ದಿನದಿಂದ ದಿನಕ್ಕೆ ರಸಗೊಬ್ಬರ, ಯೂರಿಯಾ ಬೆಲೆ ಹೆಚ್ಚಾಗುತ್ತಿದ್ದರಿಂದ ರೈತರಿಗೆ ಖರೀದಿ ಮಾಡಲು ಅಸಾಧ್ಯವಾಗುತ್ತಿದೆ. ಅದರಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಜಮೀನಿನ ಫಲವತ್ತತೆ ಕಡಿಮೆಯಾಗುತ್ತಲೇ ಇರುವುದರಿಂದ ರೈತರು ಮನೆಯಲ್ಲಿಯೇ ಸಾವಯವ ಪದ್ಧತಿ ಮೂಲಕ ಯೂರಿಯಾ (Prepare urea at home) ಹೇಗೆ ತಯಾರಿಸಬಹುದು ಎಂಬುದುರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾವಯವ ಯೂರಿಯಾ ತಯಾರಿಸುವುದು ಹೇಗೆ?

ಎಮ್ಮೆ, ಹಸರು, ಮತ್ತಿತರ ದನಕರುಗಳ ಗಂಜಲದಿಂದ (ದೇಸೀ, ಜವಾರಿ ಹಸುವಿನ ಗಂಜಲವಾದರೆ ಇನ್ನೂ ಉತ್ತಮ) ಕೇವಲ ಒಂದೇ ತಿಂಗಳಲ್ಲಿ ಸಾವಯವ ಯೂರಿಯಾ ತಯಾರಿಸಬಹುದು.  ಹೌದು, ಮೊದಲು ಮನೆಯ ಮುಂದುಗಡೆ ಖಾಲಿಯಿರುವ ಜಾಗದಲ್ಲಿ 5 ಅಡಿ ಉದ್ದ, 4 ಅಗಡಿ ಅಗಲ ಹಾಗೂ 2 ಅಡಿ ಆಳದ ಚೌಕಟ್ಟಿನ ಗುಂಡಿ ತೆಗೆಯಬೇಕು. ಸಿಮೆಂಟ್ ತೊಟ್ಟಿಯಲ್ಲೂ ಮಾಡಬಹುದು) ಸಾವಯವ ಯೂರಿಯಾ ಗುಂಡಿಯ ಕೊಟ್ಟಿಗೆಯಿಂದ ಗಂಜಲ ಹೊರಬರುವ ಜಾಗದಲ್ಲಿ ಇರುವುದು ಸೂಕ್ತ ಸ್ಥಳವಾಗಿದೆ. ಗುಂಡಿಯ ಒಂದುವರೆ ಅಥವಾ ಒಂದು ಮುಕ್ಕಾಲು ಅಡಿಯವರೆಗೆ ಮರಳು ತುಂಬಬೇಕು. ಪ್ರತಿದಿನ ಗಂಜಲ ಗುಂಡಿಯಲ್ಲಿ ಬೀಳುವಂತೆ ನೋಡಿಕೊಳ್ಳಬೇಕು. ಮರಳು ತುಂಬಿದ ಗುಂಡಿಗೆ ಮೊದಲ ದಿನದಿಂದಲೇ ದಿನವಿಡೀ ಲಭ್ಯವಿರುವ ಗಂಜಲ ಸುರಿಯಬೇಕು. 30 ದಿನಗಳವರೆಗೆ ಪ್ರತಿದಿನ ಹೀಗೆ ಗಂಜಲ ಸುರಿಯಬೇಕು. ಈ ಪ್ರಕ್ರಿಯೆಯಿಂದಾಗಿ 30 ದಿನಗಳ ಬಳಿಕ ಮರಳಿನಲ್ಲಿ ಸಾರಜನಕ ಅಂಶ ಕ್ರೋಢೀಕರಣಗೊಳ್ಳುತ್ತದೆ. ಗುಂಡಿಯೊಳಗಿನ ಮರಳು ಕಪ್ಪು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಸಾರಜನಕ ಅಂಶ ಕ್ರೋಡೀಕೃತವಾಗಿದೆ ಎಂದರ್ಥ. ಸಾವಯವ ಯೂರಿಯಾವನ್ನು ಹೊರತೆಗೆದು ಗೋಣಿ ಚೀಲದ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿ ಚೀಲದಲ್ಲಿ ಶೇಖರಿಸಿಡಬೇಕು.

ಬಳಸುವ ವಿಧಾನ:

ಯೂರಿಯಾದಂತೆ ಸಾವಯವ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸಬಹುದು. ಸಾವಯವ ಯೂರಿಯಾ ಬಳಸುವುದರಿಂದ ಬೆಳಗಳಿಗೆ ಸಾರಜನಕ ಜೊತೆಗೆ ಇಥರೆ ಲಘುಪೋಷಕಾಂಶಗಳನ್ನು ಒದಗಿಸಬಹುದು.  ಮನೆಯಲ್ಲಿಯೇ ಸಾವಯವ ಯೂರಿಯಾ ತಯಾರಿಸಿ ಹೊರಗಡೆ ಖರೀದಿ ಮಾಡುವ ಹಣವನ್ನು ಉಳಿಸಬಹುದು.  ಸಾವಯವ ಯೂರಿಯಾ ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು.

ಸಾವಯವ ಯೂರಿಯಾದಿಂದಾಗಿ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ಸಾರಜನಕ ಸಿಗುತ್ತದೆ. ಜೊತೆಗೆ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳು ದೊರೆಯುತ್ತದೆ. ರಾಸಾಯನಿಕ ಯೂರಿಯಾಗೆ ಹೋಲಿಸಿದರೆ ಸಾವಯವ ಯೂರಿಯಾ ಉತ್ತಮವಾಗಿರುತ್ತದೆ. ಭೂಮಿಯ ಫಲವತ್ತತೆಯೂ ಹೆಚ್ಚಾಗುತ್ತದೆ. ಇಳುವರಿಯೂ ಹೆಚ್ಚಾಗುತ್ತದೆ.

ದೇಶದಲ್ಲಿ ಯೂರಿಯಾ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರು ಅತೀ ಸುಲಭವಾಗಿ ಯಾವುದೇ ಖರ್ಚಿಲ್ಲದೆ ಮನೆಯಲ್ಲಿಯೂ ಯೂರಿಯಾ ತಯಾರಿಸಿ ಖರ್ಚು ಉಳಿಸಬಹುದು.

Leave a Reply

Your email address will not be published. Required fields are marked *