 10 ಸಾವಿರಕ್ಕೆ ಕುಸಿದಿತ್ತು. ಬೆಂಬಲ ಬೆಲೆ ನೀಡಿ ಖರೀದಿಸುವಂತೆ ರೈತರಿಂದ ಒತ್ತಡ ಹೆಚ್ಚಾದ ನಂತರ ಖರೀದಿ ಕೇಂದ್ರ ತೆರೆಯಲಾಯಿತು. ನಂತರ, ಧಾರಣೆ ನಿಧಾನವಾಗಿ ಏರಿಕೆ ಆಯಿತು. ಹೊಸ ವರ್ಷದ ಆರಂಭದಲ್ಲಿ ಒಂದು ಕ್ವಿಂಟಲ್ 14 ಸಾವಿರಕ್ಕೆ ಹೆಚ್ಚಳ ಕಂಡಿತು. ಈಗ ಕೊಬ್ಬರಿ ಬೆಳೆಯುವ ರೈತರಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ. ಕಳೆದ ಕೆಲ ದಿನಗಳಿಂದ ಕೊಬ್ಬರಿ ಬೆಲೆ ಹೆಚ್ಚಳವಾಗುತ್ತಲೇ ಸಾಗಿದೆ. ಇದರೊಂದಿಗೆ ತೆಂಗಿನ ಉಪ ಉತ್ಪನ್ನಗಳಾದ ಕಾಯಿ, ಕೌಟು, ಕೊಬ್ಬರಿ ಮೊಟ್ಟೆ, ಚಿಪ್ಪು, ಗರಿಕಡ್ಡಿ ಎಲ್ಲವೂ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡು ರೈತರಿಗೆ ವರವಾಗಿವೆ.
ತೆಂಗಿನ ಗರಿಕಡ್ಡಿ ಕ್ವಿಂಟಾಲ್ ದರ 23 ಸಾವಿರ, 1 ಟನ್ ತೆಂಗಿನ ಕಾಯಿಗೆ 15-16 ಸಾವಿರದಲ್ಲಿದ್ದ ದರ ಹಂತ-ಹಂತವಾಗಿ ಏರಿಕೆ ಕಂಡು 40 ಸಾವಿರಕ್ಕೆ ಹೆಚ್ಚಾಗಿದೆ. ಪ್ರತಿ ತೆಂಗಿನ ಕಾಯಿ ಕಲ್ಪತರು ನಾಡಿನಲ್ಲೇ 20ರಿಂದ 25 ರೂಪಾಯಿಗೆ ಏರಿಕೆ ಕಂಡಿದೆ.
ಎಣ್ಣೆ ಕಾಳುಗಳ ಉತ್ಪಾದನೆ ಕಡಿಮೆಯಾಗಿದ್ದು, ಅಡುಗೆ ಎಣ್ಣೆ ಬೆಲೆ ದುಬಾರಿಯಾಗಿದೆ. ಅಡುಗೆಗೆ ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಹಾಗೂ ಇತರೆ ಖಾದ್ಯ ತೈಲಗಳನ್ನು ಬಳಸುತ್ತಿದ್ದವರು ಈಗ ಕೊಬ್ಬರಿ ಎಣ್ಣೆ ಬಳಕೆಗೆ ಮುಂದಾಗಿದ್ದಾರೆ.
ಕುಸಿದ ಆವಕ: ಮಾರುಕಟ್ಟೆಯಲ್ಲಿ ಆವಕ ಸಹ ಕಡಿಮೆಯಾಗಿದ್ದು, ಜನವರಿಯಿಂದ ಏಪ್ರಿಲ್ ತಿಂಗಳವರೆಗೂ ಇದೇ ಸ್ಥಿತಿ ಇರುತ್ತದೆ. ರೈತರ ಬಳಿಯೂ ಕೊಬ್ಬರಿ ಇರುವುದಿಲ್ಲ. ಏಪ್ರಿಲ್ ನಂತರ ಹಂಗಾಮು ಆರಂಭವಾಗುತ್ತದೆ. ಈ ಸಮಯದಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಕೊಬ್ಬರಿ ಬರುತ್ತದೆ. ದಾಸ್ತಾನು ಮಾಡಿಟ್ಟು ಕೊಂಡಿರುವ ವರ್ತಕರು ಬೇಡಿಕೆ ಸೃಷ್ಟಿಯಾದಾಗ ಮಾರಾಟ ಮಾಡಿ ಒಳ್ಳೆಯ ಲಾಭ ಮಾಡಿಕೊಳ್ಳುತ್ತಾರೆ. ಈಗ ಬೆಲೆ ಏರಿಕೆಯಾದರೂ ರೈತರಿಗೆ ಹೆಚ್ಚಿನ ಲಾಭ ಆಗುವುದಿಲ್ಲ.