ತರಕಾರಿಯಲ್ಲಿ ಹೆಚ್ಚು ಇಳುವರಿ ಪಡೆಯುವುದಕ್ಕಾಗಿ ಹಾಗೂ ಉತ್ತಮ ಗುಣಮಟ್ಟದ ತರಕಾರಿಗಾಗಿ ಅರ್ಕಾ ತರಕಾರಿ ಸ್ಪೇಷಲ್ (Arka vegetable special) ಸಿಂಪರಣೆ ಮಾಡಬಹುದು. ಈ ಲಘು ಪೋಷಕಾಂಶಗಳ ಮಿಶ್ರಣವನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದರಲ್ಲಿ ಸತು, ಕಬ್ಬಿಣ, ಬೋರಾನ್, ಮ್ಯಾಂಗನೀಸ್ ಹಾಗೂ ತಾಮ್ರದ ಸೂಕ್ತ ಮಿಶ್ರಣ ಇರುತ್ತದೆ.

ಲಘು ಪೋಷಕಾಂಶಗಳನ್ನು ಸಿಂಪರಣೆ ಮೂಲಕವೇ ಕೊಡಬಹುದು. ಮಣ್ಣಿನ ಮೂಲಕ ಕೊಡುವುದಕ್ಕಿಂತ ಎಲೆಗಳ ಮೂಲಕ ಕೊಡುವುದೇ ಹೆಚ್ಚು ಪರಿಣಾಮಕಾರಿ. ಮೊದಲ ಬಾರಿಗೆ ಗಿಡ ನಾಟಿ ಮಾಡಿದ 25-30 ದಿನಗಳ ನಂತರ ಅಥವಾ ಬಿತ್ತನೆ ಮಾಡಿದ 40-45 ದಿನಗಳ ಅಂತರದಲ್ಲಿ ಸಿಂಪಡಿಸಬಹುದು. ಎರಡನೇ ಮತ್ತು ಮೂರನೇ ಬಾರಿಗೆ 20 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಇದನ್ನು ಬಳ್ಳಿಯ ಎಲೆ, ಕುಡಿ ಸಂಪೂರ್ಣ ತೊಯ್ಯುವ ಹಾಗೆ ಸಿಂಪಡಿಸಬೇಕು. ಅರ್ಕಾ ವೆಜಿಟೇಬಲ್ ಬೆಲೆ ಪ್ರತಿ ಕಿ.ಗ್ರಾಗೆ 150 ರೂಪಾಯಿಯಿದೆ.

ಬೆಳೆಗಳಿಗೆ ಎಲ್ಲಾ ಪೋಷಕಾಂಶಗಳು ಬೇಕು

ಯಾವುದೇ ಬೆಳೆಯಿರಲಿ ಅದರ ಪೋಷಣೆಗೆ ಸಕ ಪೋಷಕಾಂಶಗಳು ಬೇಕು. ಆದರೆ ನಮ್ಮ ಜಮೀನಿನಲ್ಲಿ ಒಂದಿಲ್ಲೊಂದು ಪೋಷಕಾಂಶಗಳ ಕೊರತೆ ಇದ್ದೇ ಇರುತ್ತದೆ. ನಾವು ಸಾರಜನಕ, ರಂಜಕ, ಪೊಟ್ಯಾಷ್ಗೆ ಹೆಚ್ಚು ಮಹತ್ವ ಕೊಟ್ಟು ಉಳಿದವುಗಳ ಗಡೆ ಗಮನ ಕೊಡುವುದಿಲ್ಲ. ಸಾಮರ್ಥ್ಯಕ್ಕೆ ತಕ್ಕ ಇಳುವರಿ ಬರದೆ ಇರಲು ಇದೇ ಪ್ರಮುಖ ಕಾರಣವಾಗಿದೆ.

ಟೊಮ್ಯಾಟೋ, ಕೋಸು, ಹೂಕೋಸು, ಎಲೆಕೋಸು, ದಪ್ಪ ಮೆಣಸಿನಕಾಯಿಗೆ ಪ್ರತಿ ಲೀಟರಿಗೆ 5 ಗ್ರಾಂನ್ನು ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.

ಮೆಣಸಿನಕಾಯಿ, ಬದನೆ, ಈರುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಮೂಲಂಗಿಗೆ 3 ಗ್ರಾಂ ಪ್ರತಿ ಲೀಟರಿಗೆ ನಿಗದಿಪಡಿಸಿರುವ ಪ್ರಮಾಣದ ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.

ಹುರುಳಿ, ಬೆಂಡೆ, ಅವರೆಕಾಯಿಗೆ 2 ಗ್ರಾಂಗೆ ನಿಗದಿಪಡಿಸಿರುವ ಪ್ರಮಾಣದ ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.

ಸೌಕೆಕಾಯಿ, ಕಲ್ಲಂಗಡಿ, ಕರಬೂಜ, ಹೀರೇಕಾಯಿ, ಹಾಗಲಕಾಯಿಗೆ 1 ಗ್ರಾಂ ಲೀಟರ್ ನಿಗದಿಪಡಿಸಿರುವ ಪ್ರಮಾಣದ ಅರ್ಕಾ ವೆಜಿಟೇಬಲ್ ಸ್ಪೇಷಲ್ ಮಿಶ್ರಣವನ್ನು ಒಂದು ಶಾಂಪೂ ಸ್ಯಾಚೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸದೊಂದಿಗೆ 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಬೇಕು.

ಸೂಚನೆ: ಈ ಮಿಶ್ರಣದ ಜೊತೆ ಯಾವುದೇ ಕೀಟನಾಶಕ ಮತ್ತು ರೋಗನಾಶಕಗಳನ್ನು ಬೆರೆಸಿ ಸಿಂಪಡಿಸಬಾರದು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ದೂರವಾಣಿ ಸಂಖ್ಯೆ 9480696316, 8123922495 ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *