ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ನವೆಂಬರ್ 8 ಮತ್ತು 9 ರಂದು ಗುಡುಗು, ಸಿಡಿಲು ಸಹಿತಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಕೊಡಗು, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ 9ರವರೆಗೆ ಮಳೆಯಾಗುವ ಸಾಧ್ಯತೆಯಿರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದೀಪಾವಳಿ ಹಬ್ಬದಲ್ಲಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ದೀಪಾವಳಿ ಸಂಭ್ರಮಕ್ಕೆ ಕೊಂಚ ಅಡ್ಡಿಪಡಿಸಿತ್ತು. ಎರಡು ದಿನಗಳ ಕಾಲ ವಿರಾಮ ನೀಡಿದ ಮಳೆ ಈಗ ಮತ್ತೆರಡು ದಿನ ಸುರಿಯುವ ಸಾಧ್ಯತೆಯಿದೆ. ಸೋಮವಾರ ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ.

ಈಗಾಗಲೇ ತಮಿಳುನಾಡಿನ ಚೈನೈನಲ್ಲಿ ಭಾರಿ ಮಳೆಯಾಗಿದ್ದು, ಇದು ಕಳೆದ ನಾಲ್ಕು ವರ್ಷಗಳ ದಾಖಲೆ ಮಳೆಯಾಗಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಗಳು ಹೇಳಿವೆ.

ಬಂಗಾಳಕೊಲ್ಲಿಯ ಆಗ್ನೆಯ ಭಾಗ ಮತ್ತು ಸಮೀಪದ ಸುಮಾತ್ರ ಕರಾವಳಿಯ ಹಿಂದೂ ಮಹಾಸಾಗರದ ಭಾಗದಲ್ಲಿನ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ ಎತ್ತರದವರೆಗೂ ಚಂಡಮಾರುತ ಸನ್ನಿವೇಶ ರೂಪಗೊಂಡಿದ್ದು, ಅದರ ಪ್ರಭಾವದಿಂದಾಗಿ ನವೆಂಬರ್ 9 ರವರೆಗೆ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿರುವುದರುಂದ ನವೆಂಬರ್ 9 ರವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಒಳನಾಡಿನ ಕಲಬುರಗಿ, ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ್ಲಿ ಒಣಹವೆ ಮುಂದುವರೆಯಲಿದೆ. ಉಳಿದ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಭಾನುವಾರ 10 ಸೆಂ.ಮೀ. ಮಳೆಯಾಗಿದೆ. ಅದೇ ರೀತಿ ಸುಳ್ಯದಲ್ಲಿ 7 ಸೆಂ.ಮೀ, ಪುತ್ತೂರ, ಚಾಮರಾಜನಗರ, ಮಡಿಕೇರಿಯಲ್ಲಿ 5 ಸೆಂ.ಮೀ, ಕಾರ್ಕಳದಲ್ಲಿ 3 ಸೆಂ.ಮೀ, ಸಕಲೇಶಪುರದಲ್ಲಿ 2 ಸೆಂ.ಮೀ, ಮಂಗಳೂರು, ಕುಂದಾಪುರ, ಕಳಸದಲ್ಲಿ ತಲಾ 1 ಸೆಂ. ಮೀ ಮಳೆಯಾಗಿದೆ.

ತಮಿಳುನಾಡು ಭಾರಿ ಮಳೆಗೆ ತತ್ತರ- ಶಾಲಾ ಕಾಲೇಜು, ಸರ್ಕಾರಿ ಕಚೇರಿ ಬಂದ್

ತಮಿಳುನಾಡಿ ರಾಜಧಾನಿ ಚೆನೈನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನಗಳ ಕಾಲ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿ ರಜೆ ಘೋಷಿಸಲಾಗಿದೆ.

ಭಾರಿ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಸೋಮವಾರ ಸರ್ಕಾರಿ ಕಚೇರಿಗಳು ಬಂದ್ ಆಗಿದ್ದು, ಖಾಸಗಿ ಕಚೇರಿಯ ಉದ್ಯೋಗಿಗಳಿಗೆ ರಜೆ ನೀಡಿ ಅಥವಾ ವರ್ಕ್ ಫ್ರಂ ಹೋಮ್ ಕೊಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ವ್ಯಾಲಿನ್ ಮನವಿ ಮಾಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ತಮಿಳುನಾಡಿನ ಉತ್ತರ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಿತ್ತು. ಅಲ್ಲದೆ ಮಂಗಳವಾರ ಮತ್ತು ಬುಧವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *