ಕೃಷಿಯಲ್ಲಿ ಹೊಸ ಹೊಸ ಯಂತ್ರೋಪಕಣಗಳು ಎಷ್ಟೇ ಬಂದರೂ ರೈತ ಬಾಂಧವರಲ್ಲಿ ಸಾಂಪ್ರದಾಯಿಕ ಕೂರಿಗೆ, ಎತ್ತಿನ ಬಂಡಿಯ ಮೇಲೆ ಇರುವ ಪ್ರೀತಿ ಇನ್ನೂ ಕಡಿಮಯಾಗಿಲ್ಲ ಎಂಬುದಕ್ಕೆ ಈ ಯುಗಾದಿ ಹಬ್ಬವೇ ಸಾಕ್ಷಿ. ಇದೇನಿದು ಜೂನ್ ತಿಂಗಳಲ್ಲಿ (ಕಾರಹುಣ್ಣಿಮೆ)ಯಂದು ಎತ್ತಿನ ಬಂಡಿ, ಕೂರಿಗೆ, ಕೃಷಿ ಪರಿಕರಗಳಿಗೆ ಪೂಜೆ ಮಾಡುವುದನ್ನು ಯುಗಾದಿ ಹಬ್ಬದಂದೇಕೆ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.
ಹೌದು ಉತ್ತರ ಕರ್ನಾಟಕದ ಸೇಡಂ ತಾಲೂಕಿನಾದ್ಯಂತ ಯುಗಾದಿ ಹಬ್ಬದಂದೇ ಎತ್ತಿನ ಬಂಡಿ, ಕೂರಿಗೆ, ನೇಗಿಲು,ಕುಂಟೆ ಸೇರಿದಂತೆ ಇತರ ಕೃಷಿ ಪರಿಕರಗಳನ್ನು ಶೃಂಗಾರಗೊಳಿಸಿ ಪೂಜೆ ಮಾಡುತ್ತಾರೆ. ಯುಗಾದಿ ಹಬ್ಬದಂದೇಕೆ ಈ ಪೂಜೆ ಅಂದುಕೊಂಡಿದ್ದೀರಾ…. ಇಲ್ಲಿದೆ ಮಾಹಿತಿ.
ಯುಗಾದಿ ಚೈತ್ರಮಾಸದ ಮೊದಲ ದಿನ. ಈ ಹಬ್ಬ ಭಾರತದ ಅನೇಕ ಕಡೆಗಳಲ್ಲಿ ಹೊಸ ವರ್ಷದ ಮೊದಲ ದಿನವೆಂದು ಆಚರಣೆ ಮಾಡುತ್ತಾರೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯಲ್ಪಟ್ಟರೂ ಹೊಸ ವರ್ಷದ ಅರ್ಥದಲ್ಲೇ ಇದನ್ನು ಆಚರಿಸುತ್ತಾರೆ. ಕರ್ನಾಟಕದಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವಾ ಹೀಗೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತದೆ. ಆಚರಣೆಯಲ್ಲಿಯೂ ಸಹ ಆಯಾ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸುತ್ತಾರೆ.
ಕರ್ನಾಟಕದಲ್ಲಿ ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ತಳಿರು ತೋರಣವನ್ನು (ಎಳೆಯ ಹಸಿರು ಮಾವಿನ ಎಲೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆ ಬಾಗಿಲಿಗೆ ಕಟ್ಟುತ್ತಾರೆ. ಮನೆಯ ಮುಂದೆ ಬಣ್ಣಬಣ್ಣದ ರೇಗೋಲಿಯನ್ನಿಡುವುದು, ಅಭ್ಯಂಜನ (ಎಣ್ಣೆ ಸೀಗೆಕಾಯಿಯಿಂದ ತಲೆ ತೊಳೆದುಕೊಳ್ಳುವುದು) ಪೂಜೆ ಪುನಸ್ಕಾರ ಇದ್ದೇ ಇರುತ್ತದೆ. ಬೇವು-ಬೆಲ್ಲ ತಿನ್ನುವುದರ ಮೂಲಕ ಜೀವನದಲ್ಲಿ ಸಿಹಿ-ಕಹಿ ಎರಡು ಸಮನಾಗಿರುವುದರ ಸಂಕೇತವಾಗಿ ಸಂದೇಶ ನೀಡಲಾಗುತ್ತದೆ.
ರೈತಬಾಂಧವರು ಬೆಳಗ್ಗೆ ಹೊಸ ವರ್ಷದ ಅರ್ಥದಲ್ಲೇ ತಮ್ಮ ಹೊಲದಲ್ಲಿ ಐದು ಸಾಲು ಕುಂಟಿ, ನೇಗಿಲು (ಗಳೆ) ಹೊಡೆಯುತ್ತಾರೆ. ಆಮೇಲೆ ಮನೆಗೆ ಬಂದೆ ಪೂಜೆ ಪುನಸ್ಕಾರ, ಬೇವು ಬೆಲ್ಲ ಸೇವಿಸುವುದರೊಂದಿಗೆ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಉತ್ತರ ಕರ್ನಾಟಕದ ಸೇಡಂ ತಾಲೂಕಿನಾದ್ಯಂತ ಇನ್ನೂ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಮಾಹಿತಿ.
ರೈತಬಾಂಧವರು ಬೆಳಗ್ಗೆ ಎದ್ದು ಹೊಲಕ್ಕೆ ಹೋಗಿ ಐದು ಸಾಲು ಕುಂಟೆ ಹೊಡೆದು ಭೂತಾಯಿನ್ನು ನಮಿಸಿ ಈ ಹೊಸ ವರ್ಷದಲ್ಲಿ ಬಂಗಾರ ಬೆಳೆ ಕೊಡಬೇಕಂದು ಪ್ರಾರ್ಥಿಸಿ ಮನೆಗೆ ಬರುತ್ತಾರೆ. ಅಟ್ಟದ ಮೇಲಿದ್ದ ಕೂರಿಗೆ, ಕುಂಟೆ, ಹಲಗೆ, ನೇಗಿಲು ಕೆಳಗಿಳಿಸಿ ಶುಚಿಗೊಳಿಸಿ ಬಗೆಬಗೆಯ ಬಣ್ಣ ಬಳಿದು ಸಿಂಗಾರಗೊಳಿಸುತ್ತಾರೆ. (ಇದನ್ನೇ ಕೆಲವು ಕಡೆ ಕಾರಹುಣ್ಣಿಮೆ ಹಬ್ಬದಂದು ಮಾಡುತ್ತಾರೆ)
ಬಿತ್ತನೆಗೆ ಬೇಕಾಗುವ ಎಲ್ಲಾ ಪರಿಕರಗಳನ್ನು ಶುಚಿಗೊಳಿಸುತ್ತಾರೆ. ವಿಶೇಷವಾಗಿ ಎತ್ತಿನ ಬಂಡಿ, ಕರಿ ಕಂಬಳಿ ಗದ್ದುಗೆ ಹಾಕಿ ಅದರ ಮೇಲೆ ಕೂರಿಗೆ (ಕೆಲವರು ಗೊಬ್ಬರದಿಂದ ಸಾಸಿ ಇಡುತ್ತಾರೆ) ನೇಗಿಲು, ಕುಂಟೆ ರೈತರ ಪ್ರಮುಖ ಪರಿಕರಗಳನ್ನು ಮನೆಯ ಮುಂದೆ ಇಟ್ಟು ಸುಣ್ಣ ಮತ್ತು ಜಾಜೀನಿಂದ ಸಿಂಗರಿಸುತ್ತಾರೆ. ತಳಿರು ತೋರಣ ಕಟ್ಟುತ್ತಾರೆ. ಕೆಲವರು ಕೂರಿಗೆಗೆ ಸೀರೆ ಉಡಿಸಿ ಅಲಂಕರಿಸುತ್ತಾರೆ. ಎತ್ತಿನ ಬಂಡಿ, ಕೂರಿಗೆಯೊಂದಿಗೆ ಬಿತ್ತನೆಗೆ ಬೇಕಾಗುವ ಎಲ್ಲಾ ಪರಿಕರಗಳಿಗೆ ಪೂಜೆ ಮಾಡುತ್ತಾರೆ.
ಯುಗಾದಿ ಹಬ್ಬದಂದೇಕೆ ನೀವು ಕೂರಿಗೆ, ಎತ್ತಿನ ಬಂಡಿಗೆ ಪೂಜೆ ಮಾಡುತ್ತೀರೆಂದು ಪ್ರಗತಿಪರ ರೈತರ ಶಂಕರ ನಾಯಕನಿಗೆ ಪ್ರಶ್ನಿಸಿದಾಗ, ಉಳುಮೆ ಮಾಡುವ ಹೊಲವನ್ನು ಭೂದೇವಿ ಎಂದು ಪೂಜಿಸುತ್ತೇವೆ. ಬಿತ್ತನೆ ಕೂರಿಗೆಯೂ ನಮಗೆ ಅನ್ನ ನೀಡುವ ದೇವರು. ಇದು ಪೂರ್ವಜರ ಕಾಲದಿಂದಲೂ ಬಂದಿದೆ. ಈ ರೀತಿ ಪೂಜೆ ಮಾಡುವುದರಿಂದ ಸಮೃದ್ಧ ಫಸಲು ಸಿಗುತ್ತದೆ ಎಂಬ ನಂಬಿಕೆ ಎಂದರು.