ನಮ್ಮೂರಿನ ಸುತ್ತಮುತ್ತಮುತ್ತ ಮಳೆ, ಗಾಳಿ, ಹವಾಮಾನದ ಮಾಹಿತಿ ಪಡೆಯಲು ಯಾರಿಗೆ ಕೇಳಬೇಕೆಂದುಕೊಂಡಿದ್ದೀರಾ…. ಸರ್ಕಾರವು ಅಭಿವೃದ್ಧಿಪಡಿಸಿದ ಉಚಿತ ಸಹಾಯವಾಣಿ ವರುಣಮಿತ್ರ ನಂಬರಿಗೆ ಕರೆ ಮಾಡಿದರೆ ಸಾಕು, ನಿಮ್ಮೂರಿನ ಮಾಹಿತಿಯನ್ನು ಅಧಿಕಾರಿಗಳು ನಿಮಗೆ ನೀಡುತ್ತಾರೆ. ಇದಕ್ಕಾಗಿ ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕರೆ ಮಾಡಿ ಮಾಹಿತಿ ಪಡೆಯಬಹುದು.

ಸರ್ಕಾರವು ಮಳೆಯ ಹವಾಮಾನ ವರದಿ (weather forecast) ನೀಡುವ ಹಲವಾರು ಆ್ಯಪ್ ಗಳನ್ನು ಅಭಿವೃದ್ಧಿಪಡಿಸಿದೆ. ಆದರೆ ಈ ಎಲ್ಲಾ ಆ್ಯಪ್ ಗಳಿಗೆ ಆ್ಯಂಡ್ರೈಡ್ ಪೋನ್ ಬೇಕಾಗುತ್ತದೆ. ಇನ್ನೂ ದೇಶದಲ್ಲಿ ಹಲವಾರು ರೈತರ ಬಳಿ ಆ್ಯಂಡ್ರೈಡ್ ಫೋನ್ ಇಲ್ಲ. ಹಾಗೂ ಕೆಲವು  ಆ್ಯಪ್ ಗಳು ಜಿಲ್ಲಾವಾರು ಹವಾಮಾನದ ಮಾಹಿತಿ ನೀಡುತ್ತವೆ. ಗ್ರಾಮವಾರು ಮಾಹಿತಿ ನೀಡುವುದಿಲ್ಲ. ಆ್ಯಂಡ್ರೈಡ್ ಫೋನ್ ಇಲ್ಲದ ಕಾರಣದಿಂದಾಗಿ ರೈತರಿಗೆ ಸರಿಯಾದ ಹವಾಮಾನ ವರದಿ ಸಿಗುವುದಿಲ್ಲ. ನೈಸರ್ಗಿಕ ವಿಕೋಪದಿಂದ ಉಂಟಾಗಿರುವ ಬೆಳೆಹಾನಿ ತಪ್ಪಿಸುವ ಉದ್ದೇಶದಿಂದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ದಿನದ 24 ಗಂಟೆ ಮಳೆ ಮತ್ತು ಹವಾಮಾನಕ್ಕೆ ಸಂಬಂಧಿಸಿದಂತೆ ಮುನ್ಸೂಚನೆ ನೀಡುವ ವರುಣಮಿತ್ರ (Varunamitra) ಎಂಬ ಸಹಾಯವಾಣಿ 9243345433 ಆರಂಭಿಸಿದೆ.

ಕಂದಾಯ ಇಲಾಖೆ ಅಧೀನದ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದಡಿ (ಕೆ.ಎಸ್.ಎನ್.ಡಿ.ಎಂ.ಸಿ) ಇದು ಕಾರ್ಯನಿರ್ವಹಿಸುತ್ತಿದೆ. ಕೆ.ಎಸ್.ಎನ್.ಡಿಎಂಸಿಯಲ್ಲಿ 2011 ರಲ್ಲೇ ವರುಣ ಮಿತ್ರ ಪ್ರಾರಂಭಿಸಲಾಗಿದ್ದು, 2013 ರ ಹೊತ್ತಿಗೆ ಇದರ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಈ ಮೂಲಕ ಇದು ಈಗ ರೈತಮಿತ್ರನಾಗಿ ರೂಪುಗೊಂಡಿದೆ. 24*7  ಲಭ್ಯವಿರುವ ಸಹಾಯವಾಣಿಯು ಮಳೆ. ಹವಾಮಾನ, ಗಾಳಿಯ ವೇಗ, ಯಾವ ದಿಕ್ಕಿಗೆ ಬೀಸುತ್ತಿದೆ ಎಂಬುದನ್ನು ಸಹ ಮಾಹಿತಿ ನೀಡುತ್ತದೆ.

ರೈತರಿಗೆ ತಮ್ಮ ಕೃಷಿ ಚಟುವಟಿಕೆಯನ್ನು ಸಮಯೋಚಿತವಾಗಿ ರೂಪಿಸಲು ಮತ್ತು ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ನಷ್ಟವನ್ನು ತಗ್ಗಿಸುವುದು ಈ ಸಹಾಯವಾಣಿಯ ಉದ್ದೇಶವಾಗಿದೆ.

ರಾಜ್ಯದ ಯಾವುದೇ ಗ್ರಾಮದ ರೈತ ಯಾವಾಗ ಬೇಕಾದರೂ ಈ ಸಹಾಯವಾಣಿಗೆ ಕರೆ ಮಾಡಿದರೆ ಸಾಕು, ಯಾವಾಗ ಮಳೆಯಾಗುತ್ತದೆ. ಎಷ್ಟು ಪ್ರಮಾಣ ಮಳೆಯಾಗಬಹುದು, ಉಷ್ಣಾಂಶ ಎಷ್ಟಿದೆ, ಗಾಳಿಯ ವೇಗ ಯಾವ ದಿಕ್ಕಿಗೆ ಬೀಸುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ನೀಡುವರು.

ರಾಜ್ಯದ 5625 ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಟೆಲಿಮೆಟ್ರಿಕ್ ಮಳೆ ಮಾಪನ ಯಂತ್ರ ಹಾಗೂ 746 ಹೋಬಳಿ ಕೇಂದ್ರಗಳಲ್ಲಿ ಹವಾಮಾನ ಮಾಪನ  ಯಂತ್ರ ಅಳವಡಿಸಲಾಗಿದೆ. ಅವುಗಳಿಂದ ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿಯು ಕೇಂದ್ರ ಕಚೇರಿಯಲ್ಲಿರುವ ಸರ್ವರಗೆ ಲಭ್ಯವಾಗುತ್ತದೆ. ಅದನ್ನು ಆಧರಿಸಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡುತ್ತಾರೆ.

ಎಸ್ಎಂಎಸ್ ಸಹ ಲಭ್ಯ:

ಹವಾಮಾನ ಆಧರಿಸಿ ಕೃಷಿ ಚಟುವಟಿಕೆ ನಡೆಸುವ ರೈತರು ತಮಗೆ ನಿತ್ಯ ಹವಾಮಾನ ಮಾಹಿತಿ ಬೇಕೆಂದರೆ ಎಸ್ಎಂಎಸ್ ಸಹ ಕಳಿಸಲಾಗುವುದು. ಆಸಕ್ತ  ರೈತರು, ನಿರ್ಧಿಷ್ಟ ಗ್ರಾಮ, ಹೋಬಳಿಯನ್ನು ತಮ್ಮ ಸಂದೇಶದಲ್ಲಿ ನಮೂದಿಸಿ ಸಹಾಯವಾಣಿ ಸಂಖ್ಯೆಗೆ ಎಸ್ಎಂಎಸ್ ಮಾಡಿದರೆ ಸಾಕು, ಅವರಿಗೆ ಬೆಳಗ್ಗೆ 8.30 ಮತ್ತು ಸಾಯಂಕಾಲ 5 ಗಂಟೆಗೆ ಹೀಗೆ ದಿನದ ಎರಡು ಅವಧಿಯಲ್ಲಿ ಮಾಹಿತಿ ಸಹ ಒದಗಿಸಲಾಗುವುದು.

ಮಾಹಿತಿಗೆ ರೈತರು ನೋಂದಣಿ ಮಾಡುವ ಅಗತ್ಯವಿಲ್ಲ. ಮಾಹಿತಿ ನೀಡುವುದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಉಚಿತವಾಗಿ ಈ ಸೇವೆಯನ್ನು ಪಡೆಯಬಹುದು.

ಗ್ರಾಮಪಂಚಾಯಿತಿಯಲ್ಲಿ ಅಳವಡಿಸಿರುವ ಮಳೆ ಮತ್ತು ಹವಾಮಾನ ಮಾಪನ ಕೇಂದ್ರಗಳಿಂದ ಸಂಗ್ರಹಿಸಲ್ಪಟ್ಟ ದತ್ತಾಂಶವನ್ನು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಗಣಕೀಕೃತ ಮಾದರಿಗಳ ಮೂಲಕ ಆಯಾ ಗ್ರಾಮ ಪಂಚಾಯಿತಿಯ ಹವಾಮಾನ ಮುನ್ಸೂಚನೆಯನ್ನು ರೈತ ಸಮುದಾಯಕ್ಕೆ ನೇರವಾಗಿ ಈ ಸಹಾಯವಾಣಿಯಿಂದ ತಲುಪಿಸಲಾಗುತ್ತದೆ.

ರೈತಾಪಿ ವರ್ಗ ವರುಣಮಿತ್ರ ಸಹಾಯವಾಣಿಯಿಂದ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ತಮ್ಮ ಕೃಷಿ ಚಟುವಟಿಕೆ ರೂಪಿಸಿಕೊಳ್ಳಬಹುದು. ಹವಾಮಾನ ವೈಪರಿತ್ಯದಿಂದ ಆಗಬಹುದಾದ ಬೆಳೆನಾಶವನ್ನು ತಡೆಗಟ್ಟಬಹುದು. ಸಮರ್ಪಕ ಬೆಳೆ ನಿರ್ವಹಣೆ ಮೂಲಕ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ:. ಸಿಡಿಲು ಬೀಳುವ ಮೊದಲೇ ಮುನ್ಸೂಚನೆ ನೀಡುತ್ತದೆ ದಾಮಿನಿ ಆ್ಯಪ್‌: ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *