ಕೃಷಿ ಚಟುವಟಿಕೆಯಲ್ಲಿ ಎತ್ತುಗಳ ಬದಲಾಗಿ, ಕೂಲಿ ಆಳುಗಳ ಸಮಸ್ಯೆ ಬಗೆಹರಿಸಲು ದೇಶದಲ್ಲಿ ಹೊಸ ಹೊಸ ಪ್ರಯೋಗಗಳು ಅವ್ಯಾಹತವಾಗಿ ನಡೆದಿದೆ. ರೈತರ ಅನಕೂಲಕ್ಕಾಗಿ ಕೃಷಿ ಯಂತ್ರೋಪಕರಣಗಳ ಕಂಪನಿಗಳು ನವೀನ ಯಂತ್ರೋಪಕರಣಗಳನ್ನು ಪರಿಚಯಿಸುತ್ತಲೇ ಇವೆ.. ಆದರೆ ರೈತರ ಬೇಡಿಕೆಗೆ ತಕ್ಕಂತೆ ಆಲ್ ಇನ್ ಒನ್ ಯಂತ್ರೋಪಕರಗಳು ಇನ್ನೂ ಸಿಗುತ್ತಿಲ್ಲವೆಂದು ಕೆಲವು ರೈತರು ತಾವೇ ವಿಜ್ಞಾನಿಗಳಂತೆ ಹೊಸ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಹೌದು ಇಲ್ಲೊಬ್ಬ ರೈತ ಆರಂಭದಲ್ಲಿ ಮನೆಯಲ್ಲಿ ಬೈಸ್ಕೊಂಡು ಈಗ ಹೊಗಳಿಸಿಕೊಳ್ಳುವ ಕೆಲಸ (Weeding Machine Invention)ಮಾಡಿದ್ದಾರೆ. ಅದ್ಯಾವುದಪ್ಪಾ ಹೊಸ ತಂತ್ರಜ್ಞಾನ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕರಗುದರಿ ಗ್ರಾಮದ ರೈತ ಮಹಾವೀರ ಡಿ. ಹಾವನೂರ ಇಂಜಿನೀಯರನಂತೆ ಆಲೋಚನೆಯಲ್ಲಿ ತೊಡಗಿ ತನ್ನದೇ ಆದ ಶೈಲಿಯಲ್ಲಿ ರೋಟಾವೇಟರನ್ನು ಬದಲಾಯಿಸಿ ಎಡೆಕುಂಟೆ ತಯಾರು ಮಾಡಿದ್ದಾರೆ. ಪಾವರ್ ವೀಡರ್ ಯಂತ್ರಕ್ಕೆ ಎಡಕುಂಟೆ ಬ್ಲೇಡ್ ಗಳನ್ನು ಜೋಡಿಸಿ ಎರಡು ಎತ್ತು ಹಾಗೂ ನಾಲ್ಕೈದು ಜನ ಆಳುಗಳು ಮಾಡುವ ಕೆಲಸವನ್ನು ಮಾಡುವಂತೆ ತಯಾರಿಸಿದ್ದಾರೆ.
ಹೊಸ ಪ್ರಯೋಗಕ್ಕೆ ಕಾರಣ (New inventation)
ಇತ್ತೀಚೆಗೆ ಕೃಷಿಯಲ್ಲಿ ಆಳುಗಳ ಸಮಸ್ಯೆ ಹೆಚ್ಚಾಗುತ್ತಿದ್ದರಿಂದ ಏನಾದರೂ ಹೊಸ ಪ್ರಯೋಗ ಮಾಡಿ ಆಳುಗಳ ಸಮಸ್ಯೆ ಬಗೆಹರಿಸಬೇಕು. ಅದರಲ್ಲಿ ಕಡಿಮೆ ಖರ್ಚಿನಲ್ಲಿ ಎಲ್ಲಾ ಬೆಳೆಗಳಿಗೆ ಅನುಕೂಲವಾಗುವಂತೆ ಏನದರೊಂದು ಮಾಡಬೇಕೆಂದು ಆಲೋಚನೆ ಮಾಡಿದ್ದೇ ತಡ. ತನ್ನ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ತಾವು ಎದುರಿಸುತ್ತಿರುವ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ ಮಹಾವೀರ ಡಿ. ಹಾವನೂರ. ಅದೇ ಆಲ್ ಇನ್ ಒನ್ ಕುಂಟೆ ಹೊಡೆಯುವ ಯಂತ್ರ.
ಸಮಯ ಹಾಗೂ ಹಣ ಉಳಿತಾಯ (Time and money save)
ಕೃಷಿಯಲ್ಲಿ ಆಳುಗಳ ಸಮಸ್ಯೆ ಹೆಚ್ಚಿದೆ. ಆಳುಗಳು ಸಿಕ್ಕರೂ ದುಪ್ಪಟ್ಟು ಹಣ ಬೇಡಿಕೆ ಇಡುತ್ತಾರೆ. ಅದರಲ್ಲಿ ತಾವು ಅಂದುಕೊಂಡ ಸಮಯಕ್ಕೆ ಸರಿಯಾಗಿ ಆಳುಗಳು ಸಿಗದೆ ಇರುವುದರಿಂದ ಇಳುವರಿಯೂ ಕಡಿಮೆಯಾಗುವ ಸಾಧ್ಯತೆಯಿದೆ. ಈ ಯಂತ್ರದಿಂದ ಸಮಯ ಹಾಗೂ ಹಣ ಉಳಿತಾಯ ಮಾಡಿಕೊಳ್ಳುತ್ತಿದ್ದಾರೆ.
ಮಹಾವೀರ ಡಿ. ಹಾವನೂರ ಮಾಡಿದ್ದೇನು ಗೊತ್ತಾ. (Do you know what Mahaveer did)
ಸೆಕೆಂಡ್ ಹ್ಯಾಂಡ್ನಲ್ಲಿ 30 ಸಾವಿರಕ್ಕೆ ಪಾವರ್ ವೀಡರ್ ಖರೀದಿ ಮಾಡಿದ್ದಾರೆ. ನಂತರ ಇದಕ್ಕೆ ತನ್ನದೇ ಆದ ಶೈಲಿಯಲ್ಲಿ ಎಡೆಕುಂಟೆ ತಯಾರು ಮಾಡಲು ಕಬ್ಬಿಣ ಖರೀದಿ ಮಾಡಿದ್ದಾರೆ. ಅದಕ್ಕೆ ಗೋವಿನ ಜೋಳ, ಸೋಯಾಬಿನ್, ಕಬ್ಬು, ಹತ್ತಿ, ಶೇಂಗಾ, ತೊಗರಿ, ಭತ್ತ ಹೀಗೆ ತಾನು ಬೆಳೆಯುವ ಎಲ್ಲಾ ಬೆಳೆಗಳ ನಡುವಿನ ಕಳೆ ಕೀಳುವುದಕ್ಕೆ ಹೊಂದುವಂತೆ ಅರ್ಧ ಇಂಚಿಗೆ ಒಂದರಂತೆ ಕುಂಟೆಗೆ ಬ್ಲೇಡ್ ಕೂಡುವ ಹಾಗೆ ಹೋಲ್ ಹಾಕಿಸಿದ್ದಾರೆ. ಹೆಚ್ಚು ಆಳ ಹೋಗಿ ಬೆಳೆ ಕಿತ್ತುಕೊಂಡು ಬರದ ಹಾಗೆ ಅದಕ್ಕೆ ಚಕ್ರವೂ ಕೂಡಿಸಿದ್ದಾರೆ. ಗಾಲಿಯನ್ನು ಸಹ ಅನುಕೂಲಕ್ಕೆ ತಕ್ಕಂತೆ ಹೊಂದುವಂತೆ ಹೋಲ್ ಕೂಡಿಸಿದ್ದಾರೆ. ಜೊತೆಗೆ ಬಿತ್ತನೆಗೂ ಮುನ್ನ ಹೊಲದಲ್ಲಿ ರಂಟೆ ಹೊಡೆಯಲು ನೆರವಾಗುತ್ತದೆ. ಕುಂಟೆ ಚಕ್ರವನ್ನು ಅಡ್ಜೆಸ್ಟ್ ಮಾಡಿಕೊಂಡು ಸಾಲಿನಲ್ಲಿ ಬೆಳೆದಿರುವ ಕಳೆಯನ್ನು ಸಲೀಸಾಗಿ ತೆಗೆಯುತ್ತದೆ . ಇದಕ್ಕೆಲ್ಲಾ ಅವರು ಖರ್ಚು ಮಾಡಿದ್ದು ಕೇವಲ 5 ಸಾವಿರ ರೂಪಾಯಿ. ಇದೇ ಕುಂಟೆ ಎಡೆ ಹೊರಗಡೆ ಖರೀದಿಸಬೇಕಾದರೆ 20 ರಿಂದ 30 ಸಾವಿರ ರೂಪಾಯಿ ಬೇಕಾಗುತ್ತದೆ. ಆದರೆ ಎಲ್ಲಾ ಬೆಳೆಗಳಿಗೆ ಅನುಕೂಲವಾಗುವ ಹಾಗೆ ಬ್ಲೇಡ್ ಇರುವುದಿಲ್ಲ. ಅದಕ್ಕಾಗಿ ತನ್ನದೇ ಆದ ಬುದ್ದಿ ಪ್ರಯೋಗ ಮಾಡಿ ಹೊಸ ಎಡೆಕುಂಟೆ ತಯಾರು ಮಾಡಿ ಈಗ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರಪರಿಚಿತರಾಗಿದ್ದಾರೆ. ಅಷ್ಟೇ ಅಲ್ಲ, ಫೇಸ್ಬುಕ್, ವ್ಯಾಟ್ಸಪ್ ಮೂಲಕ ಹಲವು ಕರೆಗಳು ಬರುತ್ತಿವೆ. ಈ ಯಂತ್ರ ಹೊರಗಡೆ ಖರೀದಿ ಮಾಡಬೇಕಾದರೆ ಸುಮಾರು 80 ರಿಂದ 85 ಸಾವಿರ ರೂಪಾಯಿ ಬೇಕು. ಆದರೆ ಇವರು ಕೇವಲ 35 ಸಾವಿರಕ್ಕೆ ತಯಾರು ಮಾಡಿ ಈಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಸಮಯ ಮತ್ತು ಆಳುಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಈ ಯಂತ್ರ ಒಂದು ದಿನಕ್ಕೆ ಕನಿಷ್ಟ ಮೂರು ಎಕರೆ ಜಮೀನಿನನಲ್ಲಿ ಕಳೆ ತೆಗೆಯುತ್ತದೆ. ಒಂದು ಎಕರೆ ಹೊಲದಲ್ಲಿನ ಕಳೆ ತೆಗೆಯಲು ಒಂದು ಲೀಟರ್ ಪೆಟ್ರೋಲ್ ಖರ್ಚು ತಗಲುತ್ತದೆ.. ಎಕರೆಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಹಾಗೂ ಮೂರ್ನಾಲ್ಕು ತಾಸಿನಲ್ಲಿಯೇ ಕೆಲಸ ಮುಗಿಸಬೇಕು. ಅದೇ ಆಳುಗಳ ಖರ್ಚು ಎಷ್ಟಾಗುತ್ತದೇ ನೀವೇ ಲೆಕ್ಕ ಹಾಕೊಳ್ಳಿ ಎನ್ನುತ್ತಾರೆ ಮಹಾವೀರ ಡಿ. ಹಾವನೂರ
ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುವಾಗ ನೀವ್ಯಾಕೆ ಕಷ್ಟಪಟ್ಟೀರಿ?
ದುಡ್ಡುಕೊಟ್ಟರೆ ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತದೆ. ಆದರೆ ನಮಗೆ ಬೇಕಾದ ಹಾಗೆ ಸಿಗುವುದಿಲ್ಲ.ಕಂಪನಿಗಳು ಒಂದೇ ಮಾದರಿಯಲ್ಲಿ ತಯಾರು ಮಾಡಿರುತ್ತವೆ. ಸೋಯಾಬಿನ್, ಜೋಳ, ಶೇಂಗಾ, ಕಬ್ಬು ಹೀಗೆ ಬೇರೆ ಬೇರೆ ಬೆಳೆಗಳ ಕಳೆ ಕೀಳುವ ಹಾಗೂ ಇತರ ಚಟವಟಿಕೆಗೆ ಯಂತ್ರೋಪಕರಣ ಇರುವುದಿಲ್ಲ. ಅದಕ್ಕಾಗಿ ನೇಗಿಲು ಕುಂಟಿ ಎಲ್ಲದರ ಬಗ್ಗೆ ತಿಳಿದಿದ್ದ ನಾನು ಸ್ವತಃ ಎಡೆಕುಂಟೆ ಏಕೆ ತಯಾರು ಮಾಡಬಾರದೆಂದು ವಿಚಾರ ಮಾಡಿದ್ದೇ ತಡ…. ಎಡೆಕುಂಟೆ ತಯಾರಿಕೆಯಲ್ಲಿ ತೊಡಗಿದೆ. ಆರಂಭದಲ್ಲಿ ಮನ್ಯಾಗ್ ಬೈಸ್ಕೊಂಡೆ…ಈಗ ಹೊಗಳಸ್ಕೊಂಡುವ ಕೆಲಸ ಮಾಡಿದ್ದೇನೆ ಎಂದು ಮಹಾವೀರ ಸಂತಸ ವ್ಯಕ್ತಪಡಿಸಿದರು
ತಾವು ಯುವ ರೈತರಿಗೆ ಏನು ಸಲಹೆ ಕೊಡುತ್ತೀರಿ ? (What do you suggest to farmers)
ಮನೆಯಲ್ಲಿಯೇ ಎಷ್ಟು ಸಾಮಾನುಗಳು ಬಿದ್ದಿರುತ್ತವೆ. ಅವುಗಳನ್ನು ಉಪಯೋಗಿಸಿ ಏನಾದರೊಂದು ಸಾಮಾನು ತಯಾರು ಮಾಡಬಹುದು. ಪಂಪ್ ಮೋಟರ್ ಗಳು ಮನಯಲ್ಲಿ ಕೆಟ್ಟು ಬಿದ್ದಿರುತ್ತವೆ. ಕಬ್ಬಿಣದ ಸಾಮಾನುಗಳು ಮನೆಯಲ್ಲಿ ಇದ್ದೇ ಇರುತ್ತವೆ.ಅದನ್ನೇ ರಿಪೇರಿ ಮಾಡಿಸಿ ಏನಾದರೊಂದು ಹೊಸ ಪ್ರಯೋಗ ಮಾಡಿ ಖರ್ಚು ಉಳಿಸಿಕೊಳ್ಳಬಹುದು. ರೈತರು ಇನ್ನೊಬ್ಬರ ಹತ್ತಿರ ಕೈಚಾಚದಂತೆ ಸ್ವಾವಲಂಬಿಯಾಗಿ ಬದುಕು ಸಾಗಿಸಲಿ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 97419 55351 ಗೆ ಸಂಪರ್ಕಿಸಬಹುದು.