ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನವೆಂಬರ್ 11 ರಿಂದ 14 ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದೆ. ಈ ಕೃಷಿ ಮೇಳವನ್ನು ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ಕೃಷಿ ಮೇಳವನ್ನು ಕೋವಿಡ್ ನಿಯಮಗಳ ಅನುಸಾರ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದೆ.
ಭೌತಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಕೃಷಿ ಮೇಳವನ್ನು ವೀಕ್ಷಿಸಬಹುದು. ಇದೇ ಸಂದರ್ಭದಲ್ಲಿ ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಹೊರತಂದಿರುವ ನೂತನ 10 ತಳಿಗಳು ಮತ್ತು 28 ಕೃಷಿ ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಕೃಷಿ ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಲ್ಲಿ ಬರುವ ಜಿಲ್ಲೆಗಳಿಂದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು.
ಕೃಷಿ ವಸ್ತು ಪ್ರದರ್ಶನದಲ್ಲಿ ಆಧುನಿಕ ಕೃಷಿ ತಂತ್ರಜ್ಞಾನಗಳು, ಕೃಷಿ ಇಂಜಿನಿಯರಿಂಗ್ ಮತ್ತು ಕೃಷಿ ಪರಿಕರಗಳ ಸುಮಾರು 250 ಮಳಿಗೆಗಳಿರುತ್ತವೆ. ರೈತರು ತಮ್ಮ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಬಹುದು.
ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ, ಪ್ರವೇಶ ಉಚಿತವಾಗಿರುತ್ತದೆ ಎಂದು ತಿಳಿಸಲಾಗಿದೆ. ರೈತಬಾಂಧವರು ಮತ್ತು ಸಾರ್ವಜನಿಕರು ಕೃಷಿ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.