ಹಳ್ಳಿಕಾರ್ ತಳಿಯ ಹೋರಿಗೆ 1 ಕೋಟಿ ರೂಪಾಯಿ ಬೆಲೆ

Written by By: janajagran

Updated on:

One crore value of Hallikar bull ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ 1 ಕೋಟಿ ಬೆಲೆಬಾಳುವ ಹೋರಿಯದ್ದೆ ಚರ್ಚೆ. ಬಹುತೇಕ ರೈತರು ಹಳ್ಳಿಕಾರ್ ಹೋರಿ ಎಲ್ಲಿದೆ ಎಂದು ಕೇಳಿ ಅಲ್ಲಿಯೇ ಮುಗಿಬೀಳುತ್ತಿದ್ದರು. 1 ಕೋಟಿ ಮೌಲ್ಯದ ಈ ಹಳ್ಳಿಕಾರ್ ಹೋರಿಯನ್ನು ಸಾಕಿದವರಾರು,,,,, ಈ ಹೋರಿಗೆ ಇಷ್ಟೊಂದು ಬೆಲೆ ಏಕೆ ಎಂಬ ಪ್ರಶ್ನೆಗಳಿಗಿಲ್ಲಿದೆ ಉತ್ತರ.

ಒಂದು ಕೋಟಿ ರೂಪಾಯಿ ಬೆಲೆಯ ಈ ಹೋರಿಯ ಮಾಲಿಕ ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮದ ರೈತ ಬೋರೇಗೌಡ.ಈ ಹೋರಿಗೆ ಅವರು ಕೃಷ್ಣ ಎಂದು ಹೆಸರಿಟ್ಟಿದ್ದಾರೆ. ಇದರ ಬೆಲೆ 1 ಕೋಟಿ ರೂಪಾಯಿ ಎಂದು ಅವರು ಕೃಷಿ ಮೇಳದಲ್ಲಿ ಬಂದ ರೈತರಿಗೆಲ್ಲರಿಗೂ ತಿಳಿಸುತ್ತಿದ್ದರು. ಈ ಹೋರಿಯ ಬೆಲೆ ಒಂದು ಕೋಟಿ ರೂಪಾಯಿ ನಿಜನಾ…. ಯಾಕ್ರಿ ಈ ಹೋರಿಗೆ ಇಷ್ಟೊಂದು ಬೆಲೆ ಎಂದು ಕೇಳುತ್ತಿದ್ದ ರೈತರಿಗೆ ಬೋರೇಗೌಡ ವಿವರಿಸಿದ್ದು ಹೀಗೆ.

ಈ ಹೋರಿಯಿಂದ ವಾರಕ್ಕೆ ಎರಡು ಬಾರಿ ವೀರ್ಯ ಸಂಗ್ರಹಿಸಲಾಗುತ್ತದೆ. ಈ ಹೋರಿಯಿಂದ ಒಂದು ಸಲಕ್ಕೆ 300 ಸ್ಟಿಕ್ ವೀರ್ಯ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ವೀರ್ಯ ಸಂವರ್ಧನಾ ಕೇಂದ್ರ ಸ್ಥಾಪಿಸಲಾಗಿದೆ. ಒಂದು ಸ್ಟಿಕ್ ವೀರ್ಯವನ್ನು 1 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಬಾರಿಯ ವೀರ್ಯದ 300 ಸ್ಟಿಕ್ ವೀರ್ಯಕ್ಕೆ ಸುಮಾರು 3 ಲಕ್ಷ ರೂಪಾಯಿ ಬರುತ್ತದೆ. ವೀರ್ಯ ಸಂವರ್ಧನಾ ಕೇಂದ್ರ ಸ್ಥಾಪನೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ 10 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಹಾಕಿದ್ದ ಖರ್ಚು ಎಂದು ಬಂದಿದೆ. ಒಂದು ಸ್ಟಿಕ್ ವೀರ್ಯಕ್ಕೆ 1 ಸಾವಿರ ರೂಪಾಯಿ ಬೆಲೆಯಿರುವ ನನ್ನ ಕೃಷ್ಣನ ಬೆಲೆ ಒಂದು ಕೋಟಿ ಏಕಾಗಬಾರದು. ಕೃಷ್ಣನ ವೀರ್ಯಕ್ಕೆ ತುಂಬಾ ಬೇಡಿಕೆಯಿದೆ. ಒಂದು ಸಾವಿರಕ್ಕೂ ಹೆಚ್ಚು ವೀರ್ಯದ ಸ್ಟಿಕ್ ನ್ನು ಈಗಾಗಲೇ ಮಾರಾಟ ಮಾಡಲಾಗಿದೆ. 170 ಹಸುಗಳಿಗೆ ನೇರವಾಗಿ ಕ್ರಾಸಿಂಗ್ ಮಾಡಲಾಗಿದೆ. ಅದಕ್ಕಾಗಿಯೇ 1 ಕೋಟಿ ಬೆಲೆ ಇದಕ್ಕಿದೆ ಎಂದು ಅಲ್ಲಿ ಸೇರಿದ್ದ ರೈತರಿಗೆ ವಿವರಿಸುತ್ತಿದ್ದರು.

One crore value of Hallikar bull ಹಳ್ಳಿಕಾರ್ ತಳಿ ಹೋರಿಯ ವಿಶೇಷತೆ

ಹಳ್ಳಿಕಾರ್ ತಳಿಯ ಹೋರಿಯೂ ಸಾಮಾನ್ಯ ಹೋರಿಯಂತಲ್ಲ. ಹಳ್ಳಿಕಾರ್ ತಳಿಯ ಹೋರಿಗಳು ಬೇರೆ ಹೋರಿಗಳಿಗಿಂತ ಗಾತ್ರ ಮತ್ತು ಆಕಾರದಲ್ಲಿ ಎತ್ತರ, ಸದೃಢ ಮತ್ತು ಬಲಶಾಲಿಯಾಗಿರುತ್ತದೆ.  3.5 ವರ್ಷದ ಈ ಹಳ್ಳಿಕಾರ್ ತಳಿ ಹೋರಿಯು 7 ಅಡಿಗಿಂತ ಹೆಚ್ಚು ಎತ್ತರವಾಗಿದೆ. ಈಗಾಗಲೇ 65 ಲಕ್ಷಕ್ಕೆ ಈ ಹೋರಿಯನ್ನು ಕೇಳಿದ್ದರೂ ಮಾರಾಟಮಾಡಿಲ್ಲ. 24 ತಿಂಗಳದ ಏಕಲವ್ಯ ಎಂದು ಹೆಸರಿಟ್ಟಿರುವ ಮತ್ತೊಂದು ಹಳ್ಳಿಕಾರ್ ಹೋರಿಯು 6.5 ಅಡಿ ಎತ್ತರವಿದ್ದು, 3 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಏಕಲವ್ಯ ಎಂಬ ಹೋರಿಯ ಮಾಲೀಕ ಬನ್ನೂ ಕೃಷ್ಣಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ  ಒಂದು ಕೋಟಿ ರೂಪಾಯಿ ಬೆಲೆಯ ಹಳ್ಳಿಕಾರ್ ತಳಿಯ ಹೋರಿ, 7 ಲಕ್ಷ ರೂಪಾಯಿ ಬೆಲೆಯ ಆಫ್ರೀಕನ್ ತಳಿಯ ಹೋತ ಹಾಗೂ 11 ಅಡಿಗಿಂತ ಎತ್ತರವಾಗಿ ಬೆಳೆದದ್ದ ಕಬ್ಬು ಸೇರಿದಂತೆ ಇನ್ನಿತರ ನೂತನ ಬೆಳೆ ತಳಿಗಳನ್ನು ನೋಡಲು ಜನ ಜಾತ್ರೆ ಸೇರುತ್ತಿದೆ.

ಏನೇ ಇರಲಿ, ಈ ಹಳ್ಳಿಕಾರ್ ತಳಿಯ ಬೆಲೆಯ ಕುರಿತಂತೆ ಚರ್ಚೆಗಳು ನಡೆಯುತ್ತಿತ್ತು. ಒಂದು ಕೋಟಿ ಬೆಲೆ ನಿಜನಾ…… ಹೌದು ಏಕಾಗಬಾರದು, ಎಂದು ಕೆಲವರು ಹೇಳುತ್ತಿದ್ದರೆ,,,, ಇನ್ನೂ ಕೆಲವರು ಅಷ್ಟಿರಲಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿತ್ತು.  ಕೆಲವು ತಳಿಯ ಎಮ್ಮೆಗಳ ಬೆಲೆ 50 ಲಕ್ಷಕ್ಕೂ ಹೆಚ್ಚಿರುವಾಗ ಹಾಗೂ ಒಂದು ಹೋತಕ್ಕೆ 7 ಲಕ್ಷ ರೂಪಾಯಿ ಇರುವಾಗ ಹಳ್ಳಿಕಾರ್ ತಳಿಯ ಹೋರಿಗೆ 1 ಕೋಟಿ ರೂಪಾಯಿ  ಬೆಲೆ ಏಕಿರಬಾರದು  ಎಂಬ ಚರ್ಚೆಗಳೂ ಕೇಳಿಬಂತು.

Leave a Comment