ಅಮೃತ ಸಿರಿ ಯೋಜನೆಯಡಿಯಲ್ಲಿ ಉತ್ಕೃಷ್ಟ ತಳಿಯ ಹಸುವಿನ ಕರು ವಿತರಣೆಗೆ ಅರ್ಜಿ ಆಹ್ವಾನ

Written by By: janajagran

Published on:

ಅಮೃತಸಿರಿ ಯೋಜನೆಯಡಿ ಉತ್ಕೃಷ್ಟ ತಳಿಯ ಹಸುವಿನ ಕರು ವಿತರಣೆಗಾಗಿ ಚಿತ್ರದುರ್ಗ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದು, ಜಿಲ್ಲೆಗೆ ನಿಗದಿಪಡಿಸಲಾದ ಗುರಿಗಳನ್ನು ತಾಲೂಕುವಾರು ಮರುನಿಗದಿಪಡಿಸಲಾಗಿದೆ.

ರೈತರು ಆಯಾ ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಪಡೆದು ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಸಹಾಯಕ ನಿರ್ದೇಶಕ) 9741927007, ಚಳ್ಳಕೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ 9448816499, ಹೊಳಲ್ಕೆರೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ 9972965479, ಹೊಸದುರ್ಗ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ 9945298407, ಹಿರಿಯೂರು ಪಶು ವೈದ್ಯಾಧಿಕಾರಿ 9448533753, ಮೊಳಕಾಲ್ಮೂರು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ 9449128202 ಗೆ ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಅಮೃತ ಸಿರಿ ಯೋಜನೆ?

ಮೃತ ಯೋಧನರ ಪತ್ನಿ, ದೇವದಾಸಿ, ಶವಸಂಸ್ಕಾರ ಕಾರ್ಮಿಕರು ಹಾಗೂ ವಿಧವೆಯರಿಗೆ ನೆರವು ನೀಡುವುದಕ್ಕಾಗಿ ರಾಜ್ಯ ಸರ್ಕಾರವು ಪಶು ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಮೃತ ಸಿರಿ ಯೋಜನೆ ಆರಂಭಿಸಿದೆ. ಹೌದು ವೀರ ಮರಣ ಹೊಂದಿದ ಯೋಧರ ಪತ್ನಿ, ದೇವದಾಸಿಯವರು, ಶವಸಂಸ್ಕಾರ ಕಾರ್ಮಿಕರು ಹಾಗೂ ವಿಧವೆಯರ ಆರ್ಥಿಕ ಅಭಿವೃದ್ಧಿಗಾಗಿ ಉತ್ಕೃಷ್ಟ ತಳಿಯ ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು. ಮಾರುಕಟ್ಟೆ ಬೆಲೆಯ ಶೇ. 25 ರ ದರದಲ್ಲಿ ಹೆಣ್ಣುಕರುಗಳ ವಿತರಣೆ ಮಾಡಲಾಗುವುದು. ದೇಶೀ ತಳಿಗಳ ವಂಶಾವಳಿ ಹೆಚ್ಚಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಳ್ಳಿಕಾರ್, ಅಮೃತಮಹಲ್, ಮಲೆನಾಡ ಗಿಡ್ಡ, ಖಿಲಾರಿ, ಕೃಷ್ಣವ್ಯಾಲಿ ತಳಿಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.

ರಾಜ್ಯದಲ್ಲಿ ಸುಮಾರು 19 ತಳಿ ಸಂವರ್ಧನಾ ಕೇಂದ್ರಗಳಿದ್ದು, ಈ ವ್ಯಾಪ್ತಿಯಲ್ಲಿ ಜಿಲ್ಲೆಗಳಲ್ಲಿ 927 ಹೆಣ್ಣು ಕರುಗಳನ್ನು ನೀಡಲಾಗುವುದು. ತಾಲೂಕು ಜಾನುವಾರು ವಿತರಣ ಸಮಿತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಿ.. ಇಲ್ಲಿದೆ ಸಂಪೂರ್ಣ ಮಾಹಿತಿ

ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ತಮ್ಮ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅಮೃತ ಸಿರಿ ಯೋಜನೆ ಸಹಕಾರಿಯಾಗಲಿದ್ದು, ದೇಶಿ ತಳಿಗಳ ಸಂಖ್ಯೆ ಸಹ ರಾಜ್ಯದಲ್ಲಿ ವೃದ್ಧಿಯಾಗಲು ಪಶುಸಂಗೋಪನೆ ಇಲಾಖೆಯ ಪ್ರಸ್ತುತ ಕ್ರಮ ಸಹಕಾರಿಯಾಗಲಿದೆ ಎಂದು  ಪಶುಸಂಗೋಪನೆಯ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.

ವಂಶಾವಳಿಯನ್ನು ಹೆಚ್ಚಿಸುವಲ್ಲಿ ಪಶು ಸಂಗೋಪನಾ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೃತ ಸಿರಿ ಯೋಜನೆ ಅಡಿಯಲ್ಲಿ ವೀರಗತಿ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಉನ್ನತಮಟ್ಟದ ತಳಿಯ ಕರುಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Leave a comment