ಮನುಷ್ಯನ ಆರೋಗ್ಯದಂತೆ ಮಣ್ಣಿನ ಆರೋಗ್ಯವೂ ಮುಖ್ಯ, ಮಣ್ಣು ಪರೀಕ್ಷೆ (Soil health test) ಮಾಡುವುದರಿಂದ ರೈತನಿಗಾಗುವ ಉಪಯೋಗಗಳ ಮಾಹಿತಿ ಇಲ್ಲಿದೆ

Written by By: janajagran

Updated on:

ಕೃಷಿಯಲ್ಲಿ ಮಣ್ಣು ರೈತನ ಕಣ್ಣು ಎಂದು (soil is the eye of farmer) ಹೇಳಲಾಗುತ್ತದೆ. ಏಕೆಂದರೆ ಕೃಷಿಯಲ್ಲಿ ಮಣ್ಣು ಅತೀ ಮಹತ್ವದ್ದಾಗಿದೆ. ಮಣ್ಣಿನ ಮೇಲೆಯೇ ರೈತನ ಜೀವನ ಆಧಾರವಾಗಿರುತ್ತದೆ. ಹಾಗಾಗಿ ಮಣ್ಣು ರೈತನ ಕಣ್ಣು ಎಂದು ಹೇಳಲಾಗುತ್ತದೆ. ಹಿಂದೆ ಭೂಮಿಗೆ ಸಾಕಷ್ಟು ದನಗಳ ಗೊಬ್ಬರ ಹಾಕಿ ಮಣ್ಣಿನ ಆರೋಗ್ಯ ಕಾಪಾಡಿ ಕೊಳ್ಳುತ್ತಿದ್ದರು. ಆದರೆ  ಇತ್ತೀಚೆಗೆ ಹೆಚ್ಚಿನ ಬೆಳೆ ಪಡೆಯುವ ಧಾವಂತದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವಾಗುತ್ತಿದೆ.  ಮಣ್ಣಿನ ಆರೋಗ್ಯ ಕ್ಷೀಣಿಸಲು ಅವೈಜ್ಞಾನಿಕ ಬೇಸಾಯ ಪದ್ದತಿ ಪ್ರಮುಖ ಕಾರಣವಾಗಿದೆ. ಹಾಗಾಗಿ ಇಂದು ಮಣ್ಣಿನ ಪರೀಕ್ಷೆ (Soil health test) ಅತ್ಯಗತ್ಯವಾಗಿದೆ. ಮಣ್ಣು ಪರೀಕ್ಷೆ ಮಾಡುವದರಿಂದ ಆಗುವ ಲಾಭವೇನು…. ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಇತರ ಜೀವಿಗಳಂತೆ ಮಣ್ಣು ಕೂಡ ಜೀವ ಹೊಂದಿರುವ ವಸ್ತುವಾಗಿದೆ. ಆದರೆ ಮಣ್ಣಿನ ಮಹತ್ವ ಅರಿಯದೆ ಹೆಚ್ಚು ಇಳುವರಿ ಪಡೆಯುವ ಧಾವಂತದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಸೇರಿಸಿ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಕಾಲ ಕಾಲಕ್ಕೆ ಹೇಗೆ ಆರೋಗ್ಯ ತಪಾಸಣೆ ಮಾಡಿಸುತ್ತಾನೋ ಹಾಗೆಯೇ ಕಾಲ ಕಾಲಕ್ಕೆ ಮಣ್ಣಿನ ಆರೋಗ್ಯ ತಿಳಿಯಲು ಅತ್ಯಗತ್ಯವಾಗಿರುತ್ತದೆ.

ಕರ್ನಾಟಕದಲ್ಲಿನ ಬಹು ಪಾಲು ಮಣ್ಣುಗಳಲ್ಲಿ ಮುಖ್ಯ ಹಾಗೂ ಲಘುಪೋಷಕಾಂಶಗಳ ಕೊರತೆ ಕಂಡುಬಂದಿದ್ದು ಈ ಪೋಷಕಾಂಶಗಳು ಬೆಳೆಯ ಬೆಳವಣಿಗೆಯ ಮೇಲೆ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ.  ಹಾಗಾಗಿ ಮಣ್ಣು ಪರೀಕ್ಷೆ ಮಾಡಿಸುವುದರ ಮೂಲಕ ಮಣ್ಣಿನಲ್ಲಿರುವ ಕೊರತೆಗಳನ್ನು ಅರಿತು ಅವುಗಳನ್ನು ಸರಿಪಡಿಸಿ ಬೆಳೆಗೆ ಬೇಕಾಗುವಂತಹ ಪೂರಕ ವಾತಾವರಣ ನಿರ್ಮಿಸಬಹುದು,

ಮಣ್ಣಿನ ಪರೀಕ್ಷೆ ಏಕೆ ಮಾಡಿಸಬೇಕು ?

ಬೆಳೆಗಳಿಗೆ ಬೇಕಾಗುವ ಮುಖ್ಯ ಪೋಷಕಾಂಶಗಳ (ಸಾರಜನಕ, ರಂಜಕ, ಪೊಟ್ಯಾಷ್, ಕ್ಯಾಲ್ಸಿಯಮ್, ಮೆಗ್ನೆಸಿಯಮ್, ಗಂಧಕ ಹಾಗೂ ಸತು, ಬೋರಾನ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ಮಾಲಿಬ್ಡಿನಮ್) ಲಭ್ಯತೆಯ ಪ್ರಮಾಣ ಹಾಗೂ ಕೊರತೆಯನ್ನು ತಿಳಿಯುವುಕ್ಕಾಗಿ ಮಣ್ಣು ಪರೀಕ್ಷೆ ಅತ್ಯಗತ್ಯ.

ಮಣ್ಣಿನಲ್ಲಿರುವ ರಸಸಾರ (ಹುಳಿ/ಕ್ಷಾರ). ಲವಣಾಂಶ ಪ್ರಮಾಣವನ್ನು ತಿಳಿದು, ಸುಧಾರಣೆಗೆ ಬೇಕಾಗುವ ಸುಣ್ಣ/ಜಿಪ್ಸಂ ಪ್ರಮಾಣ ನಿರ್ಧರಿಸಲು ಹಾಗೂ ನೀರು ಹಿಡಿದಿಟ್ಟುಕೊಳ್ಳುವಿಕೆ, ಮಣ್ಣಿನ ಸ್ವರೂಪ ಸೇರಿದಂತೆ ಇನ್ನಿತರ ಮಾಹಿತಿಗಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು.

ಮಣ್ಣು ಪರೀಕ್ಷೆಯಿಂದಾಗುವ  ಪ್ರಯೋಜನಗಳು (What are benefit of soil health test)

ಮಣ್ಣಿನಲ್ಲಿ ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು ಯಾವ ಪ್ರಮಾಣದಲ್ಲಿವೆ, ಯಾವ ಅಂಶದ ಕೊರತೆಯಿದೆ ಎನ್ನುವುದನ್ನು ತಿಳಿಯಬಹುದು. ಮಣ್ಣು ಆಮ್ಲ ಅಥವಾ ಕ್ಷಾರ ಅಥವಾ ಸಮಧಾತುವೇ ಎನ್ನುವುದನ್ನು ನಿರ್ಧರಿಸಬಹುದು. ಮಣ್ಣಿನಲ್ಲಿ  ಕರಗುವ  ಲವಣಾಂಶಗಳು ಸಸ್ಯಗಳಿಗೆ ಹಾನಿಕಾರಕವಾಗುವ ಪ್ರಮಾಣದಲ್ಲಿವೆಯೇ ಇಲ್ಲವೇ ಎನ್ನುವುದನ್ನೂ ಖಚಿತಪಡಿಸಬಹುದು. ಬೆಳೆಗನುಗುಣವಾಗಿ ಅವಶ್ಯಕತೆಗೆ ತಕ್ಕ ಪ್ರಮಾಣದಲ್ಲಿ ಗೊಬ್ಬರ ಹಾಕಲು ಸಹಕಾರಿ. ಮಣ್ಣು ದೋಷದಿಂದ  ಕೂಡಿದ್ದರೆ/ಫಲವತ್ತತೆ  ಕಡಿಮೆಯಿದ್ದರೆ ಸುಧಾರಣಾ ಕ್ರಮ ಅಳವಡಿಸಬಹುದು.ಮಣ್ಣು ಪರೀಕ್ಷೆ ಆಧಾರಿತ ಶಿಫಾರಸಿನ ಗೊಬ್ಬರಗಳ(ಸಮತೋಲನ) ಬಳಕೆಯಿಂದ ಉತ್ತಮ ಗುಣಮಟ್ಟದ, ಅಧಿಕ ಇಳುವರಿ ಪಡೆಯಬಹುದು.

Leave a comment