ಬಂಜಾರಾ ಕನ್ಯೆಯರ ಮೇರಾ ಮಹತ್ವದ ಮಾಹಿತಿ ಇಲ್ಲಿದೆ

Written by By: janajagran

Updated on:

Banjara deepavali ಬಂಜಾರಾ ಸಮುದಾಯದ ಪಾಲಿಗೆ ದೀಪಾವಳಿ ಹಬ್ಬ ಅತೀದೊಡ್ಡ ಹಬ್ಬವೆಂದೇ ಹೇಳಬಹುದು. ಉಳಿದ ಹಬ್ಬಗಳಿಗಿಂತ ಬಂಜಾರಾ ಭಾಷೆಯಲ್ಲಿ ದವಾಳಿ ಎಂದು ಕರೆಯಲ್ಪಡುವ ದೀಪಾವಳಿ ನಿಜಕ್ಕೂ ವಿಶಿಷ್ಟೆಯಿಂದ ಕೂಡಿದೆ. ದೀಪಾವಳಿ ಹಬ್ಬ ಬರುವುದಕ್ಕಿಂತ ಒಂದು ತಿಂಗಳ ಮೊದಲೇ ಬಂಜಾರಾ ಕನ್ಯೆಯರು ದೀಪಾವಳಿ ಹಬ್ಬಕ್ಕೆ ತಯಾರಿ ನಡೆಸುತ್ತಾರೆ. ರಂಗುರಂಗಿನ ಬಟ್ಟೆ ತೊಟ್ಟು ಪ್ರತಿದಿನ ರಾತ್ರಿ ಸೇವಾಲಾಲ ಮರಿಯಮ್ಮ ದೇವಸ್ಥಾನದ ಎದುರುಗಡೆ ಎಲ್ಲಾ ಮನೆಯ ಕನ್ಯೆಯರು ಸೇರಿ ಸಾಮೂಹಿಕ ನೃತ್ಯ ಮಾಡುತ್ತಾರೆ. ಇತ್ತೀಚೆಗೆ ಈ ಸಂಪ್ರದಾಯ ಕ್ಷೀಣಿಸಿದ್ದರೂ ಇನ್ನೂ ಕೆಲವು ತಾಂಡಾಗಳಲ್ಲಿ ಮುಂದುವರೆದಿದೆ. ದೀಪಾವಳಿ ಹಬ್ಬಕ್ಕೆ ಬಂಜಾರಾ ಕನ್ಯೆಯರ ಮೇರಾ, ಹಿರಿಯರಿಗೆ ದಬಕಾರ್, ಗೋವರ್ಧನ್ ಪೂಜೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಳಿ ಮಾಸ್

ದೀಪಾವಳಿ ಅಮಾವಾಸ್ಯೆಯನ್ನು ಬಂಜಾರಾ ಸಮುದಾಯದವರು ಕಾಳಿಮಾಸ್ ಎಂದು ಕರೆಯುತ್ತಾರೆ.  ದೀಪಾವಳಿ ಹಬ್ಬದಂದು ಪ್ರತಿಯೊಬ್ಬರಿಗೂ ಸಂಭ್ರಮವಿರುತ್ತದೆ. ಆದರೆ ಬಂಜಾರಾ ಕನ್ಯೆಯರ ಸಂಭ್ರಮ ಇಮ್ಮಡಿಯಾಗಿರುತ್ತದೆ. ಸಾಯಂಕಾಲವಾದೊಡನೆ ಊರಿನ ಡಾವ್.. ಡಂಗುರ ಸಾರಿಸಿ ಮನೆಯ ದೀಪ ಬೆಳಗಲು ಸೂಚಿಸುತ್ತಾರೆ. ಅಷ್ಟೇ ಅಲ್ಲ, ಮೇರಾ ಮಾಡಲು (ಶುಭಾಷಯ) ಹೇಳುತ್ತಾರೆ. ಅಂದರೆ ಊರಿನ ಡಾವ್ ಘೋಷಣೆ ಮಾಡಿದ ನಂತರವೇ ಕನ್ಯೆಯರು ಮನೆಯ ದೀಪ ಬೆಳಗುತ್ತಾರೆ. ನಂತರ ಮನೆಯಲ್ಲಿ ಬಂಜಾರಾ ಧರ್ಮಗುರು ಸೇವಾಲಾಲ್ ಮಹಾರಾಜ, ಮರಿಯಮ್ಮ ದೇವಿಗೆ ಪೂಜಿಸಿ ಮೇರಾ ಮಾಡುತ್ತಾರೆ.

Banjara deepavali ಬಂಜಾರಾ ಕನ್ಯೆಯರ ಮೇರಾ

 

ಉದಾಹರಣೆಗೆ (ಸೇವಾಲಾಲ್ ಬಾಪು ತೋನ ವರ್ಷೆ ದಾಡೆರ್ ಕೋರ್ ದವಾಳಿ ಮೇರಾ ಹೀಗೆ ದೇವತೆಗಳ ಹೆಸರು ಹೇಳಿ ಮೇರಾ ಮಾಡಲಾಗುತ್ತದೆ.. ಕೆಲವು ಕಡೆ ವರ್ಷೆ ದಾಡೇರ್ ಸೇವಾಲಾಲ್ ಬಾಪು ತೋನ ಕೋರ್ ದವಾಳಿ ಮೇರಾ, ಇನ್ನೂ ಕೆಲವು ಕಡೆ ವರ್ಷೇರ ದವಾಳಿ ಕೋರ್ ದವಾಳಿ ಬಾಪು ತೋನ ಮೇರಾ, ಹೀಗೆ ಹೇಳಲಾಗುತ್ತದೆ. ಇನ್ನೂ ಕೆಲವು ಕಡೆ

ವರ್ಷೆ ದಾಡೆರ್ ಕೋರ್ ದವಾಳಿ ಸೇವಾಲಾಲ್ ಬಾಪು ತೋನ ಮೇರಾ,,,,,ಘರ ಘರ ವೇಗಿ..ಪಣವಾಳಿ….. ಚಾಂದಾ ಸೂರ್ಯ ದಾಡೆಮಾ…ವಜಾಳೋ ಪಡಗೋ ಘರೇಮಾ,,,,ಬಾಪು ತೋನ ಮೇರಾ….ಹೇಳುತ್ತಾರೆ. ಮೇರಾ ಮಾಡುವುದರ ಅರ್ಥ ದೀವಾಪಳಿ ಹಬ್ಬದ ಶುಭಾಷಯ ಹೇಳುವುದು.

Banjara deepavali ಬಂಜಾರಾ ಕನ್ಯೆಯರ ಮೇರಾ

ತಂದೆತಾಯಿಯ ನಂತರ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಮೇರಾ ಮಾಡುತ್ತಾರೆ. ನಂತರ ಮನೆಯಲ್ಲಿರುವ ಎತ್ತು, ಆಕಳು, ಎಮ್ಮೆಯ ಹೆಸರು ಹೇಳಿ ಮೇರಾ ಮಾಡುತ್ತಾರೆ. ಜಾನುವಾರುಗಳಿಗೂ ಶುಭಾಷಯ ಹೇಳುವುದು ಬಂಜಾರಾ ಸಮುದಾಯದ ವೈಶಿಷ್ಟ್ಯವಾಗಿದೆ. ನಂತರ ಕೆಲವು ಕಡೆ ನಾಯಕರ ಮನೆಯ ಎದುರುಗಡೆ ಇನ್ನೂ ಕೆಲವು ಕಡೆ ಸೇವಾಲಾಲ ಮರಿಯಮ್ಮ ದೇವಸ್ಥಾನದ ಎದುರು ಊರಿನ ಎಲ್ಲಾ ಕನ್ಯೆಯರು ಹಣತೆಯ ದೀಪ ಹಿಡಿದು ಜಮಾ ಆಗುತ್ತಾರೆ. ಅಲ್ಲಿಂದ ಹಾಡುಗಳ ಮೂಲಕ ತಾಂಡಾದ ನಾಯಕ್ ಮನೆಗೆ ಹೋಗಿ ಮನೆ ಮಂದಿಗಳನ್ನೆಲ್ಲಾ ಹೆಸರಿಸಿ ಮೇರಾ ಹೇಳುತ್ತಾರೆ. ನಂತರ ಊರಿನ ಪ್ರತಿಯೊಂದು ಮನೆಗೆ ಹೋಗಿ ಆರತಿ ಬೆಳಗುತ್ತಾರೆ.

ಊರಲ್ಲಿ ಮನೆ ಮನೆಗೆ ಹೋಗಿ ಮೇರಾ ಮಾಡುವಾಗ ಬಂಜಾರಾ ಕನ್ಯೆಯರು ರಾತ ಅಂಧೇರಿಯೇ ದಿವಾಲೋ ಝಲಲಿಜೋ….. ಕೂತಾ ಬಸೋ ಯೇ ತಿಯೋ ತಿಯೋ ಕರಲಿಜೋ ,,,,,, ಖಾಡು ಬಡಕೋಯೇ ಹೆ ಹೇ ಕರಲಿಜೋ,,, ಫೂಲ ತೊಡುತೋ ತೋಟ ಖಲಚ….ಫುಲ ರಂಗಿ ತೋಟ,,, ಫುಲ ರಂಗಿ ತೋಟ…ಮರುಡ ಭರಾನ ಜಗಾಡು ನಾಯಕೆನ

ಎಂದು ಹಾಡುತ್ತಾ ಸಾಗುತ್ತಾರೆ. ಆಗ ಮನೆಯ  ಯಜಮಾನರು ಕನ್ಯೆಯರಿಗೆ ಒಂದಿಷ್ಟು ಹಣ ಕೂಡ ನೀಡುತ್ತಾರೆ. ಜಮೆಯಾದ ಎಲ್ಲಾ ಹಣವನ್ನು ಮರುದಿನ ಕನ್ಯೆಯರು ಸೇರಿ ಹಂಚಿಕೊಳ್ಳುತ್ತಾರೆ. ಊರಿನ ಪ್ರತಿಯೊಂದು ಮನೆಗೆ ಮೇರಾ ಮಾಡಿದ ನಂತರ ಮತ್ತೆ ದೇವಾಲಯದ ಬಳಿ ಸೇರಿ ಮೇರಾ ಕಾರ್ಯಕ್ರಮ ಮುಗಿಸುತ್ತಾರೆ. ಇನ್ನೂ ಕೆಲವು ಕಡೆ ನಾಯಕರ ಮನೆಯಲ್ಲಿಯೇ ಮಲಗಿಕೊಳ್ಳುತ್ತಾರೆ.

ಹಿರಿಯರಿಗೆ ದಬಕಾರ್ (ಸ್ಮರಣೆ ಧೂಪ ಹಾಕುವುದು)

ದೀಪಾವಳಿ ಹಬ್ಬದಂದು ವಿಶೇಷವಾಗಿ ಸಿಹಿ ತಿನಿಸು ಮಾಡುತ್ತಾರೆ. ಮನೆಯಲ್ಲಿ ಮೃತ ಹಿರಿಯರನ್ನು ಸ್ಮರಿಸಿ ಪೂಜಿಸುವ ಆಚರಣೆಗೆ ಬಂಜಾರಾ ಸಮುದಾಯದಲ್ಲಿ ದಬಕಾರ್ ಎನ್ನುತ್ತಾರೆ.  ಒಲೆಯ ಕೆಂಡದ ಹೊಗೆಯಲ್ಲಿಯೇ ಹಿರಿಯರಿಗಾಗಿ ಸಿಹಿ ಖಾದ್ಯ ಮತ್ತು ತುಪ್ಪದ ಎಡೆ ಇಡುತ್ತಾರೆ. ಇದು ತಾಂಡಾದ ಪ್ರತಿ ಮನೆಗಳಲ್ಲಿಯೂ ನಡೆಯುವ ಆಚರಣೆಯಾಗಿದೆ.

ಇದನ್ನೂ ಓದಿ :ನಾಯಕ್, ಕಾರಭಾರಿ, ಡಾವ್-ಸಾಣ್, ಯಾಡಿ-ಬಾಪು, ದಾದಿ-ಕಾಕಿ, ಬೇಟೆ ಜಕೋಣ್ ಪಂಚ್ ಆವೋನಿ ಭಾ ಜಳ್ ಲೇಮಾ

ಹಿರಿಯರಿಗೆ ಎಡೆ ಹಾಕುವಾಗ ಮನೆಯ ಯಜಮನಾ ಅಥವಾ ಹಿರಿಯರು ನಮಿಸುವುದು ಹೀಗೆ…..

ಭಾಂಗ್ಯ, ಭೂಕ್ಯಾ, ಖವ್ಯಾ ಮೆವ್ಯಾ, ಜೆನ್ನಿರೋ ಝರ್ಕೋ, ಲೂಣಿರೋ ಲಚ್ಕೋ, ಕೆಳ್ಹೋಡಾರಿ ಹಾರೆ, ಪಿಲ್ಜಿಲಾರಿ ಹಾರೆ, ಡೂಂಗರೆ ಖೋಲಾತಿ ತಡ್ಕಿ ಭಡ್ಕಿ. ಹೀಗೆ ಜನಜಾನುವಾರುಗಳು, ಮಕ್ಕಳು ಆರೋಗ್ಯವಾಗಿರಲೆಂದು ಹಾರೈಸಿ ಪ್ರತಿ ಮನೆಯ ಒಲೆಗಳ ಎದುರು ಹೇಳುತ್ತಾರೆ.

ಹಿರಿಯರಿಗೆ ದಬಕಾರ್ ಹಾಕಿದ ನಂತರ ಬಂಜಾರಾ ಕನ್ಯೆಯರು ಮತ್ತೆ ಬೆಳಗ್ಗೆ ದೇವಸ್ಥಾನದ ಬಳಿ ಸೇರುತ್ತಾರೆ. ಬಿದಿರಿನ ಬುಟ್ಟಿ ಸಮೇತ ಊರಿನ ಹೊರಗಡೆಯಿರುವ ಗುಡ್ಡ, ಬೆಟ್ಟಗಳಿಗೆ ಹೋಗಿ ಬಗೆಬಗೆಯ ಹೂವುಗಳನ್ನು ಸಂಗ್ರಹಿಸುತ್ತಾರೆ. ತಾಂಡಾದಲ್ಲಿ ಮದುವೆ ನಿಶ್ಚಯವಾಗಿರುವ ಕನ್ಯೆ ಅಂದು ಉಪವಾಸದಿಂದ ಇರುತ್ತಾರೆ. ಮಧ್ಯಾಹ್ನ ಮತ್ತೆ ಊರಿಗೆ ಬಂದು ಗುಡಿಯ ಬಳಿ ಸೇರುತ್ತಾರೆ.

ಗೋವರ್ಧನ ಪೂಜೆ

ಅಮಾವಾಸ್ಯೆಯ ಮರುದಿನ ತಾಂಡಾದ ಜನ ದನಕರುಗಳ ಸಗಣಿಯನ್ನು ಜಮೆ ಮಾಡಿ ಮನೆಯ ಎದುರುಗಡೆ ಕುಪ್ಪೆ ಹಾಕಿರುತ್ತಾರೆ. ಸೆಗಣಿಯ ಉಂಡೆ ಮಾಡಿ ಅದಕ್ಕೆ ವಿವಿಧ ಹೂವಿನಿಂದ ಅಲಂಕಾರ ಮಾಡುತ್ತಾರೆ. ಹಿಟ್ಟಿನಂದ ದೀಪ ಮಾಡಿ

ಲುಂಬ್ಡಿಸ್ ಮಾಣಕ್ಯಾ, ಕಾಣಿಕ್ ತುಟಿ,ಲಾಂಬಿ ಹಾರೆ,,,ಧೋಳಿ ಹಾರೆ ಉಟೇರಿ ಕಚಾರೆ, ಬೆಟೆರಿ ಕಚಾರಿ, ಕಾಕೊಟಿಸ್ ಪೆಟೆರೋ ಡುವ್ಸಾಸ್ ಕಾನೆರೋ. ಛಾದ್ಲಾಸ್ ಪೆಟೆರೋ ಕಾಚ್ಕಾರ್ ಡೊಳಾರೋ… ಕುಟುಂಬದ ಸದಸ್ಯರ ವಿಶೇಷವಾಗಿ ಮಗನ ಹೆಸರು ಹೇಳಿ  ಟಾಂಗ್ ರೂಂಯಿ ವೆಜಾಯ್..ಎಂದು ಹೇಳಿ ಮುಂದಿನ ಮನೆಗೆ ಹೋಗುತ್ತಾರೆ. ಇದೊಂದು ಹಾಸ್ಯ ಚಟಾಕಿಯಾಗಿರುತ್ತದೆ.. ಆಮೇಲೆ ಮನೆಯ ಎದುರುಗಡೆ ನೃತ್ಯ ಮಾಡಿ ಶುಭಾಷಯ ಹೇಳಲಾಗುತ್ತದೆ. ಸಾಯಂಕಾಲ ಸೂರ್ಯ ಮುಳುಗುವ ಮುನ್ನ ಹತ್ತಿರದ ಹಳ್ಳ, ಕೆರೆಯಿದ್ದರೆ ಅಲ್ಲಿಗೆ ಹೋಗಿ ಬಾಗಿನ ಅರ್ಪಿಸಿ ಬರುತ್ತಾರೆ. ಇಲ್ಲಿಗೆ ದೀಪಾವಳಿ ಹಬ್ಬ ಮುಗಿಯುತ್ತರೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಟಕಾಲ ತಾಂಡಾದ ಬಂಜಾರಾ ಕನ್ಯೆಯರಾದ ಕವಿತಾ, ಪ್ರಿಯಾಂಕಾ, ಅಂಬಿಕಾ, ಈರೇಶಿ ಹಾಡಿದ  ಮೇರಾ ಹಾಗೂ ಗೋವರ್ಧನ ಪೂಜೆಯ ಕೆಲವು ತುಣುಕುಗಳನ್ನು ಸಂಗ್ರಹಿಸಿ ಇಲ್ಲಿ ಬರೆಯಲಾಗಿದೆ.

ಲೇಖನ: ರಾಮಲಿಂಗ್ ಚಿನ್ನಾ ರಾಠೋಡ

Leave a Comment