ಮೂರು ಕೃಷಿ ಕಾಯ್ದೆಗಳಲ್ಲಿ ಏನಿತ್ತು? ರೈತರು ವಿರೋಧಿಸಿದ್ದೇಕೆ?

Written by By: janajagran

Updated on:

withdrew the three farm laws ಕಳೆದ ವರ್ಷ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೂರು ಕೃಷಿ ಕಾಯ್ದೆಗಳನ್ನುಜಾರಿಗೆ ತರಲಾಗಿತ್ತು ಎಂದು ಕೇಂದ್ರ ಸರ್ಕಾರವು ಹೇಳಿತ್ತು. ಆದರೆ ದೇಶದ ಹಲವು ಭಾಗಗಳಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಈಗ ಹಿಂಪಡೆದಿದೆ. ದೆಹಲಿಯ ಗಡಿ ಹಾಗೂ ವಿವಿಧ ರಾಜ್ಯಗಳಲ್ಲಿ ಒಂದು ವರ್ಷದಿಂದ ರೈತರ ಪ್ರತಿಭಟನೆಗೆ ಕಾರಣವಾಗಿದ್ದ ಈ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

ಕಳೆದ ವರ್ಷ ಜಾರಿಗೆ ತರಲಾದ ಮೂರು ಕೃಷಿ ಕಾಯ್ದೆಗಳ ಕುರಿತು ಒಂದು ವರ್ಗದ ರೈತರ ಮನವೊಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಿದಾಗ ಕೃಷಿ ಕಾಯ್ದೆಗಳ ರದ್ದತಿಯ ಕಾರಣ ತಿಳಿಸಿದ್ದಾರೆ..

withdrew the three farm laws ರದ್ದಾದ ಮೂರು ಕೃಷಿ ಕಾಯ್ದೆಗಳು ಯಾವುವು?

  1. ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆ (ಎಪಿಎಂಸಿ) ಹೊರಗೂ ರೈತರ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸುವ ರೈತ ಉತ್ಪನ್ನ ವಾಣಿಜ್ಯ ವ್ಯವಹಾರ ಕಾಯ್ದೆ-2020
  2. ಗುತ್ತಿಗೆ ಕೃಷಿಗೆ ಅನುಮತಿಸುವ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳಿಗೆ ರೈತ ಒಪ್ಪಂದ ಕಾಯ್ದೆ 2020
  3. ಕೃಷಿ ಉತ್ಪನ್ನಗಳ ದಾಸ್ತಾನು ಮಿತಿ ರದ್ದುಗೊಳಿಸುವ ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ 2020

ಕೇಂದ್ರ ಸರ್ಕಾರವು ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳಲ್ಲಿ ಏನಿತ್ತು… ಕೇಂದ್ರ ಸರ್ಕಾರವು ಜಾರಿಗೆ ತರಲು ಏಕೆ ಮುಂದಾಗಿತ್ತು ಗೊತ್ತೇ… ಇಲ್ಲಿದೆ ಮಾಹಿತಿ.

1 ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ ಕಾಯ್ದೆ (ಎಪಿಎಂಸಿ ಕಾಯ್ದೆ)ಯು ರೈತರ ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಸ್ವಾತಂತ್ರ್ಯ ನೀಡುತ್ತದೆ. ರೈತರು ತಾವು ಬೆಳೆದ ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಹೊರಗಡೆಯೂ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತದೆ. ಅಲ್ಲದೆ ರೈತರ ಜಮೀನಿಗೆ ತೆರಳಿ ಯಾರು ಬೇಕಾದರೂ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು. ಇದರಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ರೈತರಿಗೆ ಬೆಳೆಯನ್ನು ಸಾಗಿಸುವ ಖರ್ಚು ಸಹ ಉಳಿತಾಯವಾಗುತ್ತದೆ. ಎಪಿಎಂಸಿ ಮಂಡಿಗಳ ಮದ್ಯವರ್ತಿಗಳು ಹಾಗೂ ರಾಜ್ಯ ಸರ್ಕಾರಗಳು ಕಮಿಷನ್ ಹಾಗೂ ಮಂಡಿ ಶುಲ್ಕ ಕಳೆದುಕೊಳ್ಳುತ್ತದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

2 ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆಯು ಬಿತ್ತನೆ ಹಂಗಾಮಿಗೆ ಮುನ್ನವೇ ರೈತರು, ಪೂರ್ವ ನಿರ್ಧರಿತ ಬೆಲೆಯೊಂದಿಗೆ ಖರೀದಿದಾರನ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ.  ಪೂರ್ವ ನಿಗದಿತ ಬೆಲೆಯಲ್ಲಿ, ರೈತರು ಕೃಷಿ ಸಂಬಂಧಿಸಿದ ಉದ್ಯಮ ನಡೆಸುವ ಕಂಪನಿಗಳು ಅಥವಾ ದೊಡ್ಡ ಪ್ರಮಾಣದ ಚಿಲ್ಲರೆ ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಬಿತ್ತನೆಗೆ ಮೊದಲೇ ದರದ ಭರವಸೆ ಸಿಗುತ್ತದೆ.  ಮಾರುಕಟ್ಟೆ ಬೆಲೆ ಹೆಚ್ಚಾದ ಸಂದರ್ಭದಲ್ಲಿ ರೈತರು ಕನಿಷ್ಟ ಬೆಂಬಲ ಬೆಲೆಯನ್ನು ಪಡೆಯುತ್ತಾರೆ. ಆಧುನಿಕ ತಂತ್ರಜ್ಞಾನ, ಉತ್ತಮ ಬೀಜ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅನುವು ಮಾಡಿಕೊಡುತ್ತದೆ.

3 ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆಯು ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆ ಮುಂತಾದ ವಸ್ತುಗಳನ್ನು ತೆಗೆದುಹಾಕಲು ಈ ತಿದ್ದುಪಡಿ ಕಾಯ್ದೆಯು ಆವಕಾಶ ಮಾಡಿಕೊಡುತ್ತದೆ. ಯುದ್ಧ, ಬರಗಾಲ, ನೈಸರ್ಗಿಕ ವಿಪತ್ತುಗಳಂತಹ ಅಸಾಧಾರಣ ಸಂದರ್ಭದಗಳನ್ನು  ಹೊರತುಪಡಿಸಿ ಅಂತಹ ವಸ್ತುಗಳ ಸಂಗ್ರಹದ ಮಿತಿ ಮೇಲೆ ಇರುವ ನಿರ್ಬಂಧ ತೆಗೆದುಹಾಕುತ್ತದೆ.

ಕೃಷಿ ಕಾಯ್ದೆಗಳನ್ನು ರೈತರು ವಿರೋಧಿಸಿದ್ದು ಏಕೆ ಗೊತ್ತೇ?

ಹೊಸ ಕೃಷಿ ಕಾಯ್ದೆಗಳು ಸದ್ಯ ಜಾರಿಯಲ್ಲಿರುವ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ತೆಗೆದುಹಾಕುತ್ತದೆ. ಸ್ವಾಮಿನಾಥನ್ ವರದಿ ಉಲ್ಲೇಖ ಈ ಮೂರು ಕಾಯ್ದೆಗಳಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಈ ಮೂರು ಕಾಯ್ದೆಗಳನ್ವಯ  ಮುಂದೊಂದು ದಿನ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಸರ್ವಾಧಿಕಾರಿಯಾಗುತ್ತವೆ. ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ. ಮಂಡಿ ವ್ಯವಸ್ಥೆಯನ್ನು ವಾಸ್ತವಿಕವಾಗಿ ವಿಸರ್ಜಿಸುವುದರಿಂದ ತಮ್ಮ ಬೆಳೆಗಳಿಗೆ ಖಚಿತವಾದ ಬೆಲೆ ಸಿಗುವುದಿಲ್ಲ. ಸಾಲ ನೀಡುವ ಎಪಿಎಂಸಿ ಏಜೆಂಟ್ ಗಳು ಮರೆಯಾಗುತ್ತಾರೆ. ಬೆಳೆಗೆ ಮುಂಚಿತವಾಗಿ ಎಪಿಎಂಸಿಗಳಲ್ಲಿ ಸಾಲ ಪಡೆಯಲು ಕಷ್ಟವಾಗುತ್ತದೆ.

ಕೃಷಿ ಕಾಯ್ದೆ ವಾಪಸ್ಸು ಪಡೆಯಲು ಕಾರಣ (Why farm laws to be rolled back)

ಮುಂಬರುವ ಪಂಜಾಬ, ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರೈತರ ಮನವೋಲಿಕೆಯಲ್ಲಿ ಯಶಸ್ಸು ಸಿಗದ್ದರಿಂದ ವಾಪಸ್ಸು ಪಡೆಯಲಾಗಿದೆ. ಬಿಜೆಪಿ ಪಕ್ಷದ ವರ್ಚಸ್ಸು ಉಳಿಸುವುದಕ್ಕಾಗಿ ಹಾಗೂ ಪ್ರತಿಭಟನೆಯಿಂದ ಕೇಂದ್ರ ಸರ್ಕಾರಕ್ಕೆ ತೊಂದರೆಯಾಗಬಹುದೆಂಬ ಆತಂಕದಿಂದ ಹಿಂಪಡೆಯಲಾಗಿದೆ. ಕೇಂದ್ರ ಸರ್ಕಾರವು ಉದ್ಯಮಿಗಳ ಪರವಾಗಿದೆ ಎಂಬ ಅಪವಾದ ಕಳಚುವುದಕ್ಕಾಗಿ ಹಾಗೂ ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರ ತಪ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ ಎನ್ನಲಾಗುತ್ತಿದೆ.

Leave a Comment