ಕೋವಿಡ್ ಮಹಾಮಾರಿ ಸೃಷ್ಟಿಸಿರುವ ಈ ಬಿಕ್ಕಟ್ಟಿನಲ್ಲಿ ಆಹಾರ ಸಚಿವ ಉಮೇಶ ಕತ್ತಿ ಉಡಾಫೆ ಉತ್ತರ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಪಡಿತರ ಅಕ್ಕಿ ಕಡಿತ ಮಾಡಿರುವುದನ್ನು ಪ್ರಶ್ನಿಸಿದ ರೈತರೊಬ್ಬರಿಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರು ಕರೆ ಮಾಡಿದ ರೈತರಿಗೆ ಸಾಯುವುದು ಒಳ್ಳೆಯದು ಎಂದು ಹೇಳಿದ ಆಡಿಯೋ ವೈರಲ್ ಆಗಿದೆ.
ಹೌದು, ಇದಕ್ಕೆ ಈಗಾಗಲೇ ವಿರೋದ ಪಕ್ಷದ ನಾಯಕರು ಹಾಗೂ ರೈತಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಸಹ ಉಮೇಶ ಕತ್ತಿಯವರ ಹೇಳಿಕೆಗೆ ವಿಷಾಧ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು..?
ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ ಎನ್ನುವವರು ಸಚಿವರ ಮೊಬೈಲ್ ಫೋನ್ ಗೆ ಕರೆ ಮಾಡಿ ಪಡಿತರ ಅಕ್ಕಿ ಕಡಿತಗೊಳಿಸಿರೋದನ್ನು ಪ್ರಶ್ನಿಸಿದ್ದಾರೆ.. ಲಾಕ್ಡೌನ್ ಸಂದರ್ಭದಲ್ಲಿ ಕೇವಲ 2 ಕೆಜಿ ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ ಎಂದು ಕೇಳಿದ್ದಾರೆ. ಇದಕ್ಕೆ ಉಮೇಶ ಕತ್ತಿ ಉತ್ತರಿಸಿ 2 ಕೆಜಿಯೊಂದಿಗೆ 3 ಕೆಜಿ ರಾಗಿ ಉತ್ತರ ಕರ್ನಾಟಕದವರಿಗ 3 ಕೆಜಿ ಜೋಳ ನೀಡುತ್ತಿದ್ದೇವೆ ಎಂದಿದ್ದಾರೆ. ಲೌಕ್ಡೌನ್ ಸಂದರ್ಭದಲ್ಲಿ ಎರಡು ಕೆಜಿ ಅಕ್ಕಿ 3 ಕೆಜಿ ಜೋಳ ಸಾಲುವುದಿಲ್ಲ ಎಂದಾಗ ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿ ನೀಡುತ್ತಿದೆ ಎಂದಿದ್ದಾರೆ. ಯಾವಾಗ ಕೊಡುತ್ತಾರೆ ಎಂದಾಗ ಕೇಂದ್ರ ಸರ್ಕಾರವು ಬರುವ ತಿಂಗಳಲ್ಲಿ ಕೊಡುತ್ತದೆ ಎಂದಾಗ ಅಲ್ಲಿಯವರೆಗೆ ಉಪವಾಸ ಇರದಾ ಸರ್ ಸತ್ತು ಹೋಗಿಬಿಡೋದಾ ಎಂದು ಕೇಳಿದ್ದಾರೆ. ಇದಕ್ಕೆ ಸತ್ತು ಹೋದರೆ ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಹೇಳಿ ಮತ್ತೇ ಫೋನ್ ಮಾಡಬೇಡಿ ಎಂದು ಹೇಳಿ ಕಟ್ ಮಾಡಿದ್ದಾರೆ. ಈ ಸಂಭಾಷಣೆ ಈಗ ವೈರಲ್ ಆಗಿದೆ. ತಮ್ಮ ಹೇಳಿಕೆ ತೀವ್ರ ಟೀಕೆ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡಿರುವ ಉಮೇಶ ಕತ್ತಿ ಕ್ಷಮೆಯಾಚಿಸಿದ್ದಾರೆ