ಮಳೆ ನಕ್ಷತ್ರಗಳ ಹೆಸರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Written by By: janajagran

Updated on:

ಮಳೆ ನಕ್ಷತ್ರಗಳ ಹೆಸರೇನು? ಳೆಗಾಲವಿರಲಿ, ಚಳಿಗಾಲವಿರಲಿ, ಬೇಸಿಗೆಕಾಲವಾಗಲಿ ಪೂರ್ವಜರು ಆಯಾ ಹವಾಗುಣಕ್ಕೆ ತಕ್ಕಂತೆ ಗಾದೆಗಳನ್ನು (Rain proverbs) ಕಟ್ಟುತ್ತಿದ್ದರು. ಅಷ್ಟೇ ಅಲ್ಲ, ಈಗಲೂ ಸಹ ಹಳ್ಳಿಗಳಲ್ಲಿ ಅಜ್ಜ, ತಾತಂದಿರಿಗೆ ಒಮ್ಮೆ ಮಾತನಾಡಿಸಿದರೆ ಸಾಕು, ತಮ್ಮ ಅನುಭವದ ಬುತ್ತಿಯನ್ನು ತೆರೆದಿಟ್ಟು  ವಿಜ್ಞಾನಿಗಳಂತೆ ಪಟಪಟನೇ ಅವರ ಬಾಯಿಂದ ಮುತ್ತಿನ ಮಣಿಗಳು ಉದುರುತ್ತವೆ.  ತಮ್ಮ ಅನುಭವವೇ ಅವರಿಗೆ ಪಾಠವಾಗಿತ್ತು.

ಒಮ್ಮೆ ನೀವು ನಿಮ್ಮ ಮನೆಯಲ್ಲಿರುವ ಅಜ್ಜ, ತಾತಂದಿರಿಗೆ ಮಳೆ ಬರುವುದು ನಿಮಗೆ ಹೇಗೆ ಗೊತ್ತಾಗುತ್ತಿತ್ತು ಎಂದು ಕೇಳಿದರೆ ಸಾಕು, ಅವರ ಬಾಯಿಂದ ಮಳೆ ನಕ್ಷತ್ರಗಳ ಹೆಸರುಗಳು ಹಾಗೂ ಮಳೆ ನಕ್ಷತ್ರಕ್ಕೆ ತಕ್ಕಂತೆ ಕಟ್ಟಿದ ಗಾದೆಗಳು ಯಾವ ಸಂಕೋಚವೂ ಇಲ್ಲದೆ ಪಟಪಟನೇ ಹೇಳುತ್ತಾರೆ. ಈಗಿನ ಮಕ್ಕಳಿಗೆ ನಕ್ಷತ್ರಗಳೆಷ್ಟು ಎಂದು ಕೇಳಿದರೆ ನೂರಕ್ಕೆ ಒಬ್ಬರು 27 ನಕ್ಷತ್ರಗಳೆಂದು ಉತ್ತರಿಸುತ್ತಾರೆ. ಆದರೆ ಪೂರ್ವಜರು ಯಾವ ಆಧಾರವೂ ಇಲ್ಲದೆ 27 ನಕ್ಷತ್ರಗಳನ್ನು ಅದರಲ್ಲಿ 11 ಮಳೆಗೆ ಸಂಬಂಧಿಸಿದ ನಕ್ಷತ್ರಗಳನ್ನು ಬಿಡಿಸಿ ಹೇಳುತ್ತಾರೆ.  ಯಾವ ನಕ್ಷತ್ರದಲ್ಲಿ ಯಾವ ರೀತಿ ಮಳೆಯಾಗುತ್ತದೆ (Rain indications) ಎಂಬುದನ್ನೂ ಹೇಳುತ್ತಾರೆ.

ಮಳೆ ನಕ್ಷತ್ರಗಳ ಹೆಸರೇನು? (Rain stars) ಮಾಹಿತಿ ಇಲ್ಲಿದೆ

ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖ, ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ ಹಾಗೂ ವಿಶಾಖ ನಕ್ಷತ್ರಗಳನ್ನು ಮಳೆಯ ನಕ್ಷತ್ರಗಳೆಂದು ಕರೆಯಲಾಗುತ್ತದೆ.ಉಳಿದ ನಕ್ಷತ್ರಗಳಲ್ಲಿ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ.

ಮಳೆಯ ನಕ್ಷತ್ರ ಗಳ ಮೇಲಿರುವ ಗಾದೆಗಳು( Rain proverbs)

ಯಾವ ಅಕ್ಷರವೂ ಕಲಿಯದ ಪೂರ್ವಜರ ನೆನಪಿನ ಶಕ್ತಿ, ಮಳೆ ಮುನ್ಸೂಚನೆಗೆ ಕಟ್ಟಿದ ಗಾದೆಗಳು ಇಂದಿಗೂ ಚಿರಪರಿಚಿತ. ಈ ಗಾದೆಗಳನ್ನು ಯಾರು ಬರೆದರೋ ಗೊತ್ತಿಲ್ಲ, ಆದರೂ ಇಂದಿಗೂ ಹಳ್ಳಿಯಲ್ಲಿ ಮಳೆಗಾಲ ಬಂತೆಂದರೆ ಸಾಕು, ತಾವಾಗಿಯೇ ಬಾಯಿಂದ ಹೊರಬರುತ್ತವೆ. ತಮ್ಮ ನೆನಪಿಗೋಸ್ಕರ ಕೆಲವು ಗಾದೆಗಳನ್ನು ಇಲ್ಲಿ ಸಂಗ್ರಹಿಸಿದ್ದೇನೆ. ಒಮ್ಮೆ ನೀವು ನಾಲ್ಕು ಜನರು ಕುಳಿತಾಗ ಈ ಕೆಳಗಿನ ಗಾದೆಗಳನ್ನು ಹೇಳಿ ನೋಡಿ…. ಸುತ್ತಮುತ್ತಲಿನವರು ನಿಮ್ಮನ್ನು, ವಾ… ಎಂಥ ಮಾತು ಎಂದು ಹೊಗಳುವುದನ್ನು ಮಾತ್ರ ಮರೆಯುವುದಿಲ್ಲ. ಅಷ್ಟೊಂದು ತಾಕತ್ತಿದೆ ಈ ಪೂರ್ವಜನರ ಅನುಭವದ ಗಾದೆಗಳಿಗೆ.

ಮಘಾ ಮಳೆ ಬಂದಷ್ಟು ಒಳ್ಳೇದು, ಮನೆ ಮಗ ಉಂಡಷ್ಟು ಒಳ್ಳೇದು.

ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ. ಆಶ್ಲೇಷ ಮಳೆ, ಈಸಲಾರದ ಹೊಳೆ.

ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ! ಆರಿದ್ರಾ ಮಳೆ ಆರದೇ ಹುಯ್ಯುತ್ತೆ.

ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನ ಹಾಗೆ.

ಮಳೆಗಾಲದ ಮಳೆ ನಂಬಲಾಗದು ; ಮನೆ ಹೆಂಡ್ತಿನಗೆ ನಂಬಲಾಗದು.

ತುಂತುರು ಮಳೆಯಿಂದ ತೂಬು ಒಡೆದೀತೆ? ಅಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ.

ಮಗೆ ಮಳೆ ಮಗೆ ಗಾತ್ರ ಬೀಳ್ತದೆ. ಮಳೆ ಬಂದರೆ ಕೇಡಲ್ಲ ಮಗ ಉಂಡರೆ ಕೇಡಲ್ಲ

ಪುಷ್ಯ ಮಳೆ ಭಾಷೆ ಕೊಟ್ಟ ಮಳೆ, ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗಿತು

ಬಂದರೆ ಮಗೆ ಹೋದರೆ ಹೊಗೆ, ಕುರುಡು ಚಿತ್ತೆ ಎರಚಿದತ್ತ ಬೆಳೆ

ಸ್ವಾತಿ ಮಳೆ ಹೇತೆನೆಂದ್ರೂ ಬಿಡದು. ಅಶ್ವಿನೀ ಸಸ್ಯನಾಶಿನೀ.

ಭರಣಿ ಮಳೆ ಧರಣಿ ಬೆಳೆ. ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.

ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ. ಸ್ವಾತಿ ಮಳೆ ಮುತ್ತಿನ ಬೆಳೆ. ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

ಅನುರಾಧ ಬಂದರೆ ನಮ್ಮ ರಾಗಿ ನಮ್ಮದು. ಚಿತ್ತಾ ಮಳೆ ವಿಚಿತ್ರ ಬೆಳೆ! ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.

ಇದನ್ನೂ ಓದಿ: ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಮಳೆ ನಕ್ಷತ್ರಗಳ ಮೇಲೆ ಕಟ್ಟಿದ ಇನ್ನಿತರ ಗಾದೆಗಳು, ಕಾಲಾವಧಿ ಮಾಹಿತಿ ಇಲ್ಲಿದೆ

Leave a Comment